ಮೊದಲ ದಿನದ ಕೆಲಸಕ್ಕೆ 2700 ಕಾರ್ಮಿಕರು ಹಾಜರು| ಕಳೆದ 115 ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಕಾರ್ಮಿಕರು| ಹಲವು ಭಾರಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಜತೆ ಸಭೆ ನಡೆಸಿದ್ದ ಸರ್ಕಾರ| 

ಬೆಂಗಳೂರು(ಮಾ.04): ಬಿಡದಿಯ ಟೊಯೋಟಾ ಕಿರ್ಲೋಸ್ಕರ್‌ ಮೋಟಾ​ರ್ಸ್‌ ಕಂಪನಿ ಮತ್ತು ಕಾರ್ಮಿಕರ ನಡುವೆ ಕಳೆದ 115 ದಿನಗಳಿಂದ ಉಂಟಾಗಿದ್ದ ಬಿಕ್ಕಟ್ಟು, ಕಾರ್ಮಿಕ ಇಲಾಖೆ ಸಚಿವ ಶಿವರಾಂ ಹೆಬ್ಬಾರ್‌ ಮಧ್ಯಪ್ರವೇಶದಿಂದ ಸುಖಾಂತ್ಯಗೊಂಡಿದೆ.

ಸರ್ಕಾರದ ಸೂಚನೆ ಮೇರೆಗೆ ಬುಧವಾರದಿಂದ ಪುನಾರಂಭಗೊಂಡ ಮೊದಲ ದಿನವಾದ ಬುಧವಾರ 2700 ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದರು. ವಿವಿಧ ಕಾರಣಗಳಿಗೆ ಕಿರ್ಲೋಸ್ಕರ್‌ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟು ಏರ್ಪಟ್ಟಿದ್ದರಿಂದ ಕಾರ್ಮಿಕರು 115 ದಿನಗಳಿಂದ ಮುಷ್ಕರ ನಡೆಸುತ್ತಿದ್ದರು. ಇತ್ತ ಕಂಪನಿ ಲಾಕ್‌ಔಟ್‌ ಮಾಡಲಾಗಿತ್ತು. ಆಗ ಸರ್ಕಾರ ಹಲವು ಭಾರಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಜತೆ ಸಭೆ ನಡೆಸಿತು. ಕಳೆದ ತಿಂಗಳು ಸಚಿವರು ಕಂಪನಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಿದ್ದರು. ಮಾ.1ರಂದು ಕಾರ್ಮಿಕ ಇಲಾಖೆಗೆ ಸಲ್ಲಿಕೆಯಾದ ಮನವಿ ಮೇರೆಗೆ ಕಾರ್ಮಿಕರು ಹಾಗೂ ಕಂಪನಿಗೆ ಹಲವು ಸಲಹೆ ಸೂಚನೆ ನೀಡಿದರು. ಅದರಂತೆ ಕಿರ್ಲೋಸ್ಕರ್‌ ಕಂಪನಿ ಆರಂಭಗೊಂಡಿದೆ ಎಂದು ಶಿವರಾಂ ಹೆಬ್ಬಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಚಾರ ದೊಡ್ಡದು ಮಾಡಬೇಡಿ : ಟೊಯೋಟಾ ಕಾರ್ಮಿಕರಿಗೆ ಎಚ್ಚರಿಕೆ

ಕಾರ್ಮಿಕ ಇಲಾಖೆ ಸಚಿವ ಶಿವರಾಂ ಹೆಬ್ಬಾರ್‌ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟೊಯೋಟಾ ಕಿರ್ಲೋಸ್ಕರ್‌ ಕಂಪನಿ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.