ಸುಳ್ಳುಗಾರ, ವಚನಭ್ರಷ್ಠ ಸಿಎಂ ಸಿದ್ದರಾಮಯ್ಯ: ಮಾಜಿ ಶಾಸಕ ಎನ್.ಮಹೇಶ್
ಹಸಿ ಸುಳ್ಳುಗಾರ, ವಚನಭ್ರಷ್ಠ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಿಜೆಪಿ ನೂತನ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ವಾಗ್ದಾಳಿ ನಡೆಸಿದರು.
ಚಾಮರಾಜನಗರ (ಡಿ.30): ಹಸಿ ಸುಳ್ಳುಗಾರ, ವಚನಭ್ರಷ್ಠ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಿಜೆಪಿ ನೂತನ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ವಾಗ್ದಾಳಿ ನಡೆಸಿದರು. ನಗರದ ಕುಲುಮೆ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ತಲುಪಿಸಿ 130 ಸ್ಥಾನಗನ್ನು ಗೆದ್ದು. ಅಧಿಕಾರಕ್ಕೆ ಬಂದ 3 ತಿಂಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತು ಫಲಕಗಳಲ್ಲಿ ಹಾಕಿಸಿಕೊಂಡರು. ಆದರೆ 5 ಗ್ಯಾರಂಟಿಗಳನ್ನು ಸಮರ್ಪಕವಾಗಿ ಈಡೇರಿಸದೇ ಹಸಿ ಸುಳ್ಳುಗಾರ, ವಚನಭ್ರಷ್ಠ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹರಿಹಾಯ್ದರು.
‘ನನಗೂ 200 ಯೂನಿಟ್, ನಿನಗೂ 200 ಯೂನಿಟ್ ಉಚಿತ ಎಂದರಲ್ಲ ಸಿದ್ದರಾಮಯ್ಯ. ಇವರು ಖಾಖಾ ಪಾಟೀಲ್, ಎಚ್.ಸಿ.ಮಹದೇವಪ್ಪ 200 ಯೂನಿಟ್ ಉಚಿತ ಕರೆಂಟ್ ಪಡೆಯಲು ಅರ್ಹರೆ?’ ಎಂದು ಕುಟುಕಿದರು. ‘ನನ್ನನ್ನು ರಾಜ್ಯದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡುವುದಕ್ಕೆ ರಾಜ್ಯದ ಎಲ್ಲ ಮುಖಂಡರು, ರಾಷ್ಟ್ರೀಯ ನಾಯಕರು ಒಪ್ಪಿಗೆಕೊಟ್ಟಿದ್ದಾರೆ. ನಾನು ಅಲ್ಲದೆ 10 ಮಂದಿ ಉಪಾಧ್ಯಕ್ಷರನ್ನು ಅಳೆದು ತೂಗಿ ಪ್ರಾದೇಶಿಕ ಸಮಾನತೆ ಕೊಡಬೇಕು. ಸಾಮಾಜಿಕ ಸಮಾನತೆ ಕೊಡಬೇಕು ಎಂದು ಹೇಳಿ ತುಂಬಾ ಲೆಕ್ಕಾಚಾರ ಈ ಟೀಂ ಆಯ್ಕೆ ಮಾಡಿದ್ದಾರೆ. ಯಾವುದೇ ಟೀಂ ಮಾಡುವಾಗ ಅಸಮಾಧಾನ ಇದ್ದೇ ಇರುತ್ತದೆ. ತುಂಬಾ ಕಷ್ಠ ಇದೆ. ಈ ಟೀಂ ರಾಜ್ಯದ, ಕೇಂದ್ರ ವರಿಷ್ಠರು ಬೆಂಬಲ ಕೊಟ್ಟಿದ್ದಾರೆ. ಇದಕ್ಕೆ ಎಲ್ಲರ ಬೆಂಬಲ ಸಹಕಾರ ಅಗತ್ಯವಾಗಿದೆ. ನಾನು ಬಿಜೆಪಿಯಲ್ಲಿರುವುದು ನನ್ನ ಸೌಭಾಗ್ಯ’ ಎಂದರು.
ಸಿದ್ದು ಸರ್ಕಾರದ ಯೋಜನೆಯಿಂದ ಈ ವರ್ಷ 50 ಲಕ್ಷ ಮಂದಿ ಭಕ್ತರಿಂದ ಮಹದೇಶ್ವರನ ದರ್ಶನ!
‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಕ್ಕೆ 28 ಸ್ಥಾನವನ್ನು ಗೆಲ್ಲುವುದಾಗಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಘೋಷಣೆ ಮಾಡಿದ್ದಾರೆ. ಅದರಂತೆ ನಾವೆಲ್ಲರೂ ಸಂಘಟಿತರಾಗಿ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಚಾಮರಾಜನಗರ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ 28 ಕ್ಷೇತ್ರಗಳಲ್ಲಿ ಕಮಲವನ್ನು ಗೆಲ್ಲಿಸಲು ಸಂಕಲ್ಪ ಮಾಡೋಣ’ ಎಂದರು. ‘ಬಿಜೆಪಿ, ಜೆಡಿಎಸ್ ಮೈತ್ರಿಯಾಗಿದ್ದು, ಎರಡು ಪಕ್ಷಗಳು ಹೋರಾಟ ಮಾಡಿ 28 ಸ್ಥಾನಗಳನ್ನು ಗೆಲ್ಲುತ್ತೇವೆ. ಇದು ನಮ್ಮ ಜವಾಬ್ದಾರಿ, ನಾವು ಕೈಗೊಂಡಿರುವ ಸಂಕಲ್ಪ ಮಾಡಿದ್ದೇನೆ’ ಎಂದರು.
ಖರ್ಗೆರನ್ನು ಸಿಎಂ ಮಾಡಲಿಲ್ಲ, ಇನ್ನು ಪಿಎಂ ಮಾಡ್ತಾರಾ?: ಕೇಂದ್ರ ಸಚಿವ ನಾರಾಯಣಸ್ವಾಮಿ
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣಪ್ರಸಾದ್, ಮಾಜಿ ಶಾಸಕರಾದ ಎಸ್.ಬಾಲರಾಜ್, ನಿರಂಜನ್ ಕುಮಾರ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಮಾಜಿ ಅಧ್ಯಕ್ಷ ಆರ್. ಸುಂದರ್, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಮಂಗಲಶಿವಕುಮಾರ್, ನಾಗಶ್ರೀಪ್ರತಾಪ್, ಮಹದೇವಸ್ವಾಮಿ, ಮುಖಂಡ ನೂರೊಂದುಶೆಟ್ಟಿ, ಡಾ.ಎ.ಆರ್.ಬಾಬು, ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡ್ನಾಕೂಡಪ್ರಕಾಶ್, ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಜಯಸುಂದರ್, ನಗರ ಮಂಡಲ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಶಿವು ರಾಮಸಮುದ್ರ ಹಾಜರಿದ್ದರು.