ಹಂಪೀಲಿ ಕುಡಿವ ನೀರಿಗೆ ಬರ: ಪ್ರವಾಸಿಗರ ಪರದಾಟ..!

*  ಸ್ಮಾರಕಗಳ ಬಳಿ ದೊರೆಯದ ಶುದ್ಧ ಕುಡಿಯುವ ನೀರು
*  ವಿಶ್ವಪರಂಪರೆ ತಾಣದಲ್ಲಿ ಪ್ರವಾಸಿಗರ ಪರದಾಟ
*  ಮೂಲಸೌಕರ್ಯ ಒದಗಿಸಲಿ 
 

Tourists Faces Drinking Water Problem in Hampi grg

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಜೂ.11): ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರು ದೊರೆಯದೆ ಪರಿತಪಿಸುತ್ತಿದ್ದಾರೆ. ಹೀಗಿದ್ದರೂ ಸಂಬಂಧಿಸಿದ ಇಲಾಖೆಗಳು ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವತ್ತ ಚಿತ್ತಹರಿಸುತ್ತಿಲ್ಲ. ವಿಜಯನಗರ ಸಾಮ್ರಾಜ್ಯದ ಕಾಲದ ರಾಜಧಾನಿಯಾಗಿದ್ದ ಹಂಪಿಯಲ್ಲಿ ಆಗ ನೀರಾವರಿಗೆ ಆದ್ಯತೆ ಕೊಡಲಾಗಿತ್ತು. ಆದರೆ, ಈಗ ಪ್ರವಾಸಿಗರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಆಗುತ್ತಿಲ್ಲ.

ಪ್ರವಾಸಿಗರ ದಂಡು:

ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಲು ನಿತ್ಯ ಪ್ರವಾಸಿಗರ ದಂಡು ಹರಿದು ಬರುತ್ತದೆ. ದಣಿವಾರಿಸಿಕೊಳ್ಳಲು ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಬಿಸಿಲಿನಲ್ಲಿ ನೀರಸಗೊಂಡು ಹಿಂದಿರುಗುತ್ತಿದ್ದಾರೆ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವುದು ಪ್ರವಾಸಿಗರಲ್ಲಿ ಬೇಸರವನ್ನುಂಟು ಮಾಡಿದೆ. ಹಂಪಿಯ ಸ್ಮಾರಕಗಳನ್ನು ನೋಡಲು ಒಂದು ದಿನ ಸಾಲದು. ಹೀಗಿದ್ದರೂ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಇಲ್ಲದಾಗಿದೆ.

ಹಂಪಿ ಬಳಿ ತಲೆ ಎತ್ತಲಿದೆ ವಿಶ್ವ ದರ್ಜೆಯ ತ್ರೀಸ್ಟಾರ್ ಹೋಟೆಲ್!

ನಿರುಪಯುಕ್ತ:

ಹಂಪಿಯ ವಿಜಯವಿಠ್ಠಲ ದೇಗುಲ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ ಸೇರಿ ವಿವಿಧ ಸ್ಮಾರಕಗಳ ಬಳಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಕಮಲ್‌ ಮಹಲ್‌ ಮತ್ತು ವಿಜಯ ವಿಠ್ಠಲ ದೇಗುಲದ ಬಳಿ ಇರುವ ಟಿಕೆಟ್‌ ಕೌಂಟರ್‌ ಬಳಿ ಘಟಕಗಳಿದ್ದರೂ ಅವು ಕಾರ್ಯನಿರ್ವಹಿಸುತ್ತಿಲ್ಲ. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಸೂಕ್ತ ಸೌಕರ್ಯಗಳಿಲ್ಲ. ವಿಜಯವಿಠ್ಠಲ ದೇಗುಲಕ್ಕೆ ಕೆಲವರು ಕಾಲ್ನಡಿಗೆಯಿಂದ, ಕೆಲವರು ಬ್ಯಾಟರಿ ಚಾಲಿತ ವಾಹನಗಳ ಮೂಲಕ ತೆರಳಿ ಸ್ಮಾರಕಗಳನ್ನು ವೀಕ್ಷಿಸುತ್ತಾರೆ.

ವಾಹನಗಳ ಟಿಕೆಟ್‌ ಕೌಂಟರ್‌ನ ಪಕ್ಕದಲ್ಲಿ ಕುಡಿಯುವ ನೀರಿನ ಘಟಕವಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಈ ಕುರಿತು ಹಂಪಿ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಪುರಾತತ್ವ ಇಲಾಖೆ ಹಾಗೂ ಸಂಬಂಧಪಟ್ಟಿರುವ ಇಲಾಖೆ ಅಧಿಕಾರಿಗಳು ಶೀಘ್ರದಲ್ಲೇ ಪರಿಶೀಲಿಸಿ ಪ್ರವಾಸಿಗರಿಗೆ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಒದಗಿಸಬೇಕು ಎಂಬುದು ಪ್ರವಾಸಿಗರ ಆಗ್ರಹವಾಗಿದೆ.

ಮೂಲಸೌಕರ್ಯ ಒದಗಿಸಲಿ:

ಹಂಪಿ ವಾಸ್ತುಶಿಲ್ಪ ಹಾಗೂ ಧಾರ್ಮಿಕ ಪರಂಪರೆಯಿಂದ ಮಹತ್ವವನ್ನು ಪಡೆದಿದ್ದು ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಹಂಪಿಯ ಸ್ಮಾರಕಗಳು ಮತ್ತು ಪ್ರಮುಖ ದೇವಸ್ಥಾನಗಳನ್ನು ವೀಕ್ಷಿಸಲು ವಾಹನಗಳ ವ್ಯವಸ್ಥೆ ಇದ್ದರೂ, ಕಾಲ್ನಡಿಗೆಯಲ್ಲಿ ತೆರಳದೇ ಎಲ್ಲ ಸ್ಮಾರಕಗಳನ್ನು ನೋಡಲು ಆಗುವುದಿಲ್ಲ. ಹಾಗಾಗಿ ಪ್ರವಾಸಿಗರ ಅನುಕೂಲಕ್ಕಾಗಿ ಪ್ರಮುಖ ಸ್ಮಾರಕಗಳ ಬಳಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ಪ್ರವಾಸಿಗರ ಒತ್ತಾಯವಾಗಿದೆ.

Vijayanagara: ಐತಿಹಾಸಿಕ ಹಂಪಿಯ ಸ್ಮಾರಕದ ಸೌಂದರ್ಯಕ್ಕೆ ಮನಸೋತ ಜೆಪಿ ನಡ್ಡಾ

ಹಂಪಿಯ ವಿಜಯ ವಿಠ್ಠಲ ದೇವಾಲಯದ ಬಳಿಯ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಬಂದಿದೆ. ಪ್ರವಾಸಿಗರಿಗೆ ಪ್ರಮುಖ ಸ್ಮಾರಕಗಳ ಬಳಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಅಂತ ಶ್ರೀ ಕೃಷ್ಣದೇವರಾಯ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಪ್ರತಿಷ್ಠಾನ ಸಂಸ್ಥಾಪಕ ಎಚ್‌. ಹುಲುಗಪ್ಪ ತಿಳಿಸಿದ್ದಾರೆ. 

ಹಂಪಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಭಾರಿ ಬಿಸಿಲಿನಲ್ಲಿ ಕುಡಿಯುವ ನೀರು ದೊರೆಯದೇ ಸಮಸ್ಯೆಯಾಗುತ್ತಿದೆ. ಹಂಪಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಲಿ ಅಂತ ಪ್ರವಾಸಿಗರಾದ ಶ್ರಾವ್ಯ, ನಯನಾ, ಕಿಶೋರ್‌ಕುಮಾರ, ಮನೋಹರ್‌ ಹೇಳಿದ್ದಾರೆ. 

Latest Videos
Follow Us:
Download App:
  • android
  • ios