'ಧಾರವಾಡ-ಬೆಂಗ್ಳೂರು ಪ್ರಯಾಣ ಅವಧಿ ಐದು ಗಂಟೆ ಮಾತ್ರ'
* ಧಾರವಾಡದಿಂದ ಬೆಂಗಳೂರಿಗೆ ಐದು ಗಂಟೆ ಚಲಿಸುವ ಒಂದೇ ಮಾತರಂ ರೈಲು
* ಬಿಜೆಪಿ ಸರ್ಕಾರದಲ್ಲಿ ಪ್ರಸ್ತುತ ದಿನಕ್ಕೆ 37 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
* ಅಂತಿಮ ಹಂತಕ್ಕೆ ಬಂದ ಹುಬ್ಬಳ್ಳಿ-ಬೆಂಗಳೂರು ರೈಲ್ವೆ ದ್ವಿಮಾರ್ಗ ಕಾಮಗಾರಿ
ಧಾರವಾಡ(ಸೆ.27): ಧಾರವಾಡ-ಬೆಂಗಳೂರು(Dharwad-Bengaluru) ಮಧ್ಯೆ ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಳಿಕ ಬರೀ ಐದು ಗಂಟೆಗಳಲ್ಲಿ ಚಲಿಸಲಿರುವ ಒಂದೇ ಮಾತರಂ ಹೆಸರಿನ ಹೊಸ ರೈಲು ಬಿಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಇಲ್ಲಿ ಭರವಸೆ ನೀಡಿದ್ದಾರೆ.
13.79 ಕೋಟಿ ವೆಚ್ಚದಲ್ಲಿ ಕಲ್ಯಾಣ ನಗರದಲ್ಲಿ ಲೆವಲ್ ಕ್ರಾಸಿಂಗ್ ಗೇಟ್ ಸಂಖ್ಯೆ 297ರ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅವರು, ಹುಬ್ಬಳ್ಳಿ-ಬೆಂಗಳೂರು ರೈಲ್ವೆ ದ್ವಿಮಾರ್ಗ (ಡಬಲಿಂಗ್) ಕಾಮಗಾರಿ ಹಾಗೂ ವಿದ್ಯುದೀಕರಣ ಅಂತಿಮ ಹಂತಕ್ಕೆ ಬಂದಿದ್ದು, ಇನ್ನೆರೆಡು ವರ್ಷಗಳಲ್ಲಿ ಧಾರವಾಡ ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲು ಮಾರ್ಗದ ಮೂಲಕ ಐದು ಗಂಟೆಗಳಲ್ಲಿ ಪ್ರಯಾಣಿಸಬಹುದು. ಪ್ರಸ್ತುತ ರೈಲ್ವೆ ದ್ವಿಮಾರ್ಗ ಕಾಮಗಾರಿಯು ಚಿಕ್ಕಜಾಜೂರವರೆಗೆ ಆಗಿದ್ದು, 2023ರ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅಲ್ಲದೇ, ಪ್ರಸ್ತುತ ಧಾರವಾಡ-ಬೆಂಗಳೂರು ರೈಲು ಅರಸೀಕೆರೆ, ಬೀರೂರು ಮೂಲಕ ಹಾಯ್ದು ಹೋಗುತ್ತಿದ್ದು, ಅದನ್ನು ಬದಲಿಸಿ ರಾಷ್ಟ್ರೀಯ ಹೆದ್ದಾರಿಗುಂಟ ನೇರವಾಗಿ ತುಮಕೂರು ಮೂಲಕ ಬೆಂಗಳೂರಿಗೆ ಹೋಗಲಿದೆ ಎಂದರು.
ಕಾಂಗ್ರೆಸ್(Congress) ಸರ್ಕಾರದ ಅವಧಿಯಲ್ಲಿ ಬರೀ ರೈಲು ಬಿಡುವುದನ್ನೆ ಮಾಡಿದೆಯೇ ಹೊರತು ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದ ಸಚಿವ ಜೋಶಿ, ಬರುವ ನಾಲ್ಕು ವರ್ಷಗಳಲ್ಲಿ ರೈಲ್ವೆ ಅಭಿವೃದ್ಧಿಗಾಗಿ 100 ಲಕ್ಷ ಕೋಟಿ ವೆಚ್ಚ ಮಾಡುವ ಗುರಿಯನ್ನು ಹೊಂದಲಾಗಿದೆ. ಜತೆಗೆ ಕಾಂಗ್ರೆಸ್ ಸರ್ಕಾರ ದಿನಕ್ಕೆ 11 ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದು, ಕೇಂದ್ರ ಬಿಜೆಪಿ(BJP) ಸರ್ಕಾರವು ಪ್ರಸ್ತುತ ದಿನಕ್ಕೆ 37 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿದೆ ಎಂದರು.
ಭಾರತ್ ಬಂದ್ ಕರೆ ನೀಡಿದವರಲ್ಲಿ ರೈತ ಮುಖಂಡರಿಲ್ಲ: ಕೇಂದ್ರ ಸಚಿವ ಜೋಶಿ
ಧಾರವಾಡ ರೈಲು ನಿಲ್ದಾಣ ಬಗ್ಗೆ ಮಾತನಾಡಿದ ಸಚಿವ ಜೋಶಿ, 20 ಕೋಟಿ ವೆಚ್ಚದಲ್ಲಿ ಧಾರವಾಡ ಸಂಸ್ಕೃತಿ ಬಿಂಬಿಸುವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ, ಸಂಗೀತಗಾರರ ಭಾವಚಿತ್ರವುಳ್ಳ ಅಭಿವೃದ್ಧಿ ಕಾರ್ಯ ಅದ್ಭುತವಾಗಿದೆ. ಸದ್ಯದಲ್ಲಿಯೇ ಪಾದಚಾರಿಗಳ ಮೇಲ್ಸೇತುವೆ ಸಹ ಮಾಡಲಾಗುವುದು ಎಂಬ ಭರವಸೆ ನೀಡಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಬಹಳ ವರ್ಷಗಳ ನಂತರದಲ್ಲಿ ಕಲ್ಯಾಣನಗರ, ಶ್ರೀರಾಮನಗರ ಮತ್ತು ಕವಿವಿಗೆ ಹೋಗುವ ಜನರ ಬೇಡಿಕೆ ಈಡೇರಿದೆ. 2022ರ ಡಿಸೆಂಬರ್ ಒಳಗೆ ಈ ಮೇಲ್ಸೇತುವೆ ಕಾಮಗಾರಿ ಮುಕ್ತಾಯವಾಗಲಿದೆ ಎಂದರು.
ರೈಲ್ವೆ ಇಲಾಖೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಮಾತನಾಡಿ, ಮಾನವರಹಿತ ರೈಲ್ವೆ ಕ್ರಾಸಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಯೋಜನೆ ಹೊಂದಿದ್ದೇವೆ. ರಸ್ತೆ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ 117 ಕೆಳಸೇತುವೆ ಹಾಗೂ 30 ರಸ್ತೆ ಮೇಲ್ಸೇತುವೆ ನಿರ್ಮಿಸಲಾಗಿದೆ. ಈ ವರ್ಷ 16 ಮೇಲ್ಸೇತುವೆ ಹಾಗೂ 56 ಕೆಳಸೇತುವೆ ನಿರ್ಮಿಸಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ನೈಋುತ್ಯ ರೈಲ್ವೆ 176 ಕಿ.ಮೀ. ದ್ವಿಮಾರ್ಗ ಕಾಮಗಾರಿ ಹಾಗೂ 521 ಕಿ.ಮೀ. ವಿದ್ಯುದೀಕರಣ ಕಾಮಗಾರಿ ಮಾಡಿದೆ. ಪ್ರಸಕ್ತ ವರ್ಷಕ್ಕೆ 270 ಕಿ.ಮೀ. ರೈಲು ದ್ವಿಮಾರ್ಗ ಹಾಗೂ 720 ವಿದ್ಯುದ್ಯೀಕರಣದ ಗುರಿ ಹೊಂದಿದೆ ಎಂಬ ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಶಾಸಕ ಅಮೃತ ದೇಸಾಯಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಜ್ಯೋತಿ ಪಾಟೀಲ, ಕವಿತಾ ಕಬ್ಬೇರ ಹಾಗೂ ಗುತ್ತಿಗೆದಾರ ಅರವಿಂದ ಮಾಳಖೇಡ ಇದ್ದರು.