*  ಪೇಟಿಎಂ ಮೊಬೈಲ್‌ ಆ್ಯಪ್‌ ಮೂಲಕ ಕ್ಯೂಆರ್‌ ಕೋಡ್‌ ಟಿಕೆಟ್‌ ಪಡೆಯಿರಿ*  ಗೇಟಲ್ಲಿ ಸ್ಕ್ಯಾನ್‌ ಮಾಡಿ ಪ್ರಯಾಣಿಸಿ*  ಕ್ಯೂಆರ್‌ ಕೋಡ್‌ಗೆ 1 ದಿನ ಮಾನ್ಯತೆ 

ಬೆಂಗಳೂರು(ಜೂ.10): ಮೆಟ್ರೋ ರೈಲು ಪ್ರಯಾಣಿಕರಿಗೆ ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ ಒದಗಿಸಲು ಬೆಂಗಳೂರು ಮೆಟ್ರೋ ನಿಗಮವು ಪೇಟಿಎಂ ಜೊತೆ ಮಾತುಕತೆ ನಡೆಸಿದೆ.

ನಗದು ರಹಿತ ಪ್ರಯಾಣವನ್ನು ಉತ್ತೇಜಿಸುವ ಮತ್ತು ಟೋಕನ್‌ ಕೌಂಟರ್‌ಗಳ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ ನೀಡಲು ಮೆಟ್ರೋ ನಿಗಮ ಮುಂದಾಗಿದೆ. ಈ ನಿಟ್ಟಿನಲ್ಲಿ ಪೇಟಿಎಂ ಜೊತೆ ಮಾತುಕತೆ ನಡೆದಿದ್ದು, ಯೋಜನೆ ಅಂತಿಮಗೊಂಡಿದೆ ಎಂದು ತಿಳಿದುಬಂದಿದೆ.

ಬೊಮ್ಮಸಂದ್ರದಿಂದ ಹೊಸೂರುವರೆಗೆ ವಿಸ್ತರಣೆಯಾಗುತ್ತಾ ನಮ್ಮ ಮೆಟ್ರೋ?

ಪೇಟಿಎಂ ಮೊಬೈಲ್‌ ಆ್ಯಪ್‌ ಮೂಲಕ ಕ್ಯೂಆರ್‌ ಕೋಡ್‌ ಟಿಕೆಟ್‌ ಪಡೆದುಕೊಂಡರೆ ಅದನ್ನು ಅಟೋಮ್ಯಾಟಿಕ್‌ ಫೇರ್‌ ಕಲೆಕ್ಷನ್‌ ಗೇಟ್‌ ಬಳಿ ಸ್ಕ್ಯಾನ್‌ ಮಾಡಿ ಪ್ರಯಾಣ ಮಾಡಬಹುದಾಗಿದೆ. ಈ ಕ್ಯೂಆರ್‌ ಕೋಡ್‌ಗೆ ಒಂದು ದಿನ ಮಾತ್ರ ಮಾನ್ಯತೆ ಇರುತ್ತದೆ.

ಜನ ದಟ್ಟಣೆಯ ಅವಧಿಯಲ್ಲಿ ಕೆಲ ನಿಲ್ದಾಣಗಳಲ್ಲಿ ಟೋಕನ್‌ಗಾಗಿ ಪ್ರಯಾಣಿಕರು ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಮೆಟ್ರೋ ನಿಗಮ ಈ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಮೆಟ್ರೋ ವ್ಯವಸ್ಥೆ ಆರಂಭವಾದಗಿನಿಂದಲೂ ಸ್ಮಾರ್ಟ್‌ ಕಾರ್ಡ್‌ ಮತ್ತು ಟೋಕನ್‌ ಬಳಸಿ ಮೆಟ್ರೋದಲ್ಲಿ ಸಂಚರಿಸುವ ಅವಕಾಶ ನೀಡಲಾಗಿದೆ. ಕಳೆದ ಎರಡು ತಿಂಗಳ ಹಿಂದಿನಿಂದ ಪಾಸ್‌ ವ್ಯವಸ್ಥೆ ಜಾರಿಗೆ ಬಂದಿದ್ದು ಒಂದು, ಮೂರು ಮತ್ತು ಐದು ದಿನದ ಪಾಸ್‌ ಲಭ್ಯವಿದೆ. ಸದ್ಯ ದೈನಂದಿನ ಪ್ರಯಾಣಿಕರಲ್ಲಿ ಸುಮಾರು ಶೇ.70 ಮಂದಿ ಸ್ಮಾರ್ಟ್‌ ಕಾರ್ಡ್‌ ಬಳಸುತ್ತಿದ್ದಾರೆ. ಉಳಿದ ಶೇ.30 ಮಂದಿ ಟೋಕನ್‌ ಬಳಸುತ್ತಿದ್ದಾರೆ. ಟೋಕನ್‌ ಬಳಕೆದಾರರನ್ನು ಕ್ಯೂಆರ್‌ ಕೋಡ್‌ ಟಿಕೆಟ್‌ನತ್ತ ಸೆಳೆಯುವ ಉದ್ದೇಶವನ್ನು ಮೆಟ್ರೋ ನಿಗಮ ಹೊಂದಿದೆ.