ಸೆಲ್ಪಿಗಾಗಿ ಸೂರ್ಯಕಾಂತಿಗೆ ಮುಗಿಬಿದ್ದ ಜನ, ಲಾಸ್ ತುಂಬಿಕೊಳ್ಳಲು ರೈತರ ಹೊಸ ಐಡಿಯಾ
* ಸೌಂದರ್ಯ ಲೋಕ ಧರೆಗಿಳಿಸಿದಂತಿದೆ ಸೂರ್ಯಕಾಂತಿ ಸಾಮ್ರಾಜ್ಯ!.
* ಸೆಲ್ಪಿ ಕ್ಲಿಕ್ಕಿಸಿಕೊಳ್ಳೋದ್ರಲ್ಲಿ ಮಗ್ನರಾದ ಪ್ರವಾಸಿಗರ ದಂಡು.
* ಲಾಸ್ ತುಂಬಿಕೊಳ್ಳಲು ರೈತರ ಹೊಸ ಐಡಿಯಾ.
ವರದಿ - ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ, (ಜುಲೈ.10): ಅದು ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟಗುಡ್ಡ, ನಡುವೆ ನಳನಳಿಸುತ್ತಿರುವ ಸೂರ್ಯಕಾಂತಿ,ಚೆಂಡು ಹೂ ಬೆಳೆ. ಸೂರ್ಯಕಾಂತಿಗೆ ಮನಸೋತ ಪ್ರವಾಸಿಗರಿಂದ ಸೆಲ್ಪಿ ಸಂಭ್ರಮ, ಈ ಸೆಲ್ಪಿ ಸಂಭ್ರಮವನ್ನೇ ಲಾಭ ಮಾಡಿಕೊಳ್ಳಲು ರೈತರು ಮುಂದಾಗಿದ್ದಾರೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಹೌದು.. ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ಪೂರ್ವಮುಂಗಾರು ಮಳೆ ಉತ್ತಮವಾಗಿದೆ. ಹಾಗಾಗಿ ಗುಂಡ್ಲುಪೇಟೆ ತಾಲೂಕಿನಲ್ಲಿ ಭರ್ಜರಿ ಸೂರ್ಯಕಾಂತಿ,ಚೆಂಡು ಹೂ ಬೆಳೆದು ನಿಂತಿದೆ. ಅದರಲ್ಲೂ ಗುಂಡ್ಲುಪೇಟೆಯಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 67 ಹಾಗೂ ಇನ್ನೊಂದೆಡೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ರ ಇಕ್ಕೆಲದ ಜಮೀನುಗಳಲ್ಲಿ ರೈತರು ಬೆಳೆದಿರುವ ಸೂರ್ಯಕಾಂತಿ ಬೆಳೆ ಸೌಂದರ್ಯದ ಲೋಕದಂತೆ ಕಂಗೊಳಿಸುತ್ತಿವೆ. ವಾರದ ರಜಾದಿನಗಳು ಬಂತೆದರೆ ಸಾಕು ಬಂಡಿಪುರ, ಗೋಪಾಲಸ್ವಾಮಿ ಬೆಟ್ಟ , ಊಟಿ, ಹೀಗೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.
ಅನಾಗರಿಕರು...ಬೆಳೆ ನಡುವೆ ಸೆಲ್ಫಿ ಬೇಡ ಎಂದ ರೈತನಿಗೆ ಮಾಡಿದ್ದೇನು
ಕರ್ನಾಟಕ, ತಮಿಳುನಾಡು ಹಾಗು ಕೇರಳ ರಾಜ್ಯಗಳಿಗೆ ಈ ಹೆದ್ದಾರಿಗಳಲ್ಲಿ ಸಂಚರಿಸುವಾಗ ರಸ್ತೆಯ ಎರಡು ಕಡೆ ಹೂವಿನ ಚೆಲುವನ್ಬು ಸವಿಯದ ಪ್ರವಾಸಿಗನಿಲ್ಲ, ಮನಸ್ಸಿನಲ್ಲಿ ಎಷ್ಟೆ ಬೇಸರವಿದ್ದರು ಹೂವಿನ ಬಣ್ಣ ಸುವಾಸನೆ ಸೆಳೆದು ಬಿಡುತ್ತದೆ. ಪ್ರವಾಸಿಗರ ಮನಸ್ಸನ್ನು ಉಲ್ಲಾಸಗೊಳಿಸಿ ಯಾವುದೋ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಪ್ರವಾಸಿಗರನ್ನು ಸೂರ್ಯಕಾಂತಿ ತನ್ನ ಅಂದಚಂದದಿಂದ ಕೈ ಬೀಸಿ ಕರೆಯುತ್ತಿದೆ. ಕಣ್ಣಿಗೆ ತಂಪು ನೀಡುವ ಹಳದಿ ಹೂವಿನನಿಂದ ಕಂಗೊಳಿಸುತ್ತಿರುವ ಸೂರ್ಯಕಾಂತಿಗೆ ಮನಸೋತ ಪ್ರವಾಸಿಗರು ರಸ್ತೆ ಬದಿ ತಮ್ಮ ವಾಹನಗಳನ್ನು ನಿಲ್ಲಿಸಿ ಸೂರ್ಯಕಾಂತಿ ಬೆಳೆದು ನಿಂತಿರುವ ಹೊಲಗಳಿಗೆ ಲಗ್ಗೆ ಇಡುತ್ತಿದ್ದಾರೆ. ಹಳದಿ ಹೂವಿನ ನಡುವೆ ನಿಂತು ಗ್ರೂಪ್ ಫೋಟೋ ಹಾಗು ಸೆಲ್ಪಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದು, ಹತ್ತಾರು ರೀತಿಯಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ.
ಫೋಟೋಗೆ 50 ರೂ ಫಿಕ್ಸ್
ಇನ್ನೂ ಪ್ರವಾಸಿಗರು ಸೆಲ್ಪಿ ಹೊಡೆದುಕೊಳ್ಳುವ ವೇಳೆ ಗಿಡಗಳು ಹಾನಿಗೀಡಾಗುವ ಸಂಭವವಿದೆ. ಫೋಟೋ ಹಾಗೂ ಸೆಲ್ಪಿ ತೆಗೆದುಕೊಳ್ಳುಲು ಬರುವವರಿಂದ ಸೂರ್ಯಕಾಂತಿ ಗಿಡಗಳು ಮುರಿದು ಹಾಳಾಗಿ ರೈತರಿಗೆ ನಷ್ಟವಾಗುವ ಸಂಭವ ಇದೆ. ಹಾಗಾಗಿ ಈ ನಷ್ಟ ತಪ್ಪಿಸಿಕೊಳ್ಳಲು ರೈತರು ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಸೆಲ್ಪಿ ತೆಗೆದುಕೊಳ್ಳಲು ಬರುವ ಪ್ರವಾಸಿಗರಿಗೆ ಇಬ್ಬರಿಗೆ 50 ರೂ ನಿಗದಿಪಡಿಸಿದ್ದಾರೆ. ಇಡೀ ಫ್ಯಾಮಿಲಿ ಫೋಟೋ ತೆಗೆದುಕೊಳ್ಳಲು 100 ರೂಪಾಯಿ ದರ ನಿಗದಿ ಮಾಡಿದೆ. ಯಾರೇ ಆಗಲಿ ಸೂರ್ಯಕಾಂತಿ ಹೊಲದಲ್ಲಿ ಫೋಟೋ ಅಥವಾ ಸೆಲ್ಪಿ ತೆಗೆದುಕೊಳ್ಳಲು ಜಮೀನಿನ ರೈತನಿಗೆ ತಲಾ ಹತ್ತು ರೂಪಾಯಿ ನೀಡಬೇಕು.
ಒಟ್ಟಾರೆ ಸೆಲ್ಪಿಗೆ ದರ ನಿಗಧಿಪಡಿಸಿರುವುದರಿಂದ ಒಂದೆಡೆ ರೈತರಿಗೆ ವರಮಾನವೂ ಬಂದಂತೆ ಆಗುತ್ತಿದೆ. ಇನ್ನೊಂದೆಡೆ ರೈತರಿಗೆ ತಮ್ಮ ಬೆಳೆಯನ್ನು ಕಾದು ರಕ್ಷಣೆ ಮಾಡಿದಂತೆ ಆಗುತ್ತಿದೆ. ಈ ಬಾರಿ ಉತ್ತಮವಾಗಿ ಬೆಳೆದಿರುವ ಸೂರ್ಯಕಾಂತಿ ಬೆಳೆ ತನ್ನ ಅಂದ ಚಂದದಿಂದ ಪ್ರವಾಸಿಗರಿಗೆ ಮುದ ನೀಡಿದರೆ, ಬೆವರು ಸುರಿಸಿ ಬೆಳೆದ ರೈತನಿಗೂ ಲಾಭ ಮಾಡಿಕೊಡುತ್ತಿದೆ...