3 ತಿಂಗಳಲ್ಲಿ ‘ಸಂಚಾರ ಸಮಸ್ಯೆ ಮುಕ್ತ ನಗರ’ ಗುರಿ, ಟ್ರಾಫಿಕ್ ಜಾಂಗೆ ನೈಜ ಕಾರಣ ಪತ್ತೆಗೆ ಡ್ರೋನ್ ಬಳಕೆ, ಇನ್‌ಸ್ಪೆಕ್ಟರ್‌ನಿಂದ ಡ್ರೋನ್ ನಿಯಂತ್ರಣ, ಪೀಕ್ ಅವರ್‌ನಲ್ಲಿ ಡಿಸಿಪಿ ಫೀಲ್ಡ್‌ಗೆ ಇಳಿಯಬೇಕು, ಸಮಸ್ಯೆ ಆದರೆ ಅವರೇ ಹೊಣೆ, ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸಚಿವ ಪರಮೇಶ್ವರ್ ಸೂಚನೆ
ಬೆಂಗಳೂರು(ಜೂ.17): ಸಂಚಾರ ವಿಭಾಗದ ಪೊಲೀಸರಿಗೆ ಮೂರು ತಿಂಗಳ ಅವಧಿಯಲ್ಲಿ ಬೆಂಗಳೂರು ನಗರವನ್ನು ‘ಸಂಚಾರ ಸಮಸ್ಯೆ ಮುಕ್ತ’ವಾಗಿಸುವ ಗುರಿ ನೀಡಲಾಗಿದ್ದು, ಇನ್ಮುಂದೆ ರಸ್ತೆಗಳಲ್ಲಿ ಡ್ರೋನ್ ಕ್ಯಾಮರಾಗಳನ್ನು ಬಳಸಿ ಸಂಚಾರ ದಟ್ಟಣೆ ತಗ್ಗಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆಯು ಮೂಲಭೂತ ಸಮಸ್ಯೆಯಾಗಿದೆ. ಸಂಚಾರ ದಟ್ಟಣೆಯಿಂದ ಜಾಗತಿಕ ಮಟ್ಟದಲ್ಲಿ ನಗರಕ್ಕೆ ಅಪಕೀರ್ತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಟ್ರಾಫಿಕ್ ಜಾಂ ಮುಕ್ತ ಬೆಂಗಳೂರು ಸಂಕಲ್ಪ: ಡಿಕೆಶಿ
ಸಂಚಾರ ಸಮಸ್ಯೆ ನಿವಾರಣೆಗೆ ಕಾಲಮಿತಿ ನಿಗದಿಪಡಿಸಲಾಗಿದೆ. ಇನ್ನು ಮೂರು ತಿಂಗಳಲ್ಲಿ ಬೆಂಗಳೂರು ನಗರವನ್ನು ಸಂಚಾರ ಮುಕ್ತವಾಗಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಪ್ರತಿ ದಿನ ಪಿಕ್ ಅವರ್‌ನಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ಎರಡು ಗಂಟೆಗಳು ಡಿಸಿಪಿ ಆದಿಯಾಗಿ ಸಂಚಾರ ವಿಭಾಗದ ಎಲ್ಲ ಪೊಲೀಸರು ರಸ್ತೆಯಲ್ಲಿ ನಿಂತು ಸಂಚಾರ ನಿರ್ವಹಣೆ ಮಾಡಬೇಕು. ಸಂಚಾರ ದಟ್ಟಣೆ ಉಂಟಾದರೆ ಡಿಸಿಪಿ ಹಾಗೂ ಎಸಿಪಿ ಅವರನ್ನು ಸಹ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾದರೆ ನಿಖರ ಕಾರಣ ಪತ್ತೆಗೆ ಪೊಲೀಸರಿಗೆ ಆಡಚಣೆಯಾಗುತ್ತಿದೆ. ಹೀಗಾಗಿ ವಾಹನ ದಟ್ಟಣೆ ತಗ್ಗಿಸಲು ಇನ್ಮುಂದೆ ಡ್ರೋನ್ ಕ್ಯಾಮರಾಗಳನ್ನು ಬಳಸಿ ಸಂಚಾರ ನಿರ್ವಹಣೆ ಮಾಡಲಾಗುತ್ತದೆ. ವಾಹನಗಳ ಓಡಾಟಕ್ಕೆ ಅಡ್ಡಿಯಾದರೆ ಕೂಡಲೇ ಡ್ರೋನ್ ಬಳಸಿ ಯಾವ ಜಾಗದಲ್ಲಿ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ ಎಂಬುದು ಪತ್ತೆ ಹಚ್ಚಿ ಅಡ್ಡಿ ನಿವಾರಿಸಲಾಗುತ್ತದೆ. ಪೊಲೀಸ್ ನಿಯಂತ್ರಣ ಕೊಠಡಿಗೆ ಈ ಡ್ರೋನ್ ಕ್ಯಾಮರಾಗಳು ಸಂಪರ್ಕ ಹೊಂದಿರುತ್ತವೆ. ಸಂಚಾರ ದಟ್ಟಣೆ ಉಂಟಾದ ಸ್ಥಳದಿಂದಲೇ ಇನ್‌ಸ್ಪೆಕ್ಟರ್‌ಗಳ ವಾಹನದಲ್ಲಿ ಆ ಕ್ಯಾಮರಾಗಳನ್ನು ನಿರ್ವಹಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಪ್ರಭಾರ) ಅಲೋಕ್ ಮೋಹನ್, ನಗರ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಆಯುಕ್ತರಾದ ಎಂ.ಚಂದ್ರಶೇಖರ್ ಹಾಗೂ ಸಂದೀಪ್ ಪಾಟೀಲ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿವಿಲ್ ಪೊಲೀಸರಿಗೆ ಸಂಚಾರ ಜವಾಬ್ದಾರಿ
ಸಂಚಾರ ನಿರ್ವಹಣೆಗೆ ಸಿಬ್ಬಂದಿ ಕೊರತೆ ಸಹ ಪ್ರಮುಖ ತೊಂದರೆಯಾಗಿದೆ. ಹೀಗಾಗಿ ಪಿಕ್ ಆವರ್‌ನಲ್ಲಿ ಸಂಚಾರ ನಿರ್ವಹಣೆಗೆ ಸಂಚಾರ ವಿಭಾಗದ ಪೊಲೀಸರಿಗೆ ಕಾನೂನು ಮತ್ತು ಸುವ್ಯವಸ್ಥೆ (ಎಲ್ ಆ್ಯಂಡ್ ಓ) ಠಾಣೆಗಳ ಪೊಲೀಸರು ನೆರವು ನೀಡಲಿದ್ದು, ಪ್ರತಿ ಸಂಚಾರ ಠಾಣೆಗೆ 10 ಸಿಬ್ಬಂದಿಯನ್ನು ಎಲ್ ಆ್ಯಂಡ್ ಓ ಪೊಲೀಸರನ್ನು ಸಂಚಾರ ನಿರ್ವಹಣೆ ಕರ್ತವ್ಯಕ್ಕೆ ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಬೆಂಗಳೂರು ಸೇಫ್ ಸಿಟಿ ಆಗಲಿದೆ: ಗೃಹ ಸಚಿವ
2016-17ರಲ್ಲೇ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಸುರಕ್ಷತಾ ನಗರವಾಗಿ ರೂಪಿಸಲು 667 ಕೋಟಿ ರು ವೆಚ್ಚದಲ್ಲಿ ‘ಸೇಫ್ ಸಿಟಿ’ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಕೇಂದ್ರ ಶೇ.60 ಹಾಗೂ ರಾಜ್ಯವು ಶೇ.40 ರಷ್ಟುಅನುಪಾತದಲ್ಲಿ ಅನುದಾನ ನೀಡುತ್ತವೆ. ಈ ಯೋಜನೆಯಡಿ ನಗರದ ನಿರ್ಜನ ಪ್ರದೇಶ, ಜನ ಸಂದಣಿ ಹಾಗೂ ಮಹಿಳೆಯರು ಹೆಚ್ಚು ಓಡಾಡುವ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, ಈಗಾಗಲೇ 80 ಠಾಣೆಗಳ ವ್ಯಾಪ್ತಿ 7 ಸಾವಿರ ಸಿಸಿಟಿವಿ ಅಳವಡಿಸಲಾಗಿದೆ ಎಂದು ಸಚಿವ ಪರಮೇಶ್ವರ್ ವಿವರಿಸಿದರು.
ಈ ಸಿಸಿಟಿವಿ ಕ್ಯಾಮರಾಗಳನ್ನು ಠಾಣೆಗಳಿಂದಲೇ ನಿರ್ವಹಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನುಳಿದ 31 ಠಾಣೆಗಳ ವ್ಯಾಪ್ತಿಯಲ್ಲಿ ಕ್ಯಾಮೆರಾ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಈ ಕ್ಯಾಮೆರಾಗಳ ಮೂಲಕ ಕಿಡಿಗೇಡಿ ಕೃತ್ಯ ಎಸುಗುವವರ ಮೇಲೆ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದು ತಿಳಿಸಿದರು.
ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ
ನಗರದಲ್ಲಿ ಯಾವುದೇ ಕಾರಣಕ್ಕೂ ಡ್ರಗ್ಸ್ ಮಾಫಿಯಾಕ್ಕೆ ಅವಕಾಶ ನೀಡಬಾರದು ಎಂದು ಪೊಲೀಸರಿಗೆ ಸಚಿವರು ತಾಕೀತು ಮಾಡಿದರು. ಡ್ರಗ್ಸ್ ಮಾರಾಟ ಜಾಲದಲ್ಲಿ ಕೆಲ ವಿದೇಶಿ ವಿದ್ಯಾರ್ಥಿಗಳು ಸಹ ಪಾಲ್ಗೊಳ್ಳುತ್ತಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಡ್ರಗ್ಸ್ ದಂಧೆ ನಿರತರಾಗುವ ವಿದೇಶಿ ಪ್ರಜೆಗಳ ಬಗ್ಗೆ ದೆಹಲಿಯಲ್ಲಿರುವ ಆಯಾ ದೇಶದ ರಾಯಭಾರಿ ಅಥವಾ ಹೈಕಮೀಷನರ್ ಕಚೇರಿಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೆ ವಿದೇಶಿ ಪ್ರಜೆಗಳನ್ನು ಮುಲಾಜಿಲ್ಲದೆ ಗಡಿಪಾರು ಮಾಡಲಾಗುತ್ತದೆ. ಈವರೆಗೆ 106 ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದರು ಹೇಳಿದರು.
ಹೊಯ್ಸಳ ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮರಾ ವಿತರಣೆ
ನಗರದಲ್ಲಿ ಗಸ್ತು ನಡೆಸುವ ಹೊಯ್ಸಳ ವಾಹನ ಸಿಬ್ಬಂದಿಗೆ ಸಚಿವ ಪರಮೇಶ್ವರ್ ಬಾಡಿ ವೋರ್ನ್ ಕ್ಯಾಮರಾಗಳನ್ನು ವಿತರಿಸಿದರು. ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದರೆ ಅಥವಾ ಪೊಲೀಸರು ಕರ್ತವ್ಯ ಲೋಪವೆಸಗಿದರೂ ಸಹ ಈ ಕ್ಯಾಮರಾಗಳ ಮೂಲಕ ಪತ್ತೆ ಹಚ್ಚಬಹುದು. ಈ ಕ್ಯಾಮೆರಾಗಳು ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕ ಹೊಂದಿರುತ್ತವೆ ಎಂದು ಹೇಳಿದರು.
ಮಳೆಗಾಲದಲ್ಲಿ ಈ ರಸ್ತೆಗಳು ಡೇಂಜರ್.. ಡೇಂಜರ್: 65 ಸ್ಥಳಗಳಲ್ಲಿ ಭಾರೀ ನೀರು, ಟ್ರಾಫಿಕ್ ಪೊಲೀಸರ ಮಾಹಿತಿ
ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ
ಅಪಘಾತಗಳಲ್ಲಿ ಹೆಚ್ಚು ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಸಚಿವ ಪರಮೇಶ್ವರ್, ಶಾಲಾ-ಕಾಲೇಜುಗಳಲ್ಲಿ ಸಂಚಾರ ನಿಯಮಗಳ ಹಾಗೂ ಡ್ರಗ್‌್ಸ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಮ್ಮಿಕೊಳ್ಳುವಂತೆ ಸೂಚಿಸಿದರು.
ಬೆಂಗಳೂರಿನಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ‘ಜನ ಸ್ನೇಹಿ’ ಆಡಳಿತ ಜಾರಿಗೊಳ್ಳಬೇಕು. ಜನರಿಂದ ದೂರು ಸ್ವೀಕರಿಸಲು ಅಥವಾ ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದರೆ ಕ್ರಮ ಜರುಗಿಸಲಾಗುತ್ತದೆ. ಹಿರಿಯ ಅಧಿಕಾರಿಗಳು ಠಾಣೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ನಾನು ಕೂಡ ಠಾಣೆಗಳಿಗೆ ಅನಿರೀಕ್ಷಿತ ಭೇಟಿ ನೀಡುತ್ತೇನೆ ಅಂತ ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
