* ಏಪ್ರಿಲ್‌, ಮೇ ತಿಂಗಳ ಸಂಬಳ ನೀಡದ ಸಾರಿಗೆ ಇಲಾಖೆ * ಸಂಬಳ ನೀಡುವಂತೆ ಸಾರಿಗೆ ನಿಗಮಗಳಿಗೆ ಜೂ. 6ರ ವರೆಗೆ ಗಡುವು ನೀಡಿದ ನೌಕರರ ಕೂಟ* ಸುದ್ದಿ​ಗೋ​ಷ್ಠಿ​ಯಲ್ಲಿ ಕಣ್ಣೀರು ಹಾಕಿದ ಸಾರಿಗೆ ನೌ​ಕ​ರ​ರು 

ಧಾರವಾಡ(ಜೂ.04): ಒಬ್ಬರಿಗೆ 00, ಇನ್ನೊಬ್ಬರಿಗೆ 400, ಮತ್ತೊಬ್ಬರಿಗೆ 1100, ಮಗದೊಬ್ಬರಿಗೆ 1600.. ಇದು ಸಾರಿಗೆ ಸಂಸ್ಥೆಯ ನೌಕರರ ತಿಂಗಳ ಸಂಬಳದ ಅಂಕಿ ಸಂಖ್ಯೆ.

ನಮ್ಮ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸಿದ್ದರ ಫಲವಾಗಿ ದ್ವೇಷ ಭಾವನೆಯಿಂದ ಸಾರಿಗೆ ಇಲಾಖೆ ಅಧಿಕಾರಿಗಳು ನಮಗೆ ಏಪ್ರಿಲ್‌ ಹಾಗೂ ಮೇ ತಿಂಗಳಿನ ಸಂಬಳವನ್ನು ಈ ರೀತಿ ಹಾಕಿದ್ದಾರೆ. ಪ್ರತಿ ತಿಂಗಳು 28 ಸಾವಿರ ಸಂಬಳ ತೆಗೆದುಕೊಳ್ಳುವ ನಾವು 1500ಕ್ಕೆ ಜೀವನ ನಡೆಸುವುದಾದರೂ ಹೇಗೆ ? ಎಂದು ಪ್ರಶ್ನಿಸಿದ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಸುದ್ದಿಗೋಷ್ಠಿಯಲ್ಲೇ ಕಣ್ಣೀರು ಹಾಕಿದ ಘಟನೆ ನಡೆದಿದೆ. 

ಇದು ಬರೀ ವಾಕರಾರ ಸಂಸ್ಥೆಯಲ್ಲಿ ಮಾತ್ರವಲ್ಲದೇ ಈಶಾನ್ಯ ಭಾಗದ ನೌಕರರಿಗೂ ಈ ರೀತಿ ವೇತನ ತಾರತಮ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಧಾರವಾಡದಲ್ಲಿ ನೌಕರರ ಕೂಟದ ಗೌರವಾಧ್ಯಕ್ಷ ಪಿ.ಎಚ್‌. ನೀರಲಕೇರಿ, ನೌಕರರಿಗೆ ವೇತನ ತಾರತಮ್ಯ ಮಾಡದೇ ಏಪ್ರಿಲ್‌ ತಿಂಗಳ ಹಾಗೂ ಲಾಕ್‌ಡೌನ್‌ ಸಮಯದಲ್ಲಿನ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೊರೋನಾ 2ನೇ ಅಲೆ: 120 ಸಾರಿಗೆ ನೌಕರರು ಸೋಂಕಿಗೆ ಬಲಿ

ಕಳೆದ ಏಪ್ರಿಲ್‌ 7 ರಿಂದ 22ರ ವರೆಗೆ ರಾಜ್ಯಾದ್ಯಂತ ನೌಕರರ ಮುಷ್ಕರ ನಡೆಯಿತು. ಈ ಸಂದರ್ಭದಲ್ಲಿ ನ್ಯಾಯಾಲಯ ಮಧ್ಯೆ ಪ್ರವೇಶಿಸಿತು. ನ್ಯಾಯಾಲಯದ ಅಭಿಪ್ರಾಯದಂತೆ ಮುಷ್ಕರ ವಾಪಸ್‌ ಪಡೆಯಲಾಯಿತು. ಬಳಿಕ ನೌಕರರು ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ಕಾರ್ಯಸ್ಥಳದ ಅಧಿಕಾರಿಗಳು ಕೋವಿಡ್‌ ಪರೀಕ್ಷೆ ಮತ್ತು ಲಸಿಕೆ ಹಾಕಿಸಿಕೊಂಡು ಬರುವಂತೆ ಮೌಖಿಕವಾಗಿ ಸೂಚಿಸಿದ್ದಾರೆ. ಇದರಿಂದಾಗಿ ನೌಕರರು ಪರೀಕ್ಷೆ ಮಾಡಿಸಿಕೊಂಡು ಕರ್ತವ್ಯಕ್ಕೆ ಹೋಗಲು 2-3 ದಿನ ಕಳೆದಿದೆ. ನಂತರ ಕರ್ತವ್ಯಕ್ಕೆ ತೆರಳುವ ಅಂದರೆ ಏ. 24 ಮತ್ತು 25 ರಂದು ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿತು. ನಂತರ ಸೋಮವಾರ ಕರ್ತವ್ಯಕ್ಕೆ ನೌಕರರು ಹಾಜರಾಗಲು ಹೋದರೂ ಅಧಿಕಾರಿಗಳು ಕರ್ತವ್ಯ ನೀಡದೇ ವಾಪಸ್ಸು ಕಳಿಸಿದ್ದಾರೆ. 

ಏ. 27 ರಿಂದ ರಾಜ್ಯಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಲಾಯಿತು. ವಾಸ್ತವ ಹೀಗಿದ್ದರೂ ಪ್ರತಿಭಟನೆ ನಡೆಸಿದ ನೌಕರರ ವಿರುದ್ಧ ಏಪ್ರಿಲ್‌ ಹಾಗೂ ಮೇ ತಿಂಗಳ ಸಂಬಳ ನೀಡದೇ ತಾರತಮ್ಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಂಸ್ಥೆಯ ಅಧಿಕಾರಿಗಳು ಕೆಳ ಹಂತದ ನೌಕರರ ವೇತನವನ್ನು ಸಮರ್ಪಕವಾಗಿ ಪಾವತಿಸದೇ ಪರೋಕ್ಷವಾಗಿ ಶೋಷಣೆ ಮಾಡುತ್ತಿದ್ದಾರೆ ಎಂದ ನೀರಲಕೇರಿ, ನೌಕರರ ಕಲ್ಯಾಣಾಧಿಕಾರಿ ಪಿ.ವೈ. ನಾಯಕ ನೌಕರರ ಕಲ್ಯಾಣದ ಬದಲು ಎಂಡಿ ಕಲ್ಯಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನೌಕರರ ಏಪ್ರಿಲ್‌ ಮತ್ತು ಮೇ ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕು. ಜೊತೆಗೆ ಕೋವಿಡ್‌ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಕರಾರಸಾ ಸಂಸ್ಥೆಯ ವ್ಯಾಪ್ತಿಯಲ್ಲಿ ಸುಮಾರು 40 ಕ್ಕೂ ಹೆಚ್ಚು ನೌಕರರು ಸಾವನ್ನಪ್ಪಿದ್ದಾರೆ. ಅವರಿಗೆ ತಲಾ 30 ಲಕ್ಷ ಪರಿಹಾರ ನೀಡಬೇಕು. ಇಲ್ಲದೇ ಹೋದಲ್ಲಿ ಜೂ. 6ರಂದು ಸಾರಿಗೆ ಸಂಸ್ಥೆ ಎಂಡಿ ಕಚೇರಿ ಎದುರು ಧರಣಿ ಮಾಡುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ಸಿದ್ದಣ್ಣ ಕಂಬಾರ, ಶ್ರೀಶೈಲಗೌಡ ಕಮತರ, ನೌಕರರ ಕೂಟದ ಪಿ.ಎಫ್‌. ಕೋಲಕಾರ, ಎಚ್‌.ಎ. ಜಾಗೀರದಾರ, ಬಸವರಾಜ ಕಮ್ಮಾರ, ಸಿ.ಡಿ. ಗುಡಿಮನಿ, ತಿರುಪತಿ ಕೆ, ಚಂದ್ರಣ್ಣ ದಾನಪ್ಪನವರ ಇದ್ದರು.