*  ಕಾಲಾ ಕಾನೂನು ಎಲ್ಲಿದೆ? ಕಾಯ್ದೆಗಳಲ್ಲಿ ಏನು ತಪ್ಪಿದೆ? *  ಮೋದಿ ಸರ್ಕಾರದಲ್ಲಿ ಕಳೆದ 7 ವರ್ಷದಲ್ಲಿ ಬೆಲೆ ಏರಿಕೆ ಆಗಿಲ್ಲ*  ಭಾರತ್‌ ಬಂದ್‌ ಕರೆ ನೀಡಿದವರಿಗೆ ದೇವರು ಸದ್ಬುದ್ಧಿ ನೀಡಲಿ 

ಹುಬ್ಬಳ್ಳಿ(ಸೆ.26): ಕೃಷಿ ಕಾಯ್ದೆ ವಿರೋಧಿಸಿ ಭಾರತ್‌ ಬಂದ್‌ ಕರೆ ನೀಡಿದ್ದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಂದ್‌ಗೆ ಕರೆ ನೀಡಿದವರಲ್ಲಿ ರೈತ ಮುಖಂಡರಿಲ್ಲ. ಕೃಷಿ ಕಾಯ್ದೆಗಳು ರೈತ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಹಳಷ್ಟು ಬಾರಿ ಭಾರತ್‌ ಬಂದ್‌(Bharath Bandh) ಕರೆ ನೀಡಿದ್ದಾರೆ. ಕೃಷಿ ಕಾಯ್ದೆ ರೈತರ ವಿರೋಧಿ ಎಂದು ಹೇಳುತ್ತಾರೆ. ‘ಕಾಲಾ ಕಾನೂನು’ ಎಂದೆಲ್ಲ ಟೀಕಿಸುತ್ತಾರೆ. ಆದರೆ ಕಾಲಾ ಕಾನೂನು ಎಲ್ಲಿದೆ? ಕಾಯ್ದೆಗಳಲ್ಲಿ ಏನು ತಪ್ಪಿದೆ? ಎಂಬುದನ್ನು ತಿಳಿಸುವುದಿಲ್ಲ ಎಂದರು.

ಧಾರವಾಡ: ಕೇಂದ್ರ ಸಚಿವ ಜೋಶಿ ಭಾವಚಿತ್ರಕ್ಕೆ ಮಸಿ

ಪಂಜಾಬ್‌(Punjab) ಹೊರತುಪಡಿಸಿ ಎಲ್ಲಿಯೂ ಕೃಷಿ ಕಾಯ್ದೆಗಳಿಗೆ ವಿರೋಧ ಮಾಡುತ್ತಿಲ್ಲ ಎಂದ ಅವರು, ಭಾರತ್‌ ಬಂದ್‌ ಕರೆ ನೀಡಿದವರಿಗೆ ದೇವರು ಸದ್ಬುದ್ಧಿ ನೀಡಲಿ. ಕೃಷಿ ಕಾಯ್ದೆ ವಿಚಾರದಲ್ಲಿ ಸ್ವಾಮಿನಾಥನ್‌ ಅವರೇ ವರದಿ ನೀಡಿದ್ದಾರೆ. ಭಾರತ್‌ ಬಂದ್‌ ಕರೆಯಲ್ಲಿ ರೈತ ಮುಖಂಡರಿಲ್ಲ ಎಂದು ನುಡಿದರು.

ಬೆಲೆ ಏರಿಕೆ ವಿಚಾರದ ಬಗ್ಗೆ ಮೊನ್ನೆ ನೋಟಿಸ್‌ ನೀಡಿ ಚರ್ಚೆ ಮಾಡಿದ್ದಾರೆ. ಆದರೆ ಕಾಂಗ್ರೆಸ್‌(Congress) ಸರ್ಕಾರ ಇದ್ದಾಗ ಪ್ರತಿ ವರ್ಷ ಏರಿಕೆ ಆಗಿದೆ. ಕಾಂಗ್ರೆಸ್‌ ಲೂಟಿ ಮಾಡಿದೆ. ಮೋದಿ ನೇತೃತ್ವದ ಸರ್ಕಾರದಲ್ಲಿ ಕಳೆದ 7 ವರ್ಷದಲ್ಲಿ ಬೆಲೆ ಏರಿಕೆ ಆಗಿಲ್ಲ. ಈಗ ಹಲವು ವಿಚಾರದಲ್ಲಿ ಬೆಲೆ ಇಳಿಕೆಯಾಗುತ್ತಿದೆ. ಕೋವಿಡ್‌(Covid19) ಹಿನ್ನೆಲೆಯಲ್ಲಿ ಕೆಲವು ಬೆಲೆ ಏರಿಕೆ ಆಗಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿಮೆಯಾಗುತ್ತೆ. ಆ ನಂಬಿಕೆ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ ಎಂದು ನುಡಿದರು.