Asianet Suvarna News Asianet Suvarna News

ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೆ ಬಲ: ಸಚಿವ ಮುರುಗೇಶ್ ನಿರಾಣಿ

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಕ್ಷೇತ್ರಗಳನ್ನು ಬಲಪಡಿಸುವ ಉದ್ದೇಶದಿಂದ ಬಾದಾಮಿ ತಾಲೂಕಿನ ಹಲಕುರ್ಕಿ ಬಳಿ ವಿಮಾನ ನಿಲ್ದಾಣ ಹಾಗೂ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿದ್ದೇನೆ ಎಂದು ಬೃಹತ್‌ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. 

Tourism gets a boost from the airport says minister murugesh nirani gvd
Author
First Published Oct 17, 2022, 10:18 PM IST

ಬಾಗಲಕೋಟೆ (ಅ.17): ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಕ್ಷೇತ್ರಗಳನ್ನು ಬಲಪಡಿಸುವ ಉದ್ದೇಶದಿಂದ ಬಾದಾಮಿ ತಾಲೂಕಿನ ಹಲಕುರ್ಕಿ ಬಳಿ ವಿಮಾನ ನಿಲ್ದಾಣ ಹಾಗೂ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿದ್ದೇನೆ ಎಂದು ಬೃಹತ್‌ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ಜಮೀನು ಹಾಗೂ ಕೃಷಿ ಸಾಧ್ಯತೆಯಿಲ್ಲದ ಜಮೀನು ಹಲಕುರ್ಕಿ ಭಾಗದಲ್ಲಿ ಹೆಚ್ಚಾಗಿದೆ. ಜೊತೆಗೆ ಅಲ್ಲಿನ ರೈತರಿಂದ ಒತ್ತಾಯಪೂರ್ವಕವಾಗಿ ಜಮೀನುಗಳನ್ನು ಪಡೆದುಕೊಳ್ಳುವುದಿಲ್ಲ. 

ಸ್ವ ಇಚ್ಛೆಯಿಂದ ಭೂಮಿಯನ್ನು ಕೈಗಾರಿಕೆಗೆ ನೀಡಲು ಮುಂದೆ ಬರುವವರ ಜಮೀನನ್ನು ಮಾತ್ರ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದು ಸ್ವಷ್ಟಪಡಿಸಿದರು. ಆ ಭಾಗದಲ್ಲಿ ಶೇಕಡಾ 25ರಷ್ಟುರೈತರ ಜಮೀನು ಬಿತ್ತನೆ ಮಾಡಲು ಯೋಗ್ಯವಿದೆ ಎಂದ ಸಚಿವರು, ಬಲವಂತದಿಂದ ಜಮೀನನ್ನು ಪಡೆಯುವುದಿಲ್ಲ. ಬಾದಾಮಿ ಹಾಗೂ ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲಿನಂಥ ಪ್ರವಾಸಿ ಹಾಗೂ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಸಮೀಪದಲ್ಲಿಯೇ ನಿರ್ಮಾಣಗೊಳ್ಳಲಿರುವ ವಿಮಾನನಿಲ್ದಾಣದಿಂದ ದೇಶ-ವಿದೇಶಿ ಪ್ರವಾಸಿಗರಿಗೆ ಸಮಯ ಹಾಗೂ ಹಣ ಉಳಿತಾಯವಾಗಲಿದೆ. ಜೊತೆಗೆ ಐಟಿಸಿಯಂಥ ಬೃಹತ್‌ ಹೋಟೆಲ್‌, ಉದ್ಯಮಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸಾಬರು ಜಾಸ್ತಿ ಇದ್ದಾರೆ ಅಂತ ಹುಡುಕ್ತಾ ಹೊರಟಿದ್ದಾರೆ: ಈಶ್ವರಪ್ಪ

ಎಕರೆಗೆ 18 ಲಕ್ಷ ಪರಿಹಾರ: ವಿಮಾನ ನಿಲ್ದಾಣ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಸ್ವಾಧೀನ ಪಡಿಸಿಕೊಳ್ಳುವ ಹಲಕುರ್ಕಿ ಭಾಗದ ರೈತರ ಪ್ರತಿ ಎಕರೆ ಜಮೀನಿಗೆ .18 ಲಕ್ಷ ಪರಿಹಾರ ಧನವನ್ನು ನೀಡಲಾಗುವುದು. ಆ ಜಮೀನಿನಲ್ಲಿ ಗಿಡ, ನೀರಾವರಿ ಬಾವಿ ಮನೆಗಳಿದ್ದರೆ, ಪ್ರತ್ಯೇಕವಾಗಿ ಪರಿಹಾರಧನ ವಿತರಿಸಲು ಸರ್ಕಾರ ಸಿದ್ಧವಿದೆ. ಈ ವಿಷಯದಲ್ಲಿ ಯಾರೂ ರಾಜಕಾರಣ ಮಾಡದೇ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಹಲಕುರ್ಕಿ ಭಾಗ ಎತ್ತರ ಪ್ರದೇಶದಲ್ಲಿ ಇರುವುದರಿಂದ ನೀರಾವರಿಗೆ ಒಳಪಡಿಸುವುದು ಕಷ್ಟಸಾಧ್ಯ ಎಂದ ಸಚಿವರು, ಹೆರಕಲ್‌ ಹಾಗೂ ಇತರ ಏತನೀರಾವರಿ ಸಂದರ್ಭದಲ್ಲಿ ಇದನ್ನು ಪ್ರಸ್ತಾಪಿಸಿದ್ದಾಗಿ ತಿಳಿಸಿದರು. ಕೈಗಾರಿಕೆಗಳ ಸ್ಥಾಪನೆಯ ನಂತರ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗದ ಆದ್ಯತೆ ದೊರೆಯಲಿದೆ. ಕನ್ನಡಿಗರಿಗೆ ಶೇ 75ರಷ್ಟುಉದ್ಯೋಗ ಆದ್ಯತೆ ಸಿಗಲಿದೆ. ಬರುವ ಕೈಗಾರಿಕೆಗಳು ಸಹ ಪರಿಸರ ಸ್ನೇಹಿ ಕೈಗಾರಿಕೆಗಳು ಬರಲಿವೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಬಾರದ ರೈತರು, ಕಾಯ್ದ ಸಚಿವರು: ವಿಮಾನನಿಲ್ದಾಣಕ್ಕೆ ಭೂಮಿ ನೀಡಲು ನಿರಾಕರಿಸಿ ಧರಣಿ ಸತ್ಯಾಗ್ರಹ ಆರಂಭಿಸಿರುವ ಹಲಕುರ್ಕಿ ಗ್ರಾಮದ ರೈತರ ಜೊತೆ ಮಾತುಕತೆಗೆ ಮುಂದಾಗಿದ್ದ ಸಚಿವ ಮುರುಗೇಶ ನಿರಾಣಿ ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ 2 ಗಂಟೆಗಳ ಕಾಲ ಕಾಯ್ದರೂ ಸಹ ರೈತರು ಜಿಲ್ಲಾಡಳಿತ ಭವನದತ್ತ ಬರಲೇ ಇಲ್ಲ, ಆಗ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಲಕುರ್ಕಿ ನನ್ನ ಮತಕ್ಷೇತ್ರವಾಗಿದ್ದು, ಮತ್ತೆ ಸಭೆಯ ದಿನಾಂಕವನ್ನು ನಿಗದಿಪಡಿಸುವೆ. ಅಗತ್ಯವಾದರೆ ಹಲಕುರ್ಕಿಗೆ ತೆರಳಿ ಅಲ್ಲಿನ ರೈತರ ಜೊತೆ ಮಾತನಾಡುವೆ ಎಂದು ಹೇಳಿದರು.

ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಡಿಸಿ ಸಭೆ; ನಿಗಧಿತ ಅವಧಿಯೊಳಗೆ ಕಬ್ಬಿನ ಹಣ ಪಾವತಿಗೆ ಕ್ರಮ

ಸಮಸ್ತ ವೀರಶೈವ-ಲಿಂಗಾಯತರ ಬಗ್ಗೆ ಮಾತನಾಡುವೆ: ಪಂಚಮಸಾಲಿ 2ಎ ಮೀಸಲಾತಿ ಬಗ್ಗೆ ಮಾತ್ರ ನಾನು ಮಾತನಾಡುವುದಿಲ್ಲ, ಬದಲಾಗಿ ಸಮಸ್ತ ವೀರಶೈವ ಲಿಂಗಾಯತ ಸಮಾಜಕ್ಕೆ ಸಿಗಬೇಕಾದ ಮೀಸಲಾತಿ ಹಾಗೂ ಸೌಲಭ್ಯಗಳ ಬಗ್ಗೆ ಮಾತನಾಡುವೆ ಎಂದ ಸಚಿವ ನಿರಾಣಿ ಈ ಕುರಿತು ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳಿದ್ದಾರೆ ಎಂದರು. ನಾನು ಬೀಳಗಿ ಮತಕ್ಷೇತ್ರದಿಂದಲೇ ಸ್ಪರ್ಧಿಸುವೆ ಕ್ಷೇತ್ರ ಬದಲಾಯಿಸುವ ಪ್ರಶ್ನೆಯೇ ಇಲ್ಲ, ಜಮಖಂಡಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವು ಇಲ್ಲ ಎಂದ ನಿರಾಣಿ 2023ರ ಚುನಾವಣೆಯಲ್ಲಿ ನಿರಾಣಿ ಕುಟುಂಬದಿಂದ ಒಬ್ಬರು ಮಾತ್ರ ಸ್ಪರ್ಧೆಯಲ್ಲಿ ಇರುತ್ತಾರೆ ಎಂದು ತಿಳಿಸಿದರು.

Follow Us:
Download App:
  • android
  • ios