Asianet Suvarna News Asianet Suvarna News

2018ರಲ್ಲಿ ಕುಸಿದ ಸೇತುವೆಗಳಿಗೆ ಇನ್ನೂ ಆಗಿಲ್ಲ ಕಾಮಗಾರಿ, ಕೊಡಗು ಜನರ ಆಕ್ರೋಶ

2018ರಿಂದ ಕೊಡಗಿನಲ್ಲಿ ಪ್ರತಿ ವರ್ಷ ನಿರಂತರವಾಗಿ ಭೂಕುಸಿತ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ನೂರಾರು ಸೇತುವೆಗಳು ಕೊಚ್ಚಿ ಹೋಗಿವೆ. ಅದರಲ್ಲಿ ಕೆಲವು ಸೇತುವೆಗಳನ್ನು ನಾಲ್ಕು ವರ್ಷಗಳು ಕಳೆದರೂ ಇನ್ನೂ ಮರು ನಿರ್ಮಾಣ ಮಾಡಿಲ್ಲ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ, ಕಾಮಗಾರಿಗಳನ್ನು ಮಾಡಲಾಗಿದೆ ಎನ್ನುತ್ತಿದ್ದಾರೆ. ಇದರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Kodagu people outraged about bridge construction not completed that collapsed in 2018 gow
Author
First Published Dec 20, 2022, 10:29 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಡಿ.20): ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ಕೊಡಗು ಜಿಲ್ಲೆ 2018 ರಿಂದ ಆರಂಭವಾದ ಭೂಕುಸಿತ ಮತ್ತು ಪ್ರವಾಹ ಜಿಲ್ಲೆಯ ಜನರ ಬದುಕನ್ನು ಜರ್ಜರಿತಗೊಳ್ಳುವಂತೆ ಮಾಡಿದೆ. ಇದ್ದ ಸೇತುವೆಗಳು ಕುಸಿದು ಹೋದ ಪರಿಣಾಮ ತಮ್ಮ ಮನೆಗಳಿಗೂ ನೆಮ್ಮದಿಯಿಂದ ಓಡಾಡಲು  ಅವಕಾಶವಿಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹಾಗಾದರೆ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಸೇತುವೆಗಳ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ನೀವು ನೋಡಿದರೆ ಭಯ ಪಡುತ್ತೀರಿ.  ವಿಧಿಯಿಲ್ಲದೆ ಅಂತಹ ಪರಿಸ್ಥಿತಿಯಲ್ಲೇ ಜನರು ಓಡಾಡುತ್ತಿದ್ದಾರೆ. ಮುರಿದು ಬಿದ್ದ ಸೇತುವೆಗಳು, ಡಾಂಬರೀಕರಣಗೊಳ್ಳದ ರಸ್ತೆಗಳು ಹೇಗೋ ಒದ್ದಾಡಿಕೊಂಡು ಹಳ್ಳ, ಗುಂಡಿಗಳ ಇಳಿದು ನಡೆಯುತ್ತಿರುವ ಜನರು. ಇದು ಕೊಡಗಿನ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಎನ್ನುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.  

2018 ರಿಂದ ಕೊಡಗಿನಲ್ಲಿ ಪ್ರತಿ ವರ್ಷ ನಿರಂತರವಾಗಿ ಭೂಕುಸಿತ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ನೂರಾರು ಸೇತುವೆಗಳು ಕೊಚ್ಚಿ ಹೋಗಿವೆ. ಅದರಲ್ಲಿ ಕೆಲವು ಸೇತುವೆಗಳನ್ನು ನಾಲ್ಕು ವರ್ಷಗಳು ಕಳೆದರೂ ಇನ್ನೂ ಮರುನಿರ್ಮಾಣ ಮಾಡಿಲ್ಲ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ, ಕಾಮಗಾರಿಗಳನ್ನು ಮಾಡಲಾಗಿದೆ. ಇನ್ನಷ್ಟು ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿ ಇದೆ. ಹಂತ ಹಂತವಾಗಿ ಕಾಮಗಾರಿ ಮಾಡಲಾಗುತ್ತಿದ್ದು ಆದಷ್ಟು ಬೇಗ ಸೇತುವೆ, ರಸ್ತೆಗಳನ್ನು ಮಾಡಲಾಗುವುದು ಎನ್ನುತ್ತಿದ್ದಾರೆ. 

ಈ ವರ್ಷದ ಮಳೆಗಾಲದಲ್ಲೂ ಗ್ರಾಮೀಣ ಭಾಗದ 8 ಸೇತುವೆಗಳು ಕುಸಿದು ಹೋಗಿದ್ದವು. ಅವುಗಳನ್ನು ಕೂಡ ನಿರ್ಮಿಸಲಾಗುತ್ತಿದೆ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಪಂಚಾಯತ್ ರಾಜ್ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನಾಗೇಂದ್ರಪ್ಪ ಮಾಹಿತಿ ನೀಡಿದ್ದಾರೆ. ಆದರೆ ಕೆಲವೆಡೆ ನಿಜವಾಗಿಯೂ ಕಾಮಗಾರಿ ಆರಂಭಿಸುವ ಮಾತಿರಲಿ, ಕನಿಷ್ಠ ಅಧಿಕಾರಿಗಳು ಅತ್ತ ತಿರುಗಿ ನೋಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Kodagu: ಜನತೆಗೆ ಸಿಗದ ಆರೋಗ್ಯ ಸೇವೆ, ಪಾಲಿಬೆಟ್ಟ ಆಸ್ಪತ್ರೆ ಎದುರು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

 

ಗ್ರಾಮೀಣ ಭಾಗದ ಹಲವು ಸೇತುವೆಗಳು ಕೊಚ್ಚಿ ಹೋಗಿದ್ದು, ಇನ್ನೂ ಮರು ನಿರ್ಮಾಣವಾಗಿಲ್ಲ. ಅಧಿಕಾರಿಗಳೇ ಹೇಳುವಂತೆ ಇನ್ನೂ ಕೆಲವು ಸೇತುವೆಗಳನ್ನು ಈಗಷ್ಟೇ ನಿರ್ಮಿಸಲಾಗುತ್ತಿದ್ದು, ಮಾರ್ಚ್ ತಿಂಗಳ ಅಂತ್ಯದೊಳಗೆ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಜಿಲ್ಲೆಯ ಇಬ್ಬರು ಶಾಸಕರು ಸರ್ಕಾರದಿಂದ 1800 ಕೋಟಿ ಅನುದಾನ ತರಲಾಗಿದ್ದು, ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ನಿಜವಾಗಿಯೂ ಯಾವ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಜನರಿಗೆ ಬರೀ ಸುಳ್ಳು ಹೇಳುತ್ತಾ ದಾರಿ ತಪ್ಪಿಸುತ್ತಿದ್ದಾರೆ. ಇದೇ ರೀತಿ ಸುಳ್ಳು ಹೇಳುತ್ತಿದ್ದರೆ, ಜನರೇ ಸರಿಯಾದ ಉತ್ತರ ನೀಡುತ್ತಾರೆ. ಜನರ ಶಾಪ ಕೂಡ ಇವರಿಗೆ ತಟ್ಟುತ್ತದೆ ಎಂದು ಕೊಡಗು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಎಂ ಗಣೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Kodagu: ಮ್ಯಾಂಡೌಸ್ ಪರಿಣಾಮ ಅಕಾಲಿಕ ಮಳೆ: ಅಪಾರ ಬೆಳೆ ನಷ್ಟ

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಪ್ರವಾಹ ಮತ್ತು ಭೂಕುಸಿತದಲ್ಲಿ ಕೊಚ್ಚಿ ಹೋಗಿದ್ದ ಸೇತುವೆಗಳಲ್ಲಿ ಇನ್ನೂ ಎಷ್ಟೋ ಸೇತುವೆಗಳು ಮರು ನಿರ್ಮಾಣವಾಗದೆ ಗ್ರಾಮೀಣ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕುಸಿದು ಹೋಗಿರುವ ಸೇತುವೆಗಳು ಯಾವಾಗ ಮರು ನಿರ್ಮಾಣವಾಗುತ್ತವೆಯೋ ಎಂದು ಕಾತರದಿಂದ ಕಾಯುತ್ತಿದ್ದಾರೆ. ಇನ್ನಾದರೂ ಆದಷ್ಟು ಬೇಗ ಸೇತುವೆ, ಸಂಪರ್ಕ ರಸ್ತೆಗಳು ಆಗಲಿ ಎನ್ನುವುದು ನಮ್ಮ ಆಶಯ.

Follow Us:
Download App:
  • android
  • ios