ಬೆಂಗಳೂರು [ಸೆ.23]: ಸಂಚಾರ ನಿಯಮ ಉಲ್ಲಂಘನೆ ನೆಪದಲ್ಲಿ ಗೂಡ್ಸ್‌ ಚಾಲಕನನ್ನು ತಡೆದು ಹಲ್ಲೆ ನಡೆಸಿದ್ದ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಹಲಸೂರು ಗೇಟ್‌ ಕಾನ್‌ಸ್ಟೇಬಲ್‌ನನ್ನು ಸಂಚಾರ ತರಬೇತಿ ಸಂಸ್ಥೆಗೆ ವರ್ಗಾವಣೆ ಮಾಡಿ, ಇಲಾಖೆ ವಿಚಾರಣೆಗೆ ಆದೇಶಿಸಲಾಗಿದೆ.

ವಿಡಿಯೋ ವೈರಲ್‌ ಆಗಿದ್ದರೂ ಹೆಡ್‌ ಕಾನ್‌ಸ್ಟೇಬಲ್‌ನನ್ನು ಅಮಾನತು ಮಾಡದ ಪೊಲೀಸ್‌ ಇಲಾಖೆ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದೆಡೆ ಗೂಡ್ಸ್‌ ವಾಹನ ಚಾಲಕನ ಮನೆಗೆ ನುಗ್ಗಿ ಆತನ ತಾಯಿಗೆ ಕೆಲವು ದುಷ್ಕರ್ಮಿಗಳು ಶನಿವಾರ ರಾತ್ರಿ ಬೆದರಿಕೆ ಹಾಕಿದ್ದು, ಈ ಸಂಬಂಧ ಚಾಲಕನ ತಾಯಿ ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಈ ಸಂಬಂಧ ಗಂಭೀರ ಸ್ವರೂಪವಲ್ಲದ (ಎನ್‌ಸಿಆರ್‌) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಟೌನ್‌ಹಾಲ್‌ ಎದುರು ಚಲಿಸುತ್ತಿದ್ದ ಗೂಡ್ಸ್‌ ವಾಹನದಲ್ಲೇ ಚಾಲಕನಿಗೆ ಹೆಡ್‌ಕಾನ್‌ಸ್ಟೇಬಲ್‌ ಮಹಾಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೆಡ್‌ ಕಾನ್ಸ್‌ಟೇಬಲ್‌ ವಿರುದ್ಧ ಎಸಿಪಿ ಮಟ್ಟದ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಇಲಾಖೆ ತನಿಖೆಗೆ ಆದೇಶಿಸಲಾಗಿದೆ. ಇನ್ನು ಹೆಡ್‌ಕಾನ್‌ಸ್ಟೇಬಲ್‌ನನ್ನು ಥಣಿಸಂದ್ರದಲ್ಲಿರುವ ಟ್ರಾಫಿಕ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ಗೆ ವರ್ಗಾವಣೆ ಮಾಡಲಾಗಿದೆ. ಒತ್ತಡ ನಿರ್ವಹಣೆ ಹಾಗೂ ಮೃದುಕೌಶಲ ಕುರಿತ ಹತ್ತು ದಿನಗಳ ಕಡ್ಡಾಯ ತರಬೇತಿ ಪಡೆದು ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಲಾಗಿದೆ. ಬಳಿಕ ಆತನ ಮಾನಸಿಕ ಸ್ಥಿರತೆ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದು ಸಂಚಾರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಗೆ ನುಗ್ಗಿ ಬೆದರಿಕೆ: ಘಟನೆ ದೊಡ್ಡದಾಗುತ್ತಿದ್ದಂತೆ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ನಾಲ್ಕೈದು ದುಷ್ಕರ್ಮಿಗಳು ಪುಟ್ಟೇನಹಳ್ಳಿಯಲ್ಲಿರುವ ಗೂಡ್ಸ್‌ ಚಾಲಕನ ಮನೆಗೆ ನುಗ್ಗಿ ಆತನ ತಾಯಿಗೆ ಬೆದರಿಕೆ ಹಾಕಿದ್ದಾರೆ. ದುಷ್ಕರ್ಮಿಗಳು ಮನೆಗೆ ನುಗ್ಗಿದ ವೇಳೆ ಪುತ್ರ ಇರಲಿಲ್ಲ. ದುಷ್ಕರ್ಮಿಗಳು ‘ನಿಮ್ಮ ಮಗ ಎಲ್ಲಿದ್ದಾನೆ’ ಎಂದು ಪ್ರಶ್ನಿಸಿ ನಿಂದಿಸಿದರು. ನಿನ್ನನ್ನು ಮತ್ತು ನಿನ್ನ ಪುತ್ರನನ್ನು ಬಿಡುವುದಿಲ್ಲ ಎಂದು ಬೆದರಿಕೆವೊಡ್ಡಿದ್ದಾರೆ ಎಂದು ಮಹಿಳೆ ಚಾಲಕನ ತಾಯಿ ದೂರಿನಲ್ಲಿ ಹೇಳಿದ್ದಾರೆ.

ಪೊಲೀಸರ ವಿರುದ್ಧ ಆಕ್ರೋಶ

ಇನ್ನು ಹಲಸೂರುಗೇಟ್‌ ಸಂಚಾರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್‌ ಆದ ಬಳಿಕವೂ ಚಾಲಕನ ಮೇಲೆಯೇ ಎಸ್‌.ಜೆ.ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕಾನ್‌ಸ್ಟೇಬಲ್‌ ಹಲ್ಲೆ ಮಾಡಿರುವುದು ಜಗಜ್ಜಾಹೀರಾಗಿದೆ. ಅಮಾಯಕ ಚಾಲಕನ ಮೇಲೆ ಕರ್ತವ್ಯ ಅಡ್ಡಿ, ನಿಂದನೆ ಪ್ರಕರಣ ದಾಖಲಿಸಲಾಗಿದೆ. ಮೊದಲು ಹೆಡ್‌ ಕಾನ್‌ಸ್ಟೇಬಲ್‌ನನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ