ಬೆಂಗಳೂರಿನ 18ಕ್ಕೂ ಹೆಚ್ಚು ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಇದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸಂಚಾರ ದಟ್ಟಣೆ ಸಮಸ್ಯೆಗೆ ಶೀಘ್ರವೇ ಮುಕ್ತಿ ನೀಡುತ್ತೇವೆ ಎಂದು ಭರವಸೆ ನೀಡಿದ ಸಚಿವ ಡಿ.ಕೆ.ಶಿವಕುಮಾರ್
ಬೆಂಗಳೂರು(ಜೂ.14): ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ ಹಾಗೂ ಅಭಿವೃದ್ಧಿ ಕಾರ್ಯಗಳ ಜಾರಿ ಸಂಬಂಧ ತಜ್ಞರು, ನಿವೃತ್ತ ಅಧಿಕಾರಿಗಳು, ಸಾರ್ವಜನಿಕರ ಸಲಹೆ, ಅಭಿಪ್ರಾಯ ಪಡೆದು ಯೋಜನೆ ಸಿದ್ಧಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಸಚಿವರಾದ ಬಳಿಕ ಎರಡನೇ ಬಾರಿ ನಗರ ಪ್ರದಕ್ಷಿಣೆ ಹಮ್ಮಿಕೊಂಡ ಡಿ.ಕೆ.ಶಿವಕುಮಾರ್ ಮಂಗಳವಾರ ಹೆಬ್ಬಾಳ, ಕೆ.ಆರ್ ಪುರ ಮೇಲ್ಸೇತುವೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ವಾಹನ ದಟ್ಟಣೆ ನಿವಾರಣೆ, ಆಡಳಿತ ಸುಧಾರಣೆ ಹಾಗೂ ತ್ಯಾಜ್ಯ ನಿರ್ವಹಣೆಯು ನಮ್ಮ ಮೊದಲ ಆದ್ಯತೆಯಾಗಿದೆ. ಬೆಂಗಳೂರಿನ 18ಕ್ಕೂ ಹೆಚ್ಚು ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಇದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸಂಚಾರ ದಟ್ಟಣೆ ಸಮಸ್ಯೆಗೆ ಶೀಘ್ರವೇ ಮುಕ್ತಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಮಳೆಗಾಲದಲ್ಲಿ ಈ ರಸ್ತೆಗಳು ಡೇಂಜರ್.. ಡೇಂಜರ್: 65 ಸ್ಥಳಗಳಲ್ಲಿ ಭಾರೀ ನೀರು, ಟ್ರಾಫಿಕ್ ಪೊಲೀಸರ ಮಾಹಿತಿ
ಬೆಂಗಳೂರಿನ ಅಭಿವೃದ್ಧಿ ಮತ್ತು ಮೂಲಸೌಕರ್ಯ ಸಮಸ್ಯೆ ಪರಿಹರಿಸಲು ಎರಡು ಹಂತದಲ್ಲಿ ಸಭೆಗೆ ದಿನಾಂಕ ನಿಗದಿಪಡಿಸಲಾಗಿದೆ. ಟ್ರಾಫಿಕ್ ಸಮಸ್ಯೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳ ಸಂಬಂಧ ಅಧಿಕಾರಿಗಳು, ಪಾಲಿಕೆ ಮಾಜಿ ಆಯುಕ್ತ ಸಿದ್ದಯ್ಯ ಸೇರಿದಂತೆ ಹಲವು ನಿವೃತ್ತ ಅಧಿಕಾರಿಗಳು, ಬೆಂಗಳೂರಿನ ಗಣ್ಯರು, ಸಾರ್ವಜನಿಕರ ಸಲಹೆಯ ಜತೆಗೆ ಜಾಗತಿಕ ತಜ್ಞರಿಂದಲೂ ಸಲಹೆ, ನಾಗರಿಕರ ಅಭಿಪ್ರಾಯ ಪಡೆದು ಯೋಜನೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಹೆಬ್ಬಾಳ, ಕೆ.ಆರ್.ಪುರ ಮೇಲ್ಸೇತುವೆ ಜಂಕ್ಷನ್‌ಗಳ ಅಗಲೀಕರಣ ಸಂಬಂಧ ಪರಿಶೀಲನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇತರೆ ಜಂಕ್ಷನ್‌ಗಳನ್ನು ವೀಕ್ಷಿಸುತ್ತೇವೆ. ಎಲ್ಲೆಲ್ಲಿ ದ್ವಿಪಥ ರಸ್ತೆ ಮಾಡಲು ಸಾಧ್ಯ ಅಥವಾ ಅಗಲೀಕರಣ ಸಾಧ್ಯ ಎಂಬುದನ್ನು ವೈಜ್ಞಾನಿಕವಾಗಿ ಚರ್ಚಿಸಿ, ಯೋಜನೆ ರೂಪಿಸಲಾಗುವುದು ಎಂದು ವಿವರಿಸಿದರು.
ಈ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಬಿಡಿಎ ಅಧ್ಯಕ್ಷ ರಾಕೇಶ್‌ಸಿಂಗ್, ಆಯುಕ್ತ ಜಿ.ಕುಮಾರ್ ನಾಯಕ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಉಪಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಹಾಜರಿದ್ದರು.
2047ರ ಸಂಚಾರ ದಟ್ಟಣೆ ಬಗ್ಗೆ ವಿವರಣೆ
ಬಿಡಿಎ ಹಾಗೂ ಎನ್‌ಎಚ್‌ಎಐ ಪ್ರತ್ಯೇಕವಾಗಿ ಸಿದ್ಧಪಡಿಸಿರುವ ಹೆಬ್ಬಾಳ ಜಂಕ್ಷನ್ ಅಗಲೀಕರಣ ಕುರಿತ ನೀಲನಕ್ಷೆ ವೀಕ್ಷಿಸಿ, ವಾಹನ ದಟ್ಟಣೆ ನಿಯಂತ್ರಣ, ರಸ್ತೆ ಮತ್ತು ಮೇಲ್ಸೇತುವೆ ಅಗಲೀಕರಣ, ಹೆಬ್ಬಾಳ ಕೆರೆ ಸೌಂದರ್ಯಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ಪಡೆದರು.
2047ರ ವೇಳೆಗೆ ಹೆಚ್ಚಾಗುವ ವಾಹನ ದಟ್ಟಣೆ ನಿವಾರಣೆಗೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಅಧಿಕಾರಿಗಳು ವಿವರಣೆ ನೀಡಿದರು. ಹೆಬ್ಬಾಳದಲ್ಲಿ ಮೆಟ್ರೊ ನಿಲ್ದಾಣ ಮತ್ತು ಮಾರ್ಗದ ನಿರ್ಮಾಣದ ಬಗ್ಗೆ ಎಂಜಿನಿಯರ್‌ಗಳಿಂದ ಅವರು ಮಾಹಿತಿ ಪಡೆದರು.
ರಾಜಕಾಲುವೆ ಒತ್ತುವರಿ ತೆರವಿಗೆ ಡಿಕೆಶಿ ಸೂಚನೆ
ಹೊರ ವರ್ತುಲ ರಸ್ತೆ, ನಾಗವಾರ ಮೇಲ್ಸೇತುವೆ, ಕಲ್ಯಾಣ ನಗರ, ಎಚ್‌ಆರ್‌ಬಿಆರ್ ಲೇಔಟ್, ಟೆಲಿಕಾಂ ಲೇಔಟ್‌ನಲ್ಲಿ ಸ್ವಚ್ಛತಾ ಕಾರ್ಯ, ರಾಜಕಾಲುವೆ ಹೂಳು ತೆಗೆಯುವ ಕಾಮಗಾರಿಗಳನ್ನು ಉಪಮುಖ್ಯಮಂತ್ರಿಗಳು ವೀಕ್ಷಿಸಿದರು. ಮಳೆ ಅನಾಹುತ ತಡೆಗೆ ಪಾಲಿಕೆ ಕೈಗೆತ್ತಿಕೊಂಡಿರುವ ರಾಜಕಾಲುವೆ ಮತ್ತು ತಡೆಗೋಡೆ ಕಾಮಗಾರಿಯನ್ನು ಡಿ.ಕೆ.ಶಿವಕುಮಾರ್ ಪರಿಶೀಲಿಸಿದರು. ಈ ವೇಳೆ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ ನೀಡಿದರು. ಕೆ.ಆರ್.ಪುರದಲ್ಲಿ ಬಿಎಂಆರ್‌ಸಿಎಲ್‌ನ ಮೆಟ್ರೊ ಕಾಮಗಾರಿ ವೀಕ್ಷಿಸಿದರು.
Bengaluru Rain: ಅಬ್ಬರದ ಮಳೆ, ಎಚ್ಚರ ಎಂದ ಹವಾಮಾನ ಇಲಾಖೆ
295 ಕೋಟಿ ವೆಚ್ಚದ ನೀಲನಕ್ಷೆ
ಹೆಬ್ಬಾಳ ಮೇಲ್ಸೇತುವೆ ಜಂಕ್ಷನನ್ನು .295 ಕೋಟಿ ವೆಚ್ಚದಲ್ಲಿ ಮೇಖ್ರಿ ವೃತ್ತದಿಂದ ಎಸ್ಟೀಮ್ ಮಾಲ್‌ವರೆಗೆ ಸುಮಾರು 3 ಕಿ.ಮೀ. ದೂರ (ಹೆಬ್ಬಾಳ ಜಂಕ್ಷನ್‌ಗೆ ಸಂಪರ್ಕಿಸುವ ಎಲ್ಲಾ ಮೇಲು ರಸ್ತೆಗಳು), 10.5 ಮೀಟರ್ ಅಗಲವುಳ್ಳ ಒಂದು ಪಥವನ್ನು ವಿಸ್ತರಿಸಲು ನೀಲನಕ್ಷೆ ರೂಪಿಸಲಾಗಿದೆ ಎಂದು ಬಿಡಿಎ ಅಧಿಕಾರಿ ಮಾಹಿತಿ ನೀಡಿದರು.
ಬಸ್ಸಲ್ಲಿ ಫ್ರೀ ಬಿಡಲ್ಲ: ಪೌರಕಾರ್ಮಿಕರು
ನಗರ ಪ್ರದಕ್ಷಿಣೆ ವೇಳೆ ಮಹಿಳಾ ಪೌರ ಕಾರ್ಮಿಕರು ನಮಗೆ ಸ್ಥಳೀಯ ವಿಳಾಸದ ಆಧಾರ್ ಹಾಗೂ ಮತದಾರರ ಗುರುತಿನ ಚೀಟಿ ಇಲ್ಲ. ಹೀಗಾಗಿ, ಗುರುತಿನ ಚೀಟಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿ ಎಂದು ಡಿ.ಕೆ.ಶಿವಕುಮಾರ್ ಅವರ ಬಳಿ ಮನವಿ ಮಾಡಿದರು. ಆಗ ಡಿ.ಕೆ.ಶಿವಕುಮಾರ್ ಸ್ಥಳೀಯ ವಿಳಾಸದ ಮತದಾರ ಗುರುತಿನ ಚೀಟಿ ಮಾಡಿಸಿಕೊಳ್ಳಿ, ಆಗ ಬಸ್‌ನಲ್ಲಿ ಉಚಿತವಾಗಿ ಸಂಚಾರ ಮಾಡಬಹುದು ಎಂದು ಹೇಳಿದರು.
