ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಿತ್ತೂರು ಕೋಟೆ ಆವರಣದಲ್ಲಿ ₹40 ಕೋಟಿ ವೆಚ್ಚದ 'ಫ್ರೀಡಂ ಪಾರ್ಕ್' ನಿರ್ಮಾಣವನ್ನು ಘೋಷಿಸಿದ್ದಾರೆ. ಅಲ್ಲದೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 'ಕಿತ್ತೂರು ರಾಣಿ ಚೆನ್ನಮ್ಮ' ಹೆಸರನ್ನು ಮರುನಾಮಕರಣ ಮಾಡುವುದಾಗಿ ಮತ್ತು ₹520 ಕೋಟಿ ವೆಚ್ಚದ ನೀರಾವರಿ ಯೋಜನೆಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ, ಸ್ವಾಭಿಮಾನ ಹಾಗೂ ತ್ಯಾಗದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಿತ್ತೂರು ಕೋಟೆ ಆವರಣದಲ್ಲಿ ₹40 ಕೋಟಿ ವೆಚ್ಚದಲ್ಲಿ ‘ಫ್ರೀಡಂ ಪಾರ್ಕ್’ ನಿರ್ಮಿಸಲಾಗುವುದು. ಮುಂದಿನ ಬಜೆಟ್ನಲ್ಲಿ ಇದಕ್ಕೆ ಅನುದಾನ ಒದಗಿಸಿ, ತಕ್ಷಣವೇ ಸರ್ಕಾರದ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಘೋಷಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ
ಕಿತ್ತೂರಿನಲ್ಲಿ ಭಾನುವಾರ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡುವ ತೀರ್ಮಾನವನ್ನೂ ಸರ್ಕಾರ ಕೈಗೊಳ್ಳಲಿದೆ ಎಂದು ಪ್ರಕಟಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಕನ್ನಡನಾಡಿನ ದಿಟ್ಟ ಹೋರಾಟಗಾರ್ತಿ. ಕಿತ್ತೂರು ಶೌರ್ಯದ ಕಥೆ ಹೇಳುವ ನೆಲ. ಚನ್ನಮ್ಮನ ಧೈರ್ಯ ಕೇವಲ ಇತಿಹಾಸವಲ್ಲ
ಕಿತ್ತೂರು ಕೋಟೆ ಕೇವಲ ಐತಿಹಾಸಿಕ ಸ್ಮಾರಕವಾಗಿ ಉಳಿಯದೆ, ಮುಂದಿನ ಪೀಳಿಗೆಗೆ ಇತಿಹಾಸವನ್ನು ಪರಿಚಯಿಸುವ ಪ್ರಮುಖ ಪ್ರವಾಸಿ ಕೇಂದ್ರವಾಗಬೇಕು ಎಂಬುದು ಶಾಸಕ ಬಾಬಾಸಾಹೇಬ ಪಾಟೀಲ ಅವರ ಆಶಯವಾಗಿದೆ. ಕೋಟೆಯ ಆವರಣದಲ್ಲಿ ಇತಿಹಾಸವನ್ನು ದೃಶ್ಯಕಾವ್ಯದ ರೂಪದಲ್ಲಿ ಅನಾವರಣಗೊಳಿಸುವ ‘ಫ್ರೀಡಂ ಪಾರ್ಕ್’ ನಿರ್ಮಾಣಕ್ಕೆ ₹40 ಕೋಟಿ ಅಗತ್ಯವಿದೆ ಎಂಬ ಶಾಸಕರ ಮನವಿಗೆ ಸ್ಪಂದಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಚೆನ್ನಮ್ಮ ಹೆಸರಿನಲ್ಲಿ ಸಾರಿಗೆ ನಿಗಮ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು ಕಿತ್ತೂರು ರಾಣಿ ಚೆನ್ನಮ್ಮ ಹೆಸರಿನಲ್ಲಿ ಮರುನಾಮಕರಣ ಮಾಡುವುದು ಕಿತ್ತೂರಿನ ಇತಿಹಾಸ ಮತ್ತು ಚನ್ನಮ್ಮನ ಪರಂಪರೆಗೆ ಸಲ್ಲಿಸುವ ಗೌರವವಾಗಿದೆ. ಅಧಿಕಾರ ಎಂಬುದು ಕೇವಲ ಹುದ್ದೆಯಲ್ಲ
₹520 ಕೋಟಿ ನೀರಾವರಿ ಯೋಜನೆ
ಕಿತ್ತೂರು ಭಾಗದ ರೈತರ ನೀರಾವರಿ ಸಮಸ್ಯೆಗೆ ಸ್ಪಂದಿಸಲು ₹520 ಕೋಟಿ ವೆಚ್ಚದ ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆಗೆ ಅಗತ್ಯ ಅನುದಾನ ನೀಡಲಾಗುವುದು. ತಾವು ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಭಾಗದ ರೈತರು ಯೋಜನೆಗೆ ಮನವಿ ಮಾಡಿದ್ದರು. ಅವರ ಬೇಡಿಕೆಗೆ ಸ್ಪಂದಿಸಿ ಯೋಜನೆ ಮಂಜೂರು ಮಾಡಲಾಗಿದೆ ಎಂದು ಸ್ಮರಿಸಿದರು.
ಇದಲ್ಲದೆ, ಕಿತ್ತೂರು ಕ್ಷೇತ್ರದಲ್ಲಿ ಸುಮಾರು ₹1,000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಡಿ ಸುಮಾರು ₹300 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳು, ನೂರು ಹಾಸಿಗೆಗಳ ಆಸ್ಪತ್ರೆ, ದೇವಸ್ಥಾನಗಳ ಅಭಿವೃದ್ಧಿ ಹಾಗೂ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಉತ್ಸವದ ದೀಪ ಬದುಕಿಗೂ ಬೆಳಕು ನೀಡಲಿ
ಕಿತ್ತೂರು ಉತ್ಸವದ ವೇಳೆ ಬೆಳಗಿಸಿದ ದೀಪ ಕೇವಲ ಉತ್ಸವದ ವೇದಿಕೆಯಲ್ಲಿ ಉರಿಯುವ ದೀಪವಾಗಬಾರದು. ಜನರ ಬದುಕಿನಲ್ಲೂ ಅಭಿವೃದ್ಧಿಯ ಬೆಳಕು ಮೂಡಿಸಬೇಕು. ಕಿತ್ತೂರಿನ ಅಭಿವೃದ್ಧಿಯೇ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಜನರ ಮನೆಬಾಗಿಲಿಗೆ ತೆರಳಿ ಅವರ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಲ್ಪಿಸುವ ಉದ್ದೇಶದಿಂಒದ ‘ಪ್ರಜಾಸೇವೆ’ ಇಲಾಖೆಯನ್ನು ಆರಂಭಿಸಲಾಗಿದೆ. ಶಾಸಕರು ತಿಂಗಳಿಗೆ ಎರಡು ಬಾರಿ ಕ್ಷೇತ್ರದ ಪಂಚಾಯಿತಿ ಹಾಗೂ ಹೋಬಳಿ ಮಟ್ಟಕ್ಕೆ ತೆರಳಿ ಜನರ ಅಹವಾಲು ಆಲಿಸಿ, ಆಸ್ತಿ, ದಾಖಲೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.
ಚೆನ್ನಮ್ಮ ಮಹಿಳೆಯರಿಗೆ ಸ್ಫೂರ್ತಿ
ರಾಣಿ ಚೆನ್ನಮ್ಮ ತ್ಯಾಗ, ಹೋರಾಟ ಮತ್ತು ಧೈರ್ಯದ ಪ್ರತೀಕ. ಅವರ ಬದುಕು ಇಂದಿನ ಮಹಿಳೆಯರಿಗೆ ಮಾದರಿಯಾಗಬೇಕು. ಮಹಿಳೆಯರು ಉದ್ಯಮಿಗಳಾಗಿ, ಸ್ವಾವಲಂಬಿಗಳಾಗಿ ಬೆಳೆಯಬೇಕು ಎಂದು ಹೇಳಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಸೇರಿದಂತೆ ವಿವಿಧ ಯೋಜನೆಗಳ ಪ್ರಯೋಜನವನ್ನು ಜನರಿಗೆ ತಲುಪಿಸಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ನೇರವಾಗಿ ಹಣ ಜಮೆ ಮಾಡುವ ಮೂಲಕ ಕುಟುಂಬಗಳ ಆರ್ಥಿಕ ಬದುಕಿಗೆ ನೆರವಾಗುವ ಪ್ರಯತ್ನ ನಡೆದಿದೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮನ ಪರಂಪರೆ ಕರ್ನಾಟಕದ ಹೆಣ್ಣುಮಕ್ಕಳು ಹಾಗೂ ಯುವಕರಲ್ಲಿ ಶೌರ್ಯ ಮತ್ತು ಸ್ವಾಭಿಮಾನದ ರೂಪದಲ್ಲಿ ಮುಂದುವರಿದಿದೆ. ಬಸವಣ್ಣನ ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಮುಂದುವರಿಸಿಕೊಂಡು ಹೋಗಬೇಕು. ದ್ವೇಷದಿಂದ ಉತ್ತರ ಸಿಗುವುದಿಲ್ಲ
ಜನರು ನೀಡಿರುವ ಅಧಿಕಾರದ ಋಣ ತೀರಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದು ತಮ್ಮ ಕರ್ತವ್ಯ. ಕಿತ್ತೂರು ಕ್ಷೇತ್ರದ ಶಾಸಕರು ರೂಪಿಸುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಡೀ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ. ಕಿತ್ತೂರು ರಾಣಿ ಚನ್ನಮ್ಮ ಎಲ್ಲರ ಬದುಕಿಗೂ ಮಾದರಿಯಾಗಲಿ ಎಂದು ಮುಖ್ಯಮಂತ್ರಿ ಆಶಿಸಿದರು.ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕಾದ್ರೋಳಿಯ ಸೀಮಿಮಠ ಡಾ. ಫಾಲಾಕ್ಷ ಶಿವಯೋಗೇಶ್ವರ ಸ್ವಾಮೀಜಿ,ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ನಿಚ್ಚಣಿಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಸಾನ್ನಿಧ್ಯ ವಹಿಸಿದ್ದರು.
ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರೊ .ಸವಿತಾ ಬೆನ್ನಾಡಿ , ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಶಾಸಕರಾದ ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ, ಆಸೀಫ್ ಸೇಠ್, ಲಕ್ಷ್ಮೀ ಹೆಬ್ಬಾಳಕರ, ಎನ್.ಎಚ್.ಕೋನರಡ್ಡಿ, ವಿಶ್ವಾಸ ವೈದ್ಯ, ಮೋಹನ ಲಿಂಬಿಕಾಯಿ, ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷ ಹಾನಗಲ್ ಸ್ವಾಗತಿಸಿದರು.







