ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಡಿಸಿ ಸಭೆ; ನಿಗಧಿತ ಅವಧಿಯೊಳಗೆ ಕಬ್ಬಿನ ಹಣ ಪಾವತಿಗೆ ಕ್ರಮ
ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಕಳುಹಿಸಿದ 14 ದಿನಗಳ ಒಳಗಾಗಿ ಕಬ್ಬಿನ ಬೆಲೆ ಸಂಪೂರ್ಣವಾಗಿ ಸಂದಾಯ ಮಾಡತಕ್ಕದ್ದು, ವಿಳಂಬ ಧೋರಣೆ ಅನುಸರಿಸಿದಲ್ಲಿ ವಾರ್ಷಿಕ ಶೇ.15 ರಷ್ಟು ಬಡ್ಡಿಯೊಂದಿಗೆ ಅಸಲನ್ನು ಪಾವತಿಸತಕ್ಕದೆಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ (ಅ.15): ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಕಳುಹಿಸಿದ 14 ದಿನಗಳ ಒಳಗಾಗಿ ಕಬ್ಬಿನ ಬೆಲೆ ಸಂಪೂರ್ಣವಾಗಿ ಸಂದಾಯ ಮಾಡತಕ್ಕದ್ದು, ವಿಳಂಬ ಧೋರಣೆ ಅನುಸರಿಸಿದಲ್ಲಿ ವಾರ್ಷಿಕ ಶೇ.15 ರಷ್ಟು ಬಡ್ಡಿಯೊಂದಿಗೆ ಅಸಲನ್ನು ಪಾವತಿಸತಕ್ಕದೆಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Uttara Kannada: ಆರ್ಥಿಕ ನಷ್ಟ ಎದುರಿಸುತ್ತಿರುವ ಕಬ್ಬು ಬೆಳೆಗಾರರು: ಎಸ್‌ಎಪಿಗೆ ಆಗ್ರಹ
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಯ ಮಾಲೀಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ಕಬ್ಬು ಕಟಾವು ಮತ್ತು ಸಾಗಾಣಿಕೆ (ಹೆಚ್&ಟಿ) ಕಡಿತ ಮಾಡುವುದನ್ನು ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸೂಚನಾ ಫಲಕದಲ್ಲಿ ಪ್ರಕಟಿಸಲು ಸೂಚಿಸಿದರು. ರೈತರ ಕಬ್ಬನ್ನು ಹಿರಿತನದ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಿ, ಕಾರ್ಖಾನೆಯ ಸೂಚನಾ ಫಲಕಕ್ಕೆ ಲಗತ್ತಿಸಿ, ಹಿರಿತನದ ಆಧಾರದಲ್ಲಿಯೇ ಕಬ್ಬನ್ನು ರೈತರಿಂದ ಪಡೆಯುಲು ತಿಳಿಸಿದರು.
ಕಬ್ಬು ಕಟಾವು ಗ್ಯಾಂಗ್ ಗಳಿಂದ ರೈತರಿಗೆ ಒತ್ತಾಯ ಹೇರಿಕೆ ಸಲ್ಲದು:
ಕಳೆದ ಸಾಲಿನಲ್ಲಿ ಕಬ್ಬು ಕಟಾವು ಮಾಡುವ ಗ್ಯಾಂಗ್‍ಗಳು ರೈತರಿಂದ ಅನಧಿಕೃತವಾಗಿ ಒತ್ತಾಯಪೂರ್ವಕವಾಗಿ ಹಣ ನೀಡಿದರೆ ಮಾತ್ರ ಕಬ್ಬು ಕಟಾವು ಮಾಡುವುದಾಗಿ ರೈತರಿಗೆ ಬೇಡಿಕೆ ಇಟ್ಟ ಪ್ರಸಂಗಗಳು ನಡೆದಿದ್ದವು. ಅಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಬೇಕು. ರೈತರು ಕಾರ್ಖಾನೆಗೆ ಭೇಟಿ ನೀಡಿದಾಗ ಸೌಜನ್ಯದಿಂದ ವರ್ತಿಸಿ ಅವರ ಸಂದೇಹ ಪರಿಹಾರ ಮಾಡಿ, ಅವಶ್ಯವಿದ್ದಲ್ಲಿ ಮಾಹಿತಿಯನ್ನು ನೀಡಬೇಕು. ತೂಕದ ಯಂತ್ರಗಳನ್ನು ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ತಪಾಸಣೆ ಮಾಡಿಸಿ, ಅದರ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಅಳವಡಿಸುವದಲ್ಲದೇ ಪ್ರತಿದಿನದ ಇಳುವರಿ, ಎಫ್‍ಆರ್.ಪಿ ದರ, ಹೆಚ್&ಟಿ ಕಡಿತದ ಮೊತ್ತ ಇವುಗಳನ್ನು ಕಡ್ಡಾಯವಾಗಿ ಕಾರ್ಖಾನೆಯ ಸೂಚನಾ ಫಲಕದಲ್ಲಿ ಅಳವಡಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಕ್ಕರೆ ಕಾರ್ಖಾನೆ ತೂಕದ ಯಂತ್ರಗಳನ್ನು ರೈತರ ಸಮ್ಮುಖದಲ್ಲಿ ಪರಿಶೀಲನೆಗೆ ಸೂಚನೆ
ಸಕ್ಕರೆ ಕಾರ್ಖಾನೆ ಪ್ರಾರಂಭವಾಗುವ ಮುಂಚೆಯೇ ಎಲ್ಲಾ ಸಕ್ಕರೆ ಕಾರ್ಖಾನೆಗಳ ಸತ್ಯಾಪನೆಯನ್ನು ಮಾಡಿ, ಎಲ್ಲಾ ಸಕ್ಕರೆ ಕಾರ್ಖಾನೆಗಳ ತೂಕದ ಯಂತ್ರಗಳನ್ನು ರೈತರ ಸಮ್ಮುಖದಲ್ಲಿ ಪರಿಶೀಲನೆ ಮಾಡಿ ಸರಿಯಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಕಾನೂನುಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ, ರೈತರಿಂದ ತೂಕದ ಯಂತ್ರಗಳ ಬಗ್ಗೆ ಯಾವುದೇ ದೂರುಗಳು ಸ್ವೀಕೃತವಾದ 4 ಗಂಟೆಗಳಲ್ಲಿಯೇ ಸಂಬಂಧಿಸಿದ ಕಾರ್ಖಾನೆಗೆ ಭೇಟಿ ನೀಡಿ ರೈತರ ಸಮ್ಮುಖದಲ್ಲಿ ಪರಿಶೀಲಿಸಿ ಸರಿಪಡಿಸಲು ತಿಳಿಸಿದರು.
ಅಕ್ಟೋಬರ್ ೧೯ಕ್ಕೆ ರೈತರೊಂದಿಗೆ ಸಭೆಗೆ ನಿರ್ಧಾರ:
ಈಗಾಗಲೇ ಬೆಂಗಳೂರಿನಲ್ಲಿ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕರ ನಿರ್ದೇಶಕರು ಹಾಗೂ ರೈತ ಮುಖಂಡರ ಸಭೆ ಜರುಗಿದ್ದು, ಸಭೆಯ ನಿರ್ಣಯಗಳನ್ನು ಆಧರಿಸಿ, ಮತ್ತೊಮ್ಮೆ ಸಭೆಯನ್ನು ಅಕ್ಟೋಬರ 19 ರಂದು ಪ್ರತಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಇಬ್ಬರು ರೈತ ಮುಖಂಡರೊಂದಿಗೆ ಸಭೆ ಜರುಗಿಸಿ, ಮುಂದಿನ ಕ್ರಮಗಳ ಬಗ್ಗೆ ಕಾರ್ಖಾನೆಯವರಿಗೆ ತಿಳಿಸಲಾಗುವುದೆಂದು ಹೇಳಿದರು.
ಕಬ್ಬು ಕಟಾವು, ಸಾಗಾಟದ ವೇಳೆ ಎಚ್ಚರಿಕೆ ವಾಹನಗಳ ಚಾಲನೆಗೆ ಸೂಚನೆ:
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಮಾತನಾಡಿ ಕಬ್ಬು ಸರಬರಾಜು ಮಾಡುವ ಟ್ರ್ಯಾಕ್ಟರ್, ಚಕ್ಕಡಿ ಮತ್ತು ಇತರೆ ವಾಹನಗಳ ಹಿಂದುಗಡೆ ರೇಡಿಯಮ್ ಅಂಟಿಸುವುದು ಹಾಗೂ ಬೇರೆ ಕಡೆಯಿಂದ ಕಬ್ಬು ಕಟಾವು ಮಾಡಲು ಬಂದ ತಂಡಗಳ ಹೆಸರು, ವಿಳಾಸ ಇತ್ಯಾದಿ ವಿವರಗಳ ಬಗ್ಗೆ ಒಂದು ಪ್ರತ್ಯೇಕ ರೆಜಿಸ್ಟರ್ ನಿರ್ವಹಣೆ ಮಾಡಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸಬೇಕು. ಟ್ರಾಫಿಕ್ ಜಾಮ್ ಆಗದಂತೆ ವಾಹನಗಳನ್ನು ಒಯ್ಯಲು ತಮ್ಮ ಅಧೀನದಲ್ಲಿರುವ ಚಾಲಕರುಗಳಿಗೆ ಸೂಚನೆ ನೀಡಲು ತಿಳಿಸಿದರು.
ಸಭೆಯಲ್ಲಿ 12 ಸಕ್ಕರೆ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರುಗಳು ಸಭೆಯಲ್ಲಿ ಹಾಜರಿದ್ದು, 2021-22ನೇ ಹಂಗಾಮಿಗೆ ಸಂಬಂಧಿಸಿದಂತೆ, ಎಲ್ಲಾ ಸಕ್ಕರೆ ಕಾರ್ಖಾನೆಯವರು ಎಫ್‍ಆರ್‌ಪಿ ಯನ್ವಯ ಸಂಪೂರ್ಣವಾಗಿ ಕಬ್ಬು ಬೆಲೆ ಪಾವತಿ ಮಾಡಿರುವುದಾಗಿ ಸಕ್ಕರೆ ಕಾರ್ಖಾನೆಗಳ ಮಾಲಿಕರು ಸಭೆಗೆ ತಿಳಿಸಿದರು.
ಬೀಳಗಿ ಶುಗರ್ಸ್ ಲಿ, ಬಾಡಗಂಡಿ, ಗೋದಾವರಿ ಶುಗರ್ಸ್ ಸಮೀರವಾಡಿ, ಇಂಡಿಯನ್ ಕೇನ್ ಪವರ್ ಲಿ., ಉತ್ತೂರು, ಜಮಖಂಡಿ ಶುಗರ್ಸ್ ಲಿ., ಹಿರೇಪಡಸಲಗಿ, ಪ್ರಭುಲಿಂಗೇಶ್ವರ ಶುಗರ್ಸ್ ಲಿ., ಸಿದ್ದಾಪೂರ ಕಾರ್ಖಾನೆಯವರು ಎಫ್‍ಆರ್‌ಪಿಗಿಂತ ಹೆಚ್ಚುವರಿಯಾಗಿ ದರ ಪಾವತಿಸಿರುವುದಾಗಿ ತಿಳಿಸಿದರೆ, ಉಳಿದ ಸಕ್ಕರೆ ಕಾರ್ಖಾನೆಗಳು ಎಫ್‍ಆರ್‌ಪಿ ಅನ್ವಯ ಕಬ್ಬು ಬೆಲೆಯನ್ನು ಪಾವತಿಸಿದ್ದು, ಹೆಚ್ಚುವರಿಯಾಗಿ ಪಾವತಿಸಿರುವುದಿಲ್ಲವೆಂದು ಸಭೆಗೆ ತಿಳಿಸಿದರು.
ಕಬ್ಬು ದರ ನಿಗದಿಗೆ ವಾರದಲ್ಲಿ ಸಭೆ, ರೈತರಿಗೆ ಸಿಎಂ ಭರವಸೆ
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸಿ.ಚಿ.ಕೊಡ್ಲಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಪಾನಿಶೆಟ್ಟರ, ಆಹಾರ ಇಲಾಖೆಯ ಲೆಕ್ಕ ಅಧೀಕ್ಷಕ ಆರ್.ಎಸ್.ಚೌದರಿ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಯ ಮಾಲಿಕರು, ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.