* ನಾಲ್ಕೂ ಸಾರಿಗೆ ವಿಭಾಗದ ನೌಕರರು ಬಾಧಿತ* ಮೊದಲ ಅಲೆ ವೇಳೆ 110ಕ್ಕೂ ಹೆಚ್ಚು ಮಂದಿ ಸಾವು* ಸೆಮಿಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಬಸ್‌ ಸಂಚಾರ ಸ್ಥಗಿತ 

ಬೆಂಗಳೂರು(ಮೇ.28): ಕೊರೋನಾ ಎರಡನೇ ಅಲೆಯಲ್ಲಿ ಈವರೆಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳು ಸೇರಿದಂತೆ 120ಕ್ಕೂ ಅಧಿಕ ನೌಕರರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಸೆಮಿಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಬಹುತೇಕ ನೌಕರರು ಊರುಗಳಿಗೆ ತೆರಳಿರುವುದರಿಂದ ಮೃತ ನೌಕರರ ಬಗ್ಗೆ ಸಾರಿಗೆ ನಿಗಮಗಳಿಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಸದ್ಯಕ್ಕೆ ದೊರೆತಿರುವ ಪ್ರಾಥಮಿಕ ಮಾಹಿತಿ ಪ್ರಕಾರ ನಾಲ್ಕು ಸಾರಿಗೆ ನಿಗಮಗಳ 120 ನೌಕರರು ಸೋಂಕಿಗೆ ಬಲಿಯಾಗಿದ್ದಾರೆ. ಆದರೆ, ಸೋಂಕಿಗೆ ಮೃತರಾದ ನೌಕರರ ಸಂಖ್ಯೆ 150 ದಾಟಲಿದೆ ಎಂದು ಸಾರಿಗೆ ನೌಕರರ ಮುಂಡರು ಹೇಳುತ್ತಿದ್ದಾರೆ.

"

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಇಕೆಆರ್‌ಟಿಸಿ, ಎನ್‌ಡಬ್ಲೂಕೆಆರ್‌ಟಿಸಿ ನಿಗಮಗಳಲ್ಲಿ ಒಟ್ಟು ಸುಮಾರು 1.30 ಲಕ್ಷ ನೌಕರರು ಇದ್ದಾರೆ. ಸೆಮಿಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಬಸ್‌ ಸಂಚಾರ ಸ್ಥಗಿತವಾಗಿದೆ. ಅಗತ್ಯಸೇವೆಗೆ ನಿಯೋಜಿಸಿರುವ ಬಸ್‌ಗಳಲ್ಲಿ ಸುಮಾರು ಮೂರು ಸಾವಿರ ನೌಕರರು ಮಾತ್ರ ಸದ್ಯಕ್ಕೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ 1.20 ಲಕ್ಷಕ್ಕೂ ಅಧಿಕ ನೌಕರರು ಊರುಗಳಿಗೆ ತೆರಳಿದ್ದಾರೆ. ಕೆಲ ನೌಕರರು ಊರುಗಳಲ್ಲಿ ಇದ್ದಾಗಲೇ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಸೆಮಿಲಾಕ್‌ ಡೌನ್‌ ಮುಗಿದು ಬಸ್‌ ಸಂಚಾರ ಪುನರಾರಂಭವಾದರೆ, ಮೃತ ನೌಕರರ ಸಂಖ್ಯೆ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಸಾರಿಗೆ ನೌಕರರಿಗೆ ಮಿಡಿದ ಸರ್ಕಾರ, ವೇತನ ಪಾವತಿಗೆ ಹಣ

ಮೊದಲ ಅಲೆಯಲ್ಲಿ 110ಕ್ಕೂ ಹೆಚ್ಚು ನೌಕರರು ಸಾವು

ಕೊರೋನಾ ಮೊದಲ ಅಲೆಯಲ್ಲಿ ನಾಲ್ಕು ರಸ್ತೆ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ 110ಕ್ಕೂ ಹೆಚ್ಚು ನೌಕರರು ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ಸಾರಿಗೆ ನೌಕರರು ಕೊರೋನಾ ವಾರಿಯರ್‌ ಗುಂಪಿಗೆ ಸೇರಿರುವುದರಿಂದ ಮೃತ ನೌಕರರ ಕುಟುಂಬಕ್ಕೆ 30 ಲಕ್ಷ ರು. ಪರಿಹಾರ ಘೋಷಿಸಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಾಂಕೇತಿಕವಾಗಿ ಏಳು ಕುಟುಂಬಕ್ಕೆ ಪರಿಹಾರದ ಚೆಕ್‌ ವಿತರಿಸಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona