ಬೆಂಗಳೂರು (ಜ.14):  ತ್ಯಾಜ್ಯ ಎಸೆಯುತ್ತಿದ್ದ ಸ್ಥಳಗಳಲ್ಲಿ ರಂಗೋಲಿ ಬಿಡಿಸಿ ನಗರವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಿದ್ದ ಬಿಬಿಎಂಪಿಗೆ ಇದೀಗ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ತಡೆಯಲು ಕನ್ನಡಿ ಮೊರೆ ಹೋಗಿದೆ.

ಕಳೆದ ಸೆಪ್ಟಂಬರ್‌ನಿಂದ ಡಿಸೆಂಬರ್‌ ಅಂತ್ಯದ ವರೆಗೆ ರಸ್ತೆಬದಿ, ಹಾಳು ಗೋಡೆ, ಮೈದಾನ, ಉದ್ಯಾನವನ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ 635 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಬಿಬಿಎಂಪಿ .2,62 ಲಕ್ಷ ದಂಡ ವಸೂಲಿ ಮಾಡಿದೆ. ಆದರೂ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಸಂಪೂರ್ಣವಾಗಿ ತಡೆಗಟ್ಟುವುದಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ನಾಚಿಕೆ ಆಗುವ ರೀತಿ ಕನ್ನಡಿ (ಮಿರರ್‌) ಅಳವಡಿಕೆಗೆ ಮುಂದಾಗಿದೆ.

ಈಗಾಗಲೇ ಪ್ರಾಯೋಗಿಕವಾಗಿ ನಗರದ ಕೃಷ್ಣರಾಜೇಂದ್ರ ಮಾರುಕಟ್ಟೆ, ಚಚ್‌ರ್‍ಸ್ಟ್ರೀಟ್‌, ಇಂದಿರಾನಗರದ ಇಎಸ್‌ಐ ಆಸ್ಪತ್ರೆ, ಶಿವಾಜಿನಗರದ ಕ್ವೀನ್ಸ್‌ ರಸ್ತೆ ಹಾಗೂ ಜ್ಯೋತಿನಿವಾಸ್‌ ಕಾಲೇಜು ಪ್ರದೇಶದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವ ಜಾಗ ಗುರುತಿಸಿ ಅಲ್ಲಿ 8/4 ಗಾತ್ರದ ಕನ್ನಡಿಗಳನ್ನು ಅಳವಡಿಸಲಾಗಿದೆ.

ಶೌಚಾಲಯದ ಮಾಹಿತಿಗೆ ಕ್ಯೂಆರ್‌ ಕೋಡ್‌:

ಮೂತ್ರ ವಿಸರ್ಜನೆ ಮಾಡುವವರಿಗೆ ಹತ್ತಿರದಲ್ಲಿರುವ ಶೌಚಾಲಯದ ವಿಳಾಸ ತಿಳಿಸುವುದಕ್ಕೂ ಈ ಮಿರರ್‌ ಮೇಲೆ ಕ್ಯೂಆರ್‌ ಕೋಡ್‌ ಅಂಟಿಸಲಾಗಿದೆ. ಕ್ಯೂ ಆರ್‌ ಕೋಡ್‌ ಸ್ಕಾನ್‌ ಮಾಡಿದರೆ ಸಮೀಪದಲ್ಲಿರುವ ಶೌಚಾಲಯದ ಮಾಹಿತಿ ಲಭ್ಯವಾಗಲಿದೆ.

ಈಗಲೂ ಹೆಣ್ಣುಮಕ್ಕಳು ಎದುರಿಸುತ್ತಿದ್ದಾರೆ ಟಾಯ್ಲೆಟ್ ಪ್ರಾಬ್ಲಂ!...

ಈ ಕುರಿತು ಪ್ರತಿಕ್ರಿಯೆ ನೀಡಿದ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌, ನಗರದಲ್ಲಿ ಸ್ವಚ್ಛ ಸರ್ವೇಕ್ಷಣ್‌ ಸರ್ವೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ರಾರ‍ಯಂಕ್‌ ಗಳಿಸುವ ಉದ್ದೇಶದಿಂದ ಮಿರರ್‌ ಅಳವಡಿಕೆ ಯೋಜನೆ ಅನುಷ್ಠಾನ ಮಾಡಲಾಗಿದೆ. ಒಂದು ಕನ್ನಡಿಗೆ ಅಂದಾಜು 70ರಿಂದ 80 ಸಾವಿರ ರು. ವೆಚ್ಚ ಮಾಡಲಾಗಿದ್ದು, ಸಾರ್ವಜನಿಕರ ಪ್ರತಿಕ್ರಿಯೆ ನೋಡಿಕೊಂಡು ಯೋಜನೆ ಮುಂದುವರಿಸಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

ಗರ್ಭಿಣಿಯರಲ್ಲಿ ಮೂತ್ರನಾಳ ಸೋಂಕು; ಏನು, ಹೇಗೆ, ಪರಿಹಾರವೇನು?.

ಕನ್ನಡಿಯಲ್ಲಿ ಪ್ರತಿಬಿಂಬ ನೋಡಿದ ಮೇಲೆ ನಾಚಿಕೆಪಟ್ಟಾದರೂ ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುವವರ ಸಂಖ್ಯೆ ಕಡಿಮೆಯಾಗಬಹುದು ಎಂಬ ಉದ್ದೇಶದಿಂದ ಮಿರರ್‌ ಅಳವಡಿಕೆ ಮಾಡಲಾಗಿದೆ.

-ಸರ್ಫರಾಜ್‌ ಖಾನ್‌, ಜಂಟಿ ಆಯುಕ್ತ, ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ.