ಬೆಂಗಳೂರು(ಜ.16): ಬಿಬಿಎಂಪಿಯಲ್ಲೂ ರಾಜ್ಯ ಸರ್ಕಾರದ ಮಾದರಿಯಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ಸಾಮೂಹಿಕ ವರ್ಗಾವಣೆ ನಡೆಸುವ ನೀತಿ ಅನುಸರಿಸುವ ದಿಸೆಯಲ್ಲಿ ಚಿಂತನೆ ಆರಂಭವಾಗಿದೆ. ಇದಕ್ಕೆ ಕಾರಣ ಒತ್ತಡ ನಿರ್ಮಾಣ ಮಾಡಿ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ ವರ್ಷಾದ್ಯಂತ ನಡೆಯುವಂತೆ ಮಾಡುತ್ತಿರುವ ಜನಪ್ರತಿನಿಧಿಗಳ ನಡವಳಿಕೆ.

ಬಿಬಿಎಂಪಿಯಲ್ಲಿ ಸುಮಾರು 35 ಇಲಾಖೆಗಳಿದ್ದು, ಕೇಂದ್ರ ಕಚೇರಿ, ಎಂಟು ವಲಯ ಕಚೇರಿ, 63 ಉಪ ವಿಭಾಗಗಳಲ್ಲಿ ಸದ್ಯಸುಮಾರು 8 ಸಾವಿರ ಅಧಿಕಾರಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಬಿಎಂಪಿಯ ಹಿರಿಯ ಅಧಿಕಾರಿಯಿಂದ ಗುಮಾಸ್ತನ ವರ್ಗಾವಣೆ ವಿಚಾರದ ವರೆಗೆ ಸಚಿವರು, ಶಾಸಕರು, ಪಾಲಿಕೆ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳಿಂದ ಸಾಕಷ್ಟುಒತ್ತಡ ಶಿಫಾರಸುಗಳು ವರ್ಷವಿಡೀ ಬರುತ್ತಲೇ ಇರುತ್ತವೆ. ಇದರಿಂದ ವರ್ಷವಿಡೀ ಅಧಿಕಾರಿಗಳ ವರ್ಗಾವಣೆ ನಡೆಯುತ್ತಲೇ ಇದ್ದು, ಇದು ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ.

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ತಡೆಗೆ ಕನ್ನಡಿ!

ಹೀಗಾಗಿ ವರ್ಗಾವಣೆ ಪ್ರಕ್ರಿಯೆಯನ್ನು ವರ್ಷದಲ್ಲಿ ಒಂದು ಬಾರಿ ಸೀಮಿತ ಅವಧಿಯಲ್ಲಿ ನಡೆಸುವುದರಿಂದ ಈ ಒತ್ತಡ ನಿಯಂತ್ರಿಸಬಹುದು ಹಾಗೂ ಅಡಳಿತ ಸುಧಾರಣೆಗೂ ಇದು ಸಹಕಾರಿಯಾಗಲಿದೆ ಎಂಬ ಚಿಂತನೆ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ದಿಸೆಯಲ್ಲಿ ಚಿಂತನೆ ಆರಂಭಿಸಿದೆ.

ಈ ಕುರಿತು ಕರಡು ವರ್ಗಾವಣೆ ನೀತಿ ರೂಪಿಸಲು ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಪಾಲಿಕೆ ಅಡಳಿತ ವಿಭಾಗಕ್ಕೆ ಸೂಚನೆ ನೀಡಿದ್ದು, ಈ ದಿಸೆಯಲ್ಲಿ ಕಾರ್ಯ ಪ್ರವೃತರಾಗಿರುವ ಆಡಳಿತ ವಿಭಾಗವು ರಾಜ್ಯ ಸರ್ಕಾರದ ಅಧಿಕಾರಿ- ಸಿಬ್ಬಂದಿ ವರ್ಗಾವಣೆ ನಿಮಯಗಳನ್ನು ಆಧಾರಿಸಿ ನೀತಿ ರೂಪಿಸುತ್ತಿದ್ದು, ಶೀಘ್ರದಲ್ಲಿ ಆಯಯಕ್ತರಿಗೆ ಕರಡು ನೀತಿ ಸಲ್ಲಿಸಲು ಅಗತ್ಯ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ನೀತಿಯಲ್ಲಿ ಪ್ರಮುಖ ಅಂಶಗಳು:

ವರ್ಗಾವಣೆ ನೀತಿಯಲ್ಲಿ ಪ್ರಮುಖವಾಗಿ ವರ್ಷದಲ್ಲಿ ಒಂದು ಬಾರಿ ಮಾತ್ರ ಅಧಿಕಾರಿ ಸಿಬ್ಬಂದಿ ವರ್ಗಾವಣೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ನೌಕರರ ಅನುಕೂಲಕ್ಕಾಗಿ ಮಾಚ್‌ರ್‍- ಏಪ್ರಿಲ್‌ನಲ್ಲಿ ನಡೆಸುವುದು, ಒಂದೇ ಸ್ಥಳದಲ್ಲಿ ನಿರಂತರವಾಗಿ ಮೂರು ವರ್ಷಕ್ಕಿಂತ ಹೆಚ್ಚು ಅವಧಿ ಕಾರ್ಯ ನಿರ್ವಹಿಸಿದ ನೌಕರರ ವರ್ಗಾವಣೆ, ಕೌನ್ಸಿಲಿಂಗ್‌ ಮೂಲಕ ವರ್ಗಾವಣೆ ನಡೆಸುವುದು ಸೇರಿದಂತೆ ಹಲವಾರು ಅಂಶಗಳನ್ನು ವರ್ಗಾವಣೆ ನೀತಿಯಲ್ಲಿ ಇರಲಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಗದಿತ ಅವಧಿಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸುವುದಕ್ಕೆ ಸಂಬಂಧಿಸಿದಂತೆ ನೀತಿ ರೂಪಿಸುವುದಕ್ಕೆ ಅಡಳಿತ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀತಿ ರೂಪಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಹೇಳಿದ್ದಾರೆ.

ಜೆಡಿಎಸ್‌ ಏಕಾಂಗಿ ಸ್ಪರ್ಧೆಗೆ ಸಜ್ಜು : ಶೇ.50ರಷ್ಟು ಟಿಕೆಟ್‌ ಮಹಿಳೆಯರಿಗೆ

ಅಡಳಿತ ಸುಧಾರಣೆಗೆ ಅಧಿಕಾರಿ ಸಿಬ್ಬಂದಿ ವರ್ಗಾವಣೆ ನೀತಿ ರೂಪಿಸುತ್ತಿರುವುದು ಸ್ವಾಗತಾರ್ಹ. ಇದರಿಂದ ಪಾಲಿಕೆಯ ನೌಕರರಿಗೂ ಅನುಕೂಲವಾಗಲಿದೆ ಎಂದು ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಧ್ಯಕ್ಷ ಅಮೃತ್‌ ರಾಜ್‌ ಹೇಳಿದ್ದಾರೆ.

-ವಿಶ್ವನಾಥ ಮಲೇಬೆನ್ನೂರು