Asianet Suvarna News Asianet Suvarna News

ಬೆಂಗಳೂರಲ್ಲಿ ಮಂಗಳಮುಖಿಯರಿಂದ ಬ್ಯೂಟಿಪಾರ್ಲರ್‌ ಶುರು!

ತೃತೀಯ ಲಿಂಗಿಗಳಿಂದ ‘ಟ್ರಾನ್ಸ್‌ ಟ್ರೆಂಡ್ಜ್‌’ ಹೆಸರಿನ ಬ್ಯೂಟಿಪಾರ್ಲರ್‌| ಮಹಿಳೆಯರು, ಮಕ್ಕಳಿಗೆ ಮೀಸಲು|  ತೃತೀಯ ಲಿಂಗಿಗಳಾದ ನಕ್ಷತ್ರ, ಮಿಲನ, ಮಾನಸ, ಅಂಜಲಿ ಈ ನಾಲ್ವರು ಸೇರಿಕೊಂಡು ಬ್ಯೂಟಿಪಾರ್ಲರ್‌ ಓಪನ್| 

Transgenders Start Beauty Parlor in Bengaluru
Author
Bengaluru, First Published Sep 25, 2020, 9:24 AM IST

ಕಾವೇರಿ ಎಸ್‌.ಎಸ್‌.

ಬೆಂಗಳೂರು(ಸೆ.25): ನಿರ್ಲಕ್ಷಿತ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಸಮಾನ ಮನಸ್ಕರಾದ ತೃತೀಯ ಲಿಂಗಿಗಳೇ ಸೇರಿ ‘ಟ್ರಾನ್ಸ್‌ ಟ್ರೆಂಡ್ಜ್‌’ ಹೆಸರಿನ ಬ್ಯೂಟಿಪಾರ್ಲರ್‌ ಪ್ರಾರಂಭಿಸುತ್ತಿದ್ದಾರೆ.
ತೃತೀಯ ಲಿಂಗಿಗಳು ನಗರದಲ್ಲಿ ಪ್ರಾರಂಭಿಸುತ್ತಿರುವ ಮೊಟ್ಟ ಮೊದಲ ಬ್ಯೂಟಿ ಪಾರ್ಲರ್‌ ಇದಾಗಿದ್ದು, ಇದು ಮಹಿಳೆಯರು ಹಾಗೂ ಮಕ್ಕಳಿಗೆ ಮೀಸಲು.

ತೃತೀಯ ಲಿಂಗಿಗಳಾದ ನಕ್ಷತ್ರ, ಮಿಲನ, ಮಾನಸ, ಅಂಜಲಿ ಈ ನಾಲ್ವರು ಸೇರಿಕೊಂಡು ಬ್ಯೂಟಿಪಾರ್ಲರ್‌ ತೆರೆಯುತ್ತಿದ್ದಾರೆ. ತಮ್ಮ ದುಡಿಮೆ ಹಾಗೂ ಕೆಲ ದಾನಿಗಳ ಸಹಾಯದಿಂದ ಪ್ರಾಥಮಿಕ ಹಂತದಲ್ಲಿ 1.50 ಲಕ್ಷ ರು. ಬಂಡವಾಳದೊಂದಿಗೆ ಟಿ.ದಾಸರಹಳ್ಳಿಯ ಕೆಂಪೇಗೌಡ ನಗರದ 3ನೇ ಕ್ರಾಸ್‌, 1ನೇ ಮುಖ್ಯರಸ್ತೆಯ ಬಳಿ ಈ ಬ್ಯೂಟಿಪಾರ್ಲರ್‌ ತಲೆಯೆತ್ತಲಿದೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ನಕ್ಷತ್ರಾ, ‘ಸಮಾಜದಲ್ಲಿ ಮಂಗಳಮುಖಿಯರು, ತೃತೀಯ ಲಿಂಗಿಗಳು, ಲಿಂಗತ್ವ ಅಲ್ಪಸಂಖ್ಯಾತರ ಮೇಲಿನ ಜನರ ದೃಷ್ಟಿಕೋನ ಬದಲಾಗಬೇಕು. ನಮ್ಮಲ್ಲೂ ಅನೇಕರು ಉನ್ನತ ವಿದ್ಯಾಭ್ಯಾಸ ಮಾಡಿದವರಿದ್ದಾರೆ. ನಾವೂ ಇತರರಂತೆ ಜೀವನ ನಡೆಸಲು ಬಯಸುತ್ತೇವೆ. ನಮ್ಮನ್ನೂ ಸಮಾಜ ಒಳಗೊಳ್ಳಬೇಕು’ ಎಂದರು.

ಮಂಗಳಮುಖಿ ವೇಷ ತೊಟ್ಟ ಯುವಕ ಸಾವು : ನಂತರ ಸಿಕ್ತು ಹೊಸ ಟ್ವಿಸ್ಟ್

‘ನನ್ನ ಸ್ನೇಹಿತರು ಪಾರ್ಲರ್‌ ತರಬೇತಿ ಪಡೆದಿದ್ದಾರೆ. ನಮ್ಮನ್ನು ಅವಮಾನಿಸುವವರ ಮಧ್ಯೆಯೇ ಹೊಸದಾಗಿ ಏನಾದರೂ ಪ್ರಾರಂಭಿಸಬೇಕೆಂಬ ಉದ್ದೇಶದಿಂದ ಮುಂದಿನ ಗುರುವಾರದಿಂದ ಬ್ಯೂಟಿಪಾರ್ಲರ್‌ ತೆರೆಯುತ್ತಿದ್ದೇವೆ’ ಎಂದರು.
ಕೋವಿಡ್‌ ಸಮಯದಲ್ಲಿ ಹಲವು ಸಂಘ ಸಂಸ್ಥೆಗಳು ಧವಸ ಧಾನ್ಯ, ಮೆಡಿಸಿನ್‌ ಎಲ್ಲವನ್ನೂ ನೀಡಿದ್ದಾರೆ. ಇದೆಲ್ಲ ಐದಾರು ವಾರಕ್ಕೆ ಸಾಕಾಗುತ್ತದೆ. ಆದರೆ, ಒಂದು ಉದ್ಯೋಗ ಪ್ರಾರಂಭಿಸಲು ಸಹಾಯ ಮಾಡಿದ್ದಲ್ಲಿ ನಾವೂ ಬದುಕು ಕಟ್ಟಿಕೊಳ್ಳಲು ಸಾಧ್ಯ. ಜನರು ನಮ್ಮನ್ನು ಗುರುತಿಸಿ ಪ್ರೋತ್ಸಾಹಿಸಿ ತಮ್ಮ ಕೈಲಾದ ಸಹಾಯ ಮಾಡಬೇಕು. ಇದರಿಂದ ನಾವೂ ಸಮಾಜದಲ್ಲಿ ಗೌರವಯುತ ಜೀವನ ನಡೆಸಬಹುದು’ ಎಂದರು.

‘ನಮ್ಮ ಬ್ಯೂಟಿ ಪಾರ್ಲರ್‌ಗೆ ಎಲ್ಲಾ ವರ್ಗದ ಮಹಿಳೆಯರು ಬರಬಹುದು. ನಮಗೂ ಅಕ್ಕ ತಂಗಿಯರಿದ್ದಾರೆ. ನಾವೂ ಕುಟುಂಬದವರೊಂದಿಗೆ ಬೆಳೆದವರು. ಹೀಗಾಗಿ ಮಹಿಳೆಯರು ಯಾವುದೇ ಅಳುಕಿಲ್ಲದೆ ನಮ್ಮ ಪಾರ್ಲರ್‌ಗೆ ಬರಬಹುದು’ ಎಂದು ಮಿಲನ ಮಾಹಿತಿ ಹಂಚಿಕೊಂಡರು.

ಸಹಾಯ ಮಾಡಲು ಮನವಿ

‘ನಮಗೆ ಕಳೆದ 5-6 ತಿಂಗಳಿನಿಂದ ಯಾವುದೇ ರೀತಿಯಲ್ಲೂ ಸಂಪಾದನೆ ಇಲ್ಲ. ತುಂಬಾ ಕಷ್ಟದಲ್ಲಿದ್ದೇವೆ. ನಾವೂ ನಿಮ್ಮಂತೆಯೇ. ನಮಗೆ ಸಂಘ ಸಂಸ್ಥೆಗಳು, ದಾನಿಗಳು ಮುಂದೆ ಬಂದು ಸಹಾಯ ಮಾಡಬೇಕು. ನಮಗೆ ಹಣ ಬೇಕಿಲ್ಲ, ಬದಲಿಗೆ ಅಗತ್ಯವಾದ ವಸ್ತುಗಳನ್ನು ಕೊಡಿಸಬಹುದು. ಆಸಕ್ತರು ಮೊ. 9535236199 ಸಂಪರ್ಕಿಸಬಹುದು’ ಎಂದು ಮನವಿ ಮಾಡಿದರು. 
 

Follow Us:
Download App:
  • android
  • ios