ಧರ್ಮಾಪುರ ನಾರಾಯಣ್‌

 ಹುಣಸೂರು [ಆ.22]:  ಜಲ ಪ್ರಳಯಕ್ಕೆ ನಲುಗಿದ ಪಟ್ಟಣದ ವ್ಯಕ್ತಿಯೊಬ್ಬರ ಜಮೀನು ಕೊಚ್ಚಿ ಹೋಗಿದೆ, ಮನೆ ಬಿದ್ದು ಹೋಗಿದೆ, ತಾನು ವ್ಯಾಪಾರ ಮಾಡುತ್ತಿದ್ದ ಸೈಕಲ್‌ ಕೂಡಾ ನೀರಿನಲ್ಲಿ ತೇಲಿ ಹೋಗಿರುವುದರಿಂದ ಬೀದಿಪಾಲಾಗಿ ಅತಂತ್ರ ಸ್ಥಿತಿಯಲ್ಲಿ ಸಿಲುಕುವಂತಾಗಿದೆ.

ಪಟ್ಟಣದ ಅರಣ್ಯ ಕಚೇರಿಯ ಪಕ್ಕದಲ್ಲೇ ಇರುವ ಬಡಾವಣೆಗೆ ಹೊಂದಿಕೊಂಡಿರುವ ತಮ್ಮ ಅಕ್ಕನಿಗೆ ಸೇರಿದ ಜಮೀನಿನಲ್ಲಿ ಮೋಹನ್‌ ಮನೆಯೊಂದನ್ನು ಕಟ್ಟಿಕೊಂಡು ತರಕಾರಿಗಳನ್ನು ಬೆಳೆಯುತ್ತಿದ್ದ. ಇತ್ತೀಚೆಗೆಷ್ಟೆವಾರಗಟ್ಟಲೇ ಬಿದ್ದ ಭಾರಿ ಮಳೆಯಿಂದ ಲಕ್ಷ್ಮಣತೀರ್ಥ ನದಿಯ ನೀರಿನ ಪ್ರವಾಹ ಹೆಚ್ಚಾಗಿ ತಮ್ಮ ಅಕ್ಕನ ಜಮೀನಿನಲ್ಲಿ ಬೆಳೆದಿದ್ದ ತರಕಾರಿಗಳು ಮಣ್ಣು ಸಹಿತ ಕೊಚ್ಚಿ ಹೋದವು. ಇದರಿಂದಾಗಿ ಮನೆ ಬಿದ್ದು ಹೋಗಿದೆ, ಮನೆಯಲ್ಲಿದ್ದ ವಸ್ತುಗಳು, ಕಾಗದ ಪತ್ರಗಳು ನೀರಿನಲ್ಲಿ ತೇಲಿ ಹೋಗಿವೆ. ದಿನ ನಿತ್ಯ ಕೃಷಿಯ ಜೊತೆಗೆ ಸೈಕಲ್‌ನಲ್ಲಿ ಹತ್ತಾರು ಗ್ರಾಮಗಳನ್ನು ಸುತ್ತಿ ಬಳೆ ವ್ಯಾಪಾರ ಮಾಡಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಸಹೋದರಿಯೊಬ್ಬಳನ್ನು ಸಾಕುವ ಮೋಹನ್‌ ಜೀವನ ನೀರಿನಲ್ಲಿ ತೇಲುತ್ತಿದೆ.

ನಗರಸಭೆಯಲ್ಲಿ ನಿರಾಶ್ರಿತ ಸಹಾಯ ಕೋರಿದರೆ, ನಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲವೆಂದು ಅಧಿಕಾರಿಗಳು ಕೈ ಚೆಲ್ಲಿ ಕುಳಿತ್ತಿದ್ದಾರಂತೆ, ಆದರೆ ತಾಲೂಕು ಆಡಳಿತ ಗಮನಹರಿಸುವುದೆ, ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಮುಂದೆ ಬಂದು ಆರ್ಥಿಕ ನೆರವು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ತಿನ್ನಲು ಅನ್ನ ಇಲ್ಲ, ಮಾಡಲು ಉದ್ಯೋಗವಿಲ್ಲ, ವಯಸ್ಸಾಗಿ ದುಡಿಯುವ ಶಕ್ತಿ ಕಳೆದುಕೊಂಡು ಮನೆಯ ದವಸ ಧಾನ್ಯಗಳು, ಬಟ್ಟೆಗಳು ಹಾಗೂ ಎರಡು ಎಕರೆ ಜಮೀನಿನಲ್ಲಿ ಬೆಳೆದ ತರಕಾರಿಗಳು, ಜೀವನ ಸಾಗಿಸಲು ವ್ಯಾಪಾರ ಮಾಡಲು ಬಳೆ ಮತ್ತು ಸೈಕಲ್‌ ಕೂಡ ನೀರಿನಲ್ಲಿ ತೇಲಿವೆ, ನನ್ನ ಮೊದಲ ಮಗಳನ್ನು ಮದುವೆ ಮಡಿದ್ದೇನೆ, ಇನ್ನೊಬ್ಬಳು ಮಗಳು ಮತ್ತು ಕುಟುಂಬದವರ ಜೀವನ ಸಾಗಿಸಲು ಕಷ್ಟವಾಗಿದೆ ನನ್ನ ಗೋಳಿನ ಕಥೆ ಕೇಳುವರಿಲ್ಲದಂತಾಗಿದೆ, ಈಗ ತಾಲೂಕು ಆಡಳಿತದ ಸಹಕಾರದಿಂದ ಆಹಾದ ಕಿಟ್‌ ಮತ್ತು ಆರ್ಥಿಕ ನೆರವು ನೀಡಿದೆ, ಮುಂದೆ ಜೀವನ ಸಾಗಿಸಲು ಏನು ಮಾಡೋದು ತೋಚುತ್ತಿಲ್ಲ.

ಮೋಹನ್‌, ನಿರಾಶ್ರಿತ, ಹುಣಸೂರು ಪಟ್ಟಣದ ಹೊರ ವಲಯದ ನಿವಾಸಿ.

 ನನ್ನ ಗಮನಕ್ಕೆ ಬಂದಿದೆ, ನಾನು ಭೇಟಿ ನೀಡಿ ಮೋಹನ್‌ ಕುಟುಂಬಕ್ಕೆ ಧೈರ್ಯ ತುಂಬಿದ್ದೇನೆ, ಸಹಾಯಧನ ಆಹಾರದ ಕಿಟ್‌ ಒದಗಿಸಿದ್ದೇನೆ, ಸರ್ಕಾರದಿಂದ ನೆರವು ಮತ್ತು ರೋಟರಿ ಸಂಸ್ಥೆ ವತಿಯಿಂದ ಸೈಕಲ್‌ ಮತ್ತಿತರ ಸೌಲಭ್ಯ ಕೊಡಿಸುವ ಪ್ರಯತ್ನ ಮಾಡುವೆ.

- ಐ.ಇ. ಬಸವರಾಜು, ತಹಸೀಲ್ದಾರ್‌, ಹುಣಸೂರು.

ನಿರಾಶ್ರಿತರ ಮೋಹನ್‌ ಅವರಿಗೆ ತಹಸೀಲ್ದಾರ್‌ ಅವರು ಒಂದು ಸೈಕಲ್‌ ಕೊಡಿಸುವಂತೆ ಹೇಳಿದ್ದರು, ನಮ್ಮ ರೋಟರಿ ಸಂಸ್ಥೆ ವತಿಯಿಂದ ಕೊಡಿಸಲಾಗುತ್ತದೆ.

- ಡಾ. ವೃಷಭಂದ್ರ ಸ್ವಾಮಿ, ಅಧ್ಯಕ್ಷರು, ರೋಟರಿ ವಿದ್ಯಾ ಸಂಸ್ಥೆ, ಹುಣಸೂರು.