ರಾಮನಗರ (ಫೆ.01): ಸಣ್ಣ ವಿಚಾರವನ್ನು ದೊಡ್ಡದು ಮಾಡಿಕೊಂಡು ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಸಂಕಷ್ಟಕ್ಕೆ ಗುರಿಯಾಗುವುದು ಬೇಡ. ಕಾರ್ಮಿಕರು ಮುಷ್ಕರವನ್ನು ಅಂತ್ಯಗೊಳಿಸಿ ನಿರ್ಭಿತಿಯಿಂದ ಕೆಲಸಕ್ಕೆ ಮರಳಬೇಕು ಎಂದು ಶಾಸಕ ಎ.ಮಂಜುನಾಥ್‌ ಮನವಿ ಮಾಡಿದರು.

ಬಿಡದಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಷಣ ಮಾಡುವವರಿಂದ, ಚಪ್ಪಾಳೆ ತಟ್ಟಿಸೀಟಿ ಹೊಡೆಯವುದರಿಂದ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ. ಕಿವಿ ಊದುವವರ ಮಾತಿಗೆ ಮರುಳಾಗದೆ ಹಠಮಾರಿ ಧೋರಣೆ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಅಡಳಿತ ಮಂಡಳಿಯಿಂದ ಏನಾದರೂ ಲೋಪದೋಷಗಳಿದ್ದಲ್ಲಿ ಅದನ್ನು ಸರಿಪಡಿಸುವ ಕೆಲಸ ನಾವು ಮಾಡುತ್ತೇವೆ. ಪ್ರತಿ 15 ದಿನಕ್ಕೊಮ್ಮೆ ನಿಮ್ಮ ಸಮಸ್ಯೆ ಅಲಿಸಲು ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಮಿಕ ಸಚಿವರು ಹಾಗೂ ತಾವು ಸಿದ್ದರಿದ್ದೇವೆ ಎಂದರು.

ಲ್ಯಾಂಡ್ ಕ್ರೂಸರ್ SUV ಕಾರು ಓಡಿಸಿದ 5 ವರ್ಷದ ಪುಟ್ಟ ಬಾಲಕ; ವಿಡಿಯೋ ವೈರಲ್ ...

ಅಮಾನತುಗೊಂಡಿರುವ ನೌಕರರ ವಿಚಾರಣೆಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗುವುದು. ಆಡಳಿತ ಮಂಡಳಿಯವರು ಎರಡು ಲೈನ್‌ ಇರುವ ಮುಚ್ಚಳಿಕೆ ಪತ್ರ(ಅಂಡರ್‌ ಟೇಕಿಂಗ್) ಬರೆದುಕೊಡುವಂತೆ ಸರಳ ಷರತ್ತನ್ನು ಹಾಕಿದ್ದಾರೆ. ಈ ಬಗ್ಗೆ ಭಯ ಬೇಡ ಕಾನೂನಾತ್ಮಕ ವ್ಯವಸ್ಥೆಯನ್ನು ವಿರೋಧಿಸಿ ಪ್ರತಿದಿನ ಬೀದಿಯಲ್ಲಿ ಕುಳಿತು ಮುಷ್ಕರ ನಡೆಸುತ್ತಿರುವುದು ಎಷ್ಟುಸರಿ ಎಂಬುದನ್ನು ಕಾರ್ಮಿಕ ಸಂಘದವರು ಅರ್ಥೈಸಿಕೊಳ್ಳಬೇಕು ಎಂದರು.

ಮೊನ್ನೆ ನಡೆದ ಪಾದಯಾತ್ರೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ಡಿಸಿಎಂ ಬಗ್ಗೆ ಖಾರವಾಗಿ ಮಾತನಾಡಿದ್ದಾರೆ. ವಾರದೊಳಗೆ ಸಮಸ್ಯೆ ಬಗೆಹರಿಯದಿದ್ದರೇ ಕಾರ್ಖಾನೆಗೆ ಬೀಗ ಹಾಕುವುದಾಗಿ ತಿಳಿಸಿದ್ದಾರೆ. ಹಾಗಾದರೆ ಕಾಂಗ್ರೆಸ್‌ನವರು ಕಾರ್ಮಿಕರಿಗೆ ನ್ಯಾಯ ಕೊಡಿಸುವ ಬದಲಾಗಿ ಬೀದಿಗೆ ತಳ್ಳುವ ಚಿಂತನೆ ನಡೆಸಿದ್ದಾರೆಯೇ? ಎಂದು ಸಂಸದ ಡಿ.ಕೆ.ಸುರೇಶ… ಅವರಿಗೆ ತಿರುಗೇಟು ನೀಡಿದರು.

ಕಾರ್ಖಾನೆಗೆ ಬೀಗ ಹಾಕಿ ಬಿಡುತ್ತೇವೆ ಎಂದು ಉಢಾಪೆಯಾಗಿ, ಬಾಯಿಚಪಲಕ್ಕೆ ಮಾತನಾಡಿ, ಚಪ್ಪಾಳೆ ಗಿಟ್ಟಿಸಿಕೊಳ್ಳುವ ಕಾಂಗ್ರೆಸ್‌ ಮಹಾನಾಯಕರು ಕಾರ್ಮಿಕರಿಗೆ ಯಾವ ರೀತಿಯ ನ್ಯಾಯ ಕೊಡಿಸುತ್ತಾರೋ ಗೊತ್ತಿಲ್ಲ ಎಂದು ಬಾಲಕೃಷ್ಣ ವಿರುದ್ಧವೂ ಹರಿಹಾಯ್ದರು.