ಸೊರಬ ತಾಲೂಕಿನಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಚಂದ್ರಗುತ್ತಿ ದೇವಸ್ಥಾನದ ಬಳಿ ಆಶ್ರಯ ಪಡೆಯುತ್ತಿದ್ದ ವೃದ್ಧೆಯೊಬ್ಬರು ಶೆಡ್‌ನ ಬೀಮ್ ಬಿದ್ದು ಮೃತಪಟ್ಟಿದ್ದಾರೆ. ಈ ಮಳೆಯಿಂದಾಗಿ ತಾಲೂಕಿನ ಹಲವೆಡೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅನೇಕ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.

ಶಿವಮೊಗ್ಗ (ಮೇ.14): ಸೊರಬ ತಾಲೂಕಿನ ವಿವಿಧೆಡೆ ಕಳೆದೆರಡು ದಿನಗಳಿಂದ ಗಾಳಿ ಸಹಿತ ಭಾರಿ ಮಳೆಯಾಗಿದೆ. ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದರ್ಶನಕ್ಕೆ ಹೋಗಿದ್ದ ವೃದ್ಧೆ ತುಂಗಮ್ಮ ಕುಬಟೂರು(83) ಎಂಬುವರ ತಲೆ ಮೇಲೆ ಶೆಡ್‌ನ ಬೀಮ್ ಬಿದ್ದು ಮೃತಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತುಂಗಮ್ಮ ಸೊರಬ ತಾಲೂಕಿನ ಜೋಳದಗುಡ್ಡೆಯ ಸಂಬಂಧಿಕರ ಮನೆಗೆ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದರು. ಕುಟುಂಬದವರು ಚಂದ್ರಗುತ್ತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೆಳಗೆ ಇಳಿದು ಬರುವಾಗ ಭಾರಿ ಗಾಳಿ ಆರಂಭವಾಗಿದೆ. ಆಗ ಗ್ರಾಮದ ಒಬ್ಬರ ಮನೆಯಲ್ಲಿ ಆಶ್ರಯ ಪಡೆಯಲು ಹೋದಾಗ ಮನೆಯ ಶೆಡ್ ಹಾರಿಹೋಗಿ ಕಬ್ಬಿಣದ ಬೀಮ್ ತಲೆ ಮೇಲೆ ಬಿದ್ದು ವೃದ್ದೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ

ಉಳಿದಂತೆ ಚಂದ್ರಗುತ್ತಿ, ಮಣ್ಣತ್ತಿ, ಕತವಾಯಿ, ಜೋಳದಗುಡ್ಡೆ ಸೇರಿ ಹಲವೆಡೆ ಭಾರಿ ಗಾಳಿ ಮಳೆಗೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಉಳವಿ ಹೋಬಳಿಯ ಕೊಂಡಗಳಲೆ, ತಳೆಬೈಲು ಗ್ರಾಮಗಳಲ್ಲಿ 10ಕ್ಕೂ ಹೆಚ್ಚು ಕಂಬಗಳು ಮುರಿದುಬಿದ್ದಿವೆ.

ಹಾಲಗಳಲೆಯ ಉಮೇಶ್ ಗೌಡ ಎಂಬುವವರಮನೆ ಮೇಲೆ ಮೇಲ್ಬಾವಣಿ ಗಾಳಿಯ ರಭಸಕ್ಕೆ ದೂರದವರೆಗೆ ಹಾರಿಹೋಗಿದ್ದು ಅಚ್ಚರಿ ಉಂಟುಮಾಡಿದೆ. ಚಿಮಣೂರಿನಲ್ಲಿ ಸಿಡಿಲು ಬಡಿದು ಅಡಿಕೆ ಮರಗಳು ಹಾನಿಗೀಡಾಗಿವೆ. ನಿರಂತರ ಜ್ಯೋತಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದುದರಿಂದ ಶಿಗ್ಗಾ, ಕೊಳವಳ್ಳಿ, ಕುಂಬತ್ತಿ, ಹೆಗ್ಗೋಡ್, ಹಾಲಗಳಲೆ, ಚಿಮಣೂರು, ಗದ್ದೆಮನೆ ಮುಂತಾದ ಗ್ರಾಮಗಳಲ್ಲಿ ಜನರು ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆದಿದ್ದಾರೆ