Asianet Suvarna News Asianet Suvarna News

ಹೊಸ ವರ್ಷಾಚರಣೆಗೆ ಪ್ರವಾಸಿಗರ ದಂಡು, ಕೋವಿಡ್ ನಿಯಂತ್ರಣಕ್ಕೆ ಮುಂದಾಗುತ್ತಾ ಕೊಡಗು ಜಿಲ್ಲಾಡಳಿತ

ಪ್ರವಾಸೋದ್ಯಮ ಜಿಲ್ಲೆಯಾಗಿರುವ ಕೊಡಗಿನಲ್ಲಿ ಹೊಸವರ್ಷಾಚರಣೆಗೆ ಸಕಲ ಸಿದ್ಧತೆ ನಡೆದಿದೆ. ಹೋಂಸ್ಟೇ, ರೆಸಾರ್ಟ್ ಹಾಗೂ ಹೊಟೇಲ್‌ಗಳು ಭರ್ತಿಯಾಗಿವೆ. ಆದರೆ ವಿವಿಧ ರಾಷ್ಟ್ರಗಳಲ್ಲಿ ಅಬ್ಬರಿಸುತ್ತಿರುವ ಒಮೆಕ್ರಾನ್ ಬಿಎಫ್ 7 ಕೊಡಗಿನ ಪ್ರವಾಸೋದ್ಯಮ ತತ್ತರಿಸುವಂತೆ ಮಾಡಿದೆ.

tourist flock for the new year celebration can Kodagu district administration is taking steps to control the covid 19 gow
Author
First Published Dec 23, 2022, 8:21 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣನ್ಯೂಸ್ 

ಕೊಡಗು (ಡಿ.23): ಪ್ರವಾಸೋದ್ಯಮ ಜಿಲ್ಲೆಯಾಗಿರುವ ಕೊಡಗಿನಲ್ಲಿ ಹೊಸವರ್ಷಾಚರಣೆಗೆ ಸಕಲ ಸಿದ್ಧತೆ ನಡೆದಿದೆ. ಹೋಂಸ್ಟೇ, ರೆಸಾರ್ಟ್ ಹಾಗೂ ಹೊಟೇಲ್‌ಗಳು ಭರ್ತಿಯಾಗಿವೆ. ಆದರೆ ವಿವಿಧ ರಾಷ್ಟ್ರಗಳಲ್ಲಿ ಅಬ್ಬರಿಸುತ್ತಿರುವ ಒಮೆಕ್ರಾನ್ ಬಿಎಫ್ 7 ಕೊಡಗಿನ ಪ್ರವಾಸೋದ್ಯಮ ತತ್ತರಿಸುವಂತೆ ಮಾಡಿದೆ. ಹಾಗಾದ್ರೆ ಕೊಡಗಿನಲ್ಲಿ ಪ್ರವಾಸೋದ್ಯಮ ಹೇಗಿದೆ, ಕೋವಿಡ್ ನಿಯಮ ಹೇಗಿದೆ ಎನ್ನುವುದರ ಡಿಟೇಲ್ಸ್ ಇಲ್ಲಿದೆ. ಪ್ರಕೃತಿಯ ಸೌಂದರ್ಯದ ತಾಣವಾಗಿರುವ ಕೊಡಗಿನಲ್ಲಿ ಹಚ್ಚಹಸಿರನ ಪರಿಸರದಲ್ಲಿ ಹೊಸವರ್ಷ ಆಚರಣೆಗೋಸ್ಕರವಾಗಿಯೇ ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು ಬರುತ್ತಾರೆ. ಅದಕ್ಕಾಗಿ ಈಗಾಗಲೇ ಜಿಲ್ಲೆಯ ಬಹುತೇಕ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳು ಬುಕಿಂಗ್ ಆಗಿವೆ. ದೊಡ್ಡ ದೊಡ್ಡ ಹೊಟೇಲ್, ಹೋಂಸ್ಟೇ, ರೆಸಾರ್ಟ್ ಅಂದರೆ ಹೆಚ್ಚು ವೆಚ್ಚದ ರೂಂಗಳು ಈಗಾಗಲೇ ಶೇಕಡ 80 ರಷ್ಟು ಭರ್ತಿಯಾಗಿವೆ. ಉಳಿದ 20 ರಷ್ಟು ರೂಂಗಳಿಗೆ ಬುಕಿಂಗ್ ಆಗುತ್ತಲೇ ಇವೆ. 

ಇನ್ನು ಕಡಿಮೆ ವೆಚ್ಚದ ರೂಂಗಳು ಕೂಡ ಈಗಾಗಲೇ ಶೇ 50 ರಷ್ಟು ಬುಕ್ ಆಗಿದ್ದು, ಉಳಿದವು ಕೂಡ ಭರ್ತಿಯಾಗುತ್ತಿವೆ. ಹೀಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಮೊದಲ ಎರಡು ವರ್ಷ ಕೊಡಗಿನಲ್ಲಿ ಆದ ಭೂಕುಸಿತ, ಪ್ರವಾಹ ಹಾಗೂ ನಂತರದ ಎರಡು ವರ್ಷ ಕೋವಿಡ್ನಿಂದಾಗಿ ಮಂಕಾಗಿದ್ದ ಪ್ರವಾಸೋದ್ಯಮ ಈ ಬಾರಿಯ ಇಯರ್ ಎಂಡಿಂಗ್ ಮತ್ತು ಹೊಸ ವರ್ಷಾಚರಣೆಗೆ ಉತ್ತಮ ಚೇತರಿಕೆ ಕಾಣುತ್ತಿದೆ ಎಂದು ಕೊಡಗು ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಾರೆ. 

ಒಂದೆಡೆ ಹೊಸ ವರ್ಷಾಚರಣೆಗೆ ಜಿಲ್ಲೆಗೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು  ಆಗಮಿಸಲು ಸಿದ್ಧರಾಗಿದ್ದರೆ, ಮತ್ತೊಂದೆಡೆ ಒಮೈಕ್ರಾನ್ ಮಹಾಮಾರಿ ವಿವಿಧ  ದೇಶಗಳಲ್ಲಿ ಅಬ್ಬರಿಸುತ್ತಿದ್ದು ದೇಶಕ್ಕೂ ಕಾಲಿಟ್ಟಿದೆ. ಇದು ರಾಜ್ಯಕ್ಕೂ ಅಷ್ಟೇ ಏಕೆ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಂದಾಗಿ ಜಿಲ್ಲೆಗೂ ಒಕ್ಕರಿಸಿಬಿಡುತ್ತಾ ಎನ್ನುವ ಆತಂಕ ಎದುರಾಗಿದೆ. ಆದರೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಒಮೈಕ್ರಾನ್ ರೂಪಾಂತರಿ ಕಾಲಿಡದಂತೆ ಎಚ್ಚರವಹಿಸುತ್ತೇವೆ ಎನ್ನುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಅವರು ಸರ್ಕಾರ ಬಿಡುಗಡೆ ಮಾಡುವ ಕೋವಿಡ್ ಗೈಡ್ಲೈನ್ಸ್ಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಜೊತೆಗೆ ನಮ್ಮದು ಗಡಿ ಜಿಲ್ಲೆಯಾಗಿರುವುದರಿಂದ ಕೇರಳದ ಮೂಲಕ ಹೊರ ರಾಷ್ಟ್ರಗಳಿಂದ ಜನರು ಬರುವ ಸಾಧ್ಯತೆಯೂ ಇದೆ.

2018ರಲ್ಲಿ ಕುಸಿದ ಸೇತುವೆಗಳಿಗೆ ಇನ್ನೂ ಆಗಿಲ್ಲ ಕಾಮಗಾರಿ, ಕೊಡಗು ಜನರ ಆಕ್ರೋಶ

 ಹೀಗಾಗಿ ರಾಜ್ಯದ ಗಡಿಚೆಕ್ ಪೋಸ್ಟ್ ಗಳಲ್ಲೂ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಸರ್ಕಾರ ನೀಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಆದರೆ ಜನರು ಕೋವಿಡ್ ಬೂಸ್ಟರ್ ಡೋಸ್ ವ್ಯಾಕ್ಸಿನ್ ಅನ್ನು ತಪ್ಪದೆ ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಇನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಅವರು ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಓಡಾಡಬೇಕು. ಜೊತೆಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹೀಗಿದ್ದರೆ ಬಿಎಫ್.7 ಸೋಂಕನ್ನು ತಡೆಯಲು ಸಾಧ್ಯವಿದೆ  ಎಂದಿದ್ದಾರೆ.

BIG 3: ಸೇತುವೆ ಕುಸಿದು 6 ತಿಂಗಳಾದ್ರೂ ಡೋಂಟ್ ಕೇರ್: ಕೊಡಗು ಜನರ ಸಮಸ್ಯೆ ಕೇಳುವವರು ಯಾರು?

ಒಟ್ಟಿನಲ್ಲಿ ಕೊಡಗು ಜಿಲ್ಲೆಯ ಆರ್ಥಿಕ ಬೆಳವಣಿಗೆಯ ದೊಡ್ಡ ಮೂಲವಾಗಿರುವ ಪ್ರವಾಸೋದ್ಯಮ ಚೇತರಿಸಿಕೊಳ್ಳುವ ಸಂದರ್ಭದಲ್ಲೇ ಒಮೈಕ್ರಾನ್ ಮಹಾಮಾರಿಯ ಆತಂಕ ಎದುರಾಗಿದ್ದು, ಹೊಸವರ್ಷಾಚರಣೆ ಸಂದರ್ಭದಲ್ಲಿ ರಾಜ್ಯ, ಅಂತಾರಾಜ್ಯಗಳಿಂದ ಬರುವ ಪ್ರವಾಸಿಗರಿಂದ ಸೋಂಕು ಹರಡದಂತೆ ಜಿಲ್ಲಾಡಳಿತ ಹೇಗೆ ತಡೆಯುತ್ತೇ ಎನ್ನುವುದು ಕಾದು ನೋಡಬೇಕಾಗಿದೆ.

Follow Us:
Download App:
  • android
  • ios