ಹೂವಿನಹಡಗಲಿಯ ಕೋಮಾರನಹಳ್ಳಿ ತಾಂಡಾದಲ್ಲಿ ವಿದ್ಯುತ್ ತಂತಿ ತಗುಲಿ, ಭತ್ತದ ಹುಲ್ಲು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೆಂಕಿ ಬಿದ್ದು ಹುಲ್ಲು ಸುಟ್ಟು ಬೂದಿಯಾಗಿದೆ. ರೈತನಿಗೆ ಸುಮಾರು ₹50,000 ನಷ್ಟ ಸಂಭವಿಸಿದ್ದು, ಪರಿಹಾರ ನೀಡುವಂತೆ ರೈತರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ವಿಜಯನಗರ(ನ.21):ಭತ್ತದ ಹುಲ್ಲಿನ ಪೆಂಡಿ ಹೊತ್ತೊಯ್ಯುತ್ತಿದ್ದ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ದುರ್ಘಟನೆ ವಿಜಯಪುರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೋಮಾರನಹಳ್ಳಿ ತಾಂಡಾದಲ್ಲಿ ನಡೆದಿದೆ.
ರೈತ ರಮೇಶ್ ನಾಯಕ ಎಂಬುವವರಿಗೆ ಸೇರಿದ್ದ ಟ್ರ್ಯಾಕ್ಟರ್. ನೂರಾರು ಭತ್ತದ ಪೆಂಡಿಗಳನ್ನು ಹೊತ್ತೊಯ್ಯುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಜಮೀನಿನ ಮೇಲೆ ವಿದ್ಯುತ್ ಸರ್ವಿಸ್ ವೈರ್ ಹಾದುಹೋಗಿದೆ. ಇದೇ ಮಾರ್ಗವಾಗಿ ಟ್ರ್ಯಾಕ್ಟರ್ ಚಲಿಸುವಾಗ ಮೇಲಿನ ಭತ್ತದ ಹುಲ್ಲಿನ ಪೆಂಡಿಗಳಿಗೆ ವೈರ್ ತಗುಲಿ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಇಡೀ ಟ್ರಾಲಿಗೆ ಬೆಂಕಿ ಆವರಿಸಿಕೊಂಡು ಭತ್ತದ ಹುಲ್ಲು ಸಂಪೂರ್ಣ ಸುಟ್ಟು ಬೂದಿಯಾಗಿದೆ.
ಇದನ್ನೂ ಓದಿ: ತುಂಗಭದ್ರಾ ನದಿಯಿಂದ ಬಳ್ಳಾರಿಗೆ ಹರಿಯಲಿದೆ ಶುದ್ಧ ನೀರು! ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ₹770 ಕೋಟಿ ಮೆಗಾ ಯೋಜನೆ!
ಬೆಂಕಿ ನಂದಿಸಲು ರೈತರು ಯತ್ನ ವಿಫಲ
ಟ್ರಾಲಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿದ್ದ ರೈತರು ಬೆಂಕಿ ನಂದಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಇದರ ನಡುವೆ ಅಗ್ನಿ ಶಾಮಕ ದಳಕ್ಕೂ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದರಾದರು ಅಷ್ಟೊತ್ತಿಗೆ ಟ್ರಾಲಿಯಲ್ಲಿದ್ದ ಹುಲ್ಲು ಸಂಪೂರ್ಣ ಸುಟ್ಟು ಹೋಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ ಸುಮಾರು 50,000 ರೂಪಾಯಿದಷ್ಟು ನಷ್ಟ ಸಂಭವಿಸಿದೆ. ಜಮೀನಿನ ಮೇಲೆ ಕೆಳಮಟ್ಟದಲ್ಲಿ ವಿದ್ಯುತ್ ವೈರ್ ಹಾದುಹೋಗಿದ್ದರಿಂದ ದುರಂತ ಸಂಭವಿಸಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತನಿಗೆ ನಷ್ಟ ಪರಿಹಾರ ಕೊಡುವಂತೆ ರೈತರು ಆಗ್ರಹಿಸಿದರು.
















