ಮೈಸೂರು: ಕಸಾಯಿಖಾನೆಗೆ ಗೋವುಗಳ ಸಾಗಣೆ, ವಿಡಿಯೋ ವೈರಲ್
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಈ ರೀತಿಯ ಅಕ್ರಮ ದಂಧೆ ನಡೆಯುತ್ತಿರುವುದು ಭಕ್ತರನ್ನು ಘಾಸಿಗೊಳಿಸಿದೆ.
ನಂಜನಗೂಡು(ಆ.05): ಗರಳಪುರಿ ಕ್ಷೇತ್ರಾಧಿಪತಿ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತರು ಹರಕೆ ರೂಪದಲ್ಲಿ ಅರ್ಪಿಸುವ ಗೋವುಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಸಾಗಣೆ ಮಾಡುವ ವ್ಯವಸ್ಥಿತ ಜಾಲ ಅವ್ಯಾಹತವಾಗಿದ್ದು, ಬುಧವಾರ ತಡರಾತ್ರಿ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಇದೀಗ ಅದು ವೈರಲ್ ಆಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಈ ರೀತಿಯ ಅಕ್ರಮ ದಂಧೆ ನಡೆಯುತ್ತಿರುವುದು ಭಕ್ತರನ್ನು ಘಾಸಿಗೊಳಿಸಿದೆ. ಇನ್ನು ಈ ಕಟುಕರ ಜಾಲವನ್ನು ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸಿ ಯುವ ಬ್ರಿಗೇಡ್ ವಿಭಾಗೀಯ ಸಂಚಾಲಕ ಎಸ್. ಚಂದ್ರಶೇಖರ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶ್ರೀಕಂಠೇಶ್ವರಸ್ವಾಮಿ ದೇಗುಲದ ಹಿಂಭಾಗ ಅಂಗಡಿ ಬೀದಿಯಲ್ಲಿ ಬುಧವಾರ ತಡರಾತ್ರಿ 1 ಗಂಟೆ ಸುಮಾರಿನಲ್ಲಿ ಕಟುಕರ ತಂಡ ಗೋವುಗಳನ್ನು ತುಂಬಿಕೊಂಡು ಹೋಗಲು ನಂಬರ್ ಪ್ಲೇಟ್ ಇಲ್ಲದ ಗೂಡ್‌್ಸ ವಾಹನದಲ್ಲಿ ಬಂದು ಹೊಂಚು ಹಾಕಿದ್ದಾರೆ. ಹಗ್ಗದ ಸಹಾಯದಿಂದ ಅವುಗಳನ್ನು ಸೆರೆ ಹಿಡಿದು ವಾಹನದಲ್ಲಿ ತುಂಬಿದ್ದಾರೆ. ಈ ವೇಳೆ ಗೋವುಗಳು ಕಿರುಚಾಡುವುದನ್ನು ಕೇಳಿ ಎಚ್ಚರಗೊಂಡ ಸ್ಥಳೀಯರು ಹೊರಬಂದು ನೋಡಿದಾಗ ಗೋವುಗಳನ್ನು ಸೆರೆ ಹಿಡಿದು ತುಂಬುತ್ತಿದ್ದ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವೇಳೆ ಸ್ಥಳೀಯರು ಪ್ರಶ್ನಿಸುತ್ತಿದ್ದಂತೆ ಗಾಬರಿಗೊಂಡ ಕಟುಕರು ವಾಹನ ಸವಾರಿ ಮಾಡಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ವಾಹನದ ಒಳಗಡೆ ಸುಮಾರು ಮೂರ್ನಾಲ್ಕು ಗೋವುಗಳನ್ನು ತುಂಬಿ ತೆಗೆದುಕೊಂಡು ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸಿ.ಟಿ.ರವಿ ಕ್ಷೇತ್ರದಲ್ಲಿ ಬುಲ್ಡೋಜರ್ ಸದ್ದು, ಅಕ್ರಮ ಗೋ ಮಾಂಸ ಅಡ್ಡೆಗಳ ಮೇಲೆ ದಾಳಿ
ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಹಿಂದುಪರ ಸಂಘಟನೆ ಸೇರಿದಂತೆ ದೇಗುಲದ ಭಕ್ತವಲಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಶ್ರೀಕಂಠೇಶ್ವರಸ್ವಾಮಿಗೆ ಹರಕೆ ಹೊತ್ತ ಭಕ್ತರು ಲಿಂಗ ಮುದ್ರೆ ಒತ್ತಿ ಆಕಳುಗಳನ್ನು ದೇಗುಲದ ಬಳಿ ಬಿಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಗೋಶಾಲೆ ತೆರೆಯಲಿ:
ಶ್ರೀಕಂಠೇಶ್ವರಸ್ವಾಮಿಗೆ ಹರಕೆ ಹೊತ್ತ ಭಕ್ತರು ಲಿಂಗ ಮುದ್ರೆ ಒತ್ತಿ ಕರುಗಳನ್ನು ಅರ್ಪಿಸುವ ಸಂಪ್ರದಾಯ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಮಾಸಿಕ ಕೋಟ್ಯಾಂತರ ರು. ಆದಾಯವಿರುವ ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿ ಗೋಶಾಲೆ ತೆರೆದು ಅವುಗಳ ಸಾಕಾಣಿಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮವಹಿಸಬೇಕು ಎಂದು ಯುವ ಬ್ರಿಗೇಡ್ ವಿಭಾಗೀಯ ಸಂಚಾಲಕ ಎಸ್. ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಇನ್ನು ಮಾಂಸಕ್ಕಾಗಿ ಗೋವುಗಳನ್ನು ಹತ್ಯೆ ಮಾಡುವ ಸಲುವಾಗಿ ರಾತ್ರೋರಾತ್ರಿ ಹೊಂಚು ಹಾಕಿ ಸಾಗಾಣೆ ಮಾಡುವ ದುರುಳರನ್ನು ಪತ್ತೆ ಹಚ್ಚಿ ಸದೆಬಡಿಯಬೇಕು. ಇಂತಹವರ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ದೇಗುಲದ ಗೋವುಗಳ ರಕ್ಷಣೆಗಾಗಿ ಗೋಶಾಲೆ ತೆರೆಯುವಂತೆ ಆಗ್ರಹಿಸಿ ಶೀಘ್ರದಲ್ಲೇ ಸಹಿ ಸಂಗ್ರಹ ಅಭಿಯಾನ ಮೂಲಕ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.