ದಸರಾ ಹಬ್ಬದ ದಿನವೇ ಕೊಡಗಿನ ಬಾಣಂಗಾಲ ಗ್ರಾಮದಲ್ಲಿ ಕಾರು ಕೆರೆಗೆ ಉರುಳಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಮಂಡ್ಯದ ಯರಗನಹಳ್ಳಿಯಲ್ಲಿ ಆಯುಧ ಪೂಜೆ ವೇಳೆ ಕಾರಿನ ಚಕ್ರಕ್ಕೆ ಸಿಲುಕಿ ಮೂರು ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಕೊಡಗು: ದಸರಾ ಹಬ್ಬದ ದಿನವೇ ಕೊಡಗಿನಲ್ಲಿ ಭೀಕರ ದುರಂತ ಸಂಭವಿಸಿದೆ. ಕಾರು ಕೆರೆಗೆ ಉರುಳಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ಮೃತರನ್ನು ವಿಜೇಶ್(36), ಪತ್ನಿ ಪಮಿತಾ (34), ಮಗಳು ಲಿಯಾ (4) ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಂಡ-ಹೆಂಡತಿ ಮಗಳು ಮೂವರು ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದ್ದು, ಕೊಡಗಿನ ಬಾಡಗ ಬಾಣಂಗಾಲ ಗ್ರಾಮದ ಬಳಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಗೆರೆಗೆ ಉರುಳಿದೆ. ಘಟನೆ ಕುರಿತಂತೆ ಮಾಹಿತಿ ಲಭ್ಯವಾಗುತ್ತಿದಂತೆ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿ ಶಾಮಕ ದಳ ಸಿಬ್ಬಂದಿ ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಆಯುಧ ಪೂಜೆ ವೇಳೆ ಕಾರಿನ ಚಕ್ರಕ್ಕೆ ಸಿಲುಕಿ ಬಾಲಕ ಸಾವು
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಯರಗನಹಳ್ಳಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಕಾರಿನ ಚಕ್ರಕ್ಕೆ ಸಿಲುಕಿ ಮೂರು ವರ್ಷದ ಕಂದಮ್ಮ ಕಂದನ್ ಎಸ್ ಗೌಡ ಸಾವನ್ನಪ್ಪಿದ್ದಾನೆ. ಆಯುಧ ಪೂಜೆ ವೇಳೆ ಯಡವಟ್ಟು ನಡೆದಿದ್ದು, ಕುಟುಂಬ ಸದಸ್ಯರು ಕಾರಿಗೆ ಪೂಜೆ ಸಲ್ಲಿಕೆ ಮಾಡುತ್ತಿದ್ದರು. ಈ ವೇಳೆ ಕಾರು ಹತ್ತಲು ಬಾಲಕ ಮುಂದಾಗಿದ್ದು, ಇದನ್ನು ಗಮನಿಸದೆ ವಾಹನ ಚಾಲಕ ಕಾರು ಮುಂದಕ್ಕೆ ಚಾಲಿಸಿದ ಕಾರಣ ಕಾರಿನ ಚಕ್ರಕ್ಕೆ ಬಾಲಕಿ ಸಿಲುಕಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕನಿಗೆ ಅಧಿಕ ರಕ್ತಸ್ರಾವವಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮುನ್ನವೇ ಸಾವನ್ನಪ್ಪಿದ್ದಾನೆ. ಆಯುಧ ಪೂಜೆ ಸಂಭ್ರಮದಲ್ಲಿ ಕುಟುಂಬಸ್ಥರಿಗೆ ಆಘಾತ ಎದುರಾಗಿದ್ದು, ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


