Asianet Suvarna News Asianet Suvarna News

Covid19| ಕೊರೋನಾ ಪರಿಹಾರಕ್ಕೆ ಕಠಿಣ ನಿಯಮ ಅಡ್ಡಿ

*  ಕೊರೋನಾದಿಂದ ಮೃತಪಟ್ಟವರಿಗೆ ಸರ್ಕಾರದಿಂದ ಪರಿಹಾರ
*  ಇದಕ್ಕೆ ಅರ್ಜಿ ಸಲ್ಲಿಸಲು ಕಠಿಣ ನಿಯಮದಿಂದ ತೀವ್ರ ಸಮಸ್ಯೆ
*   ಕೆಲ ಬಿಯು ಸಂಖ್ಯೆ ಐಸಿಎಂಆರಲ್ಲಿ ಅಪ್‌ಲೋಡ್‌ ಆಗದೆ ತೊಂದರೆ
 

Tough Rule Disruption to Corona Compensation grg
Author
Bengaluru, First Published Nov 11, 2021, 6:16 AM IST
  • Facebook
  • Twitter
  • Whatsapp

ಸಂಪತ್‌ ತರೀಕೆರೆ

ಬೆಂಗಳೂರು(ನ.11):  ಕೋವಿಡ್‌ನಿಂದ(Covid19) ಕುಟುಂಬದ ಸದಸ್ಯನನ್ನು ಕಳೆದುಕೊಂಡು ಕಣ್ಣೀರಿಡುತ್ತಾ ಸಂಕಷ್ಟದಲ್ಲಿರುವ ಕುಟುಂಬಗಳು ಈಗ ಸರ್ಕಾರ ನೀಡಲಿರುವ ಪರಿಹಾರ(Compensation) ಪಡೆಯಲು ಹರಸಾಹಸ ಪಡಬೇಕಾಗಿದೆ. ಪರಿಹಾರ ಪಡೆಯಲು ಸಲ್ಲಿಸಬೇಕಾದ ದಾಖಲೆಗಳಿಗಾಗಿ ಪಡಿಪಾಟಲು ಎದುರಿಸುತ್ತಿದ್ದಾರೆ. ಸರ್ಕಾರ ವಿಧಿಸಿರುವ ಕಠಿಣ ನಿಯಮಗಳಿಂದಾಗಿ ಮೃತರ ವಾರಸುದಾರರು ಅರ್ಜಿ ಸಲ್ಲಿಸಲು ಹೆಣಗಾಡುವಂತಾಗಿದೆ.

ರಾಜ್ಯ ಸರ್ಕಾರ(Government of Karnataka) ಕೊರೋನಾದಿಂದ ಮೃತ ವ್ಯಕ್ತಿಯ ಕುಟುಂಬಸ್ಥರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಂತೆ ತಿಳಿಸಿ ಒಂದು ತಿಂಗಳು ಕಳೆದಿದೆ. ಬಿಬಿಎಂಪಿ(BBMP) ಮಾಹಿತಿ ಪ್ರಕಾರ ಪಾಲಿಕೆಯ ಎಂಟು ವಲಯಗಳಲ್ಲಿ ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯಲ್ಲಿ ಈವರೆಗೆ 14,193 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆದರೆ ಪರಿಹಾರ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 1878 ಮಾತ್ರ. ಇದಕ್ಕೆ ಸರ್ಕಾರಗಳ ಕಠಿಣ ಮಾರ್ಗಸೂಚಿಗಳೇ(Guidelines) ಕಾರಣವೆನ್ನಲಾಗಿದೆ.

ವ್ಯಕ್ತಿಗೆ ಸೋಂಕು ದೃಢಪಟ್ಟನಂತರ ಬಿಯು ಸಂಖ್ಯೆಯನ್ನು ಐಸಿಎಂಆರ್‌ನಲ್ಲಿ(ICMR) ನೋಂದಣಿ ಮಾಡುವುದು ಕಡ್ಡಾಯ. ಆದರೆ, ಕೆಲವರ ಎಸ್‌ಆರ್‌ಎಫ್‌(SRF) ಅಥವಾ ಬಿಯು(BU)ಸಂಖ್ಯೆಗಳು ಐಸಿಎಂಆರ್‌ನಲ್ಲಿ ನೋಂದಣಿಯಾಗಿಲ್ಲ. ನೋಂದಣಿ ಸಂಖ್ಯೆ ಇಲ್ಲದಿದ್ದರೆ ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಅಪ್‌ಲೋಡ್‌ ಮಾಡಲು ಆಗುವುದಿಲ್ಲ. ಪ್ರಯೋಗ ಶಾಲೆಗಳ ಸಿಬ್ಬಂದಿ ಎಸ್‌ಆರ್‌ಎಫ್‌ (ಬಿಯು) ಸಂಖ್ಯೆಯನ್ನು ಐಸಿಎಂಆರ್‌ನಲ್ಲಿ ಅಪ್‌ಲೋಡ್‌ ಮಾಡದೇ ಇರುವ ಕಾರಣ ಅರ್ಜಿ ತಿರಸ್ಕೃತಗೊಳ್ಳುತ್ತಿವೆ. ಇಂತಹ ನೂರಾರು ಅರ್ಜಿಗಳು ಕಚೇರಿಗಳಲ್ಲಿ ಮೂಲೆ ಸೇರಿವೆ.

ದೀಪಾವಳಿ ಮುಗಿಯುತ್ತಿದ್ದಂತೆ ಬೆಂಗ್ಳೂರಲ್ಲಿ ಕೊರೋನಾ ಹೆಚ್ಚಳ..!

ಮೃತ(Death) ವ್ಯಕ್ತಿಯ ಪಡಿತರ ಚೀಟಿ ವಿಳಾಸ ಎಲ್ಲೋ ಇದ್ದರೆ, ವಾಸ ಮತ್ತೆಲ್ಲೋ ಇರುತ್ತದೆ. ಮತ್ತೆ ಕೆಲವರು ದುಡಿಯುವ ವ್ಯಕ್ತಿಯ ಸಾವಿನ ಬಳಿಕ ಬೆಂಗಳೂರು ತೊರೆದು ಹೋಗಿದ್ದಾರೆ. ಅಧಿಕಾರಿಗಳು ಮಹಜರಿಗೆ ಹೋದಾಗ ಅರ್ಜಿದಾರ ನೀಡಿರುವ ವಿಳಾಸಗಳು ಸುಳ್ಳು ಎಂದು ಪರಿಗಣಿಸಿ ಅರ್ಜಿ ತಿರಸ್ಕಾರವಾಗುತ್ತಿವೆ. ಮತ್ತೆ ಕೆಲವರಿಗೆ ಮರಣ ಪ್ರಮಾಣ ಪತ್ರ, ಬಿಪಿಎಲ್‌, ಬ್ಯಾಂಕ್‌ ಖಾತೆ, ಸ್ವಯಂ ಘೋಷಣೆ ಪತ್ರ ಇತ್ಯಾದಿಗಳ ದಾಖಲೆಗಳಲ್ಲಿ ಕೆಲವು ಲಭ್ಯವಾಗದೆ ಅರ್ಜಿ ಸಲ್ಲಿಸಲಾಗುತ್ತಿಲ್ಲ. ಮತ್ತೆ ಕೆಲವರಿಗೆ ವಾರ್ಡ್‌ ಕಚೇರಿಗಳಿಗೆ ತೆರಳಿ ಅರ್ಜಿ ಸಲ್ಲಿಸಲು ಸಮಯವೂ ಸಿಗದ ಪರಿಸ್ಥಿತಿ ಇದೆ.

ಪರಿಹಾರವನ್ನು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ನೀಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಅಂತಹ ವ್ಯಕ್ತಿಯ ಎಲ್ಲ ಮಕ್ಕಳ ಒಪ್ಪಿಗೆ ಪತ್ರ ಸಲ್ಲಿಸಬೇಕಾಗುತ್ತದೆ. ಆದರೆ ಅನೇಕರು ನಾನಾ ಕಾರಣದಿಂದ ಬೇರೆ ಬೇರೆ ಸ್ಥಳಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರೆಲ್ಲರ ಒಪ್ಪಿಗೆ ಪತ್ರ ಪಡೆಯಲು ಆಗದೇ ಅನೇಕರು ಅರ್ಜಿ ಸಲ್ಲಿಸಲು ಮುಂದೆ ಬರುತ್ತಿಲ್ಲ ಎಂದು ಹೇಳಲಾಗಿದೆ.

ಪಾಲಿಕೆಯ ಎಂಟು ವಲಯಗಳಾದ ಬೊಮ್ಮನಹಳ್ಳಿ 281, ದಾಸರಹಳ್ಳಿ 17, ಪಶ್ಚಿಮ 170, ಮಹದೇವಪುರ 317, ರಾಜರಾಜೇಶ್ವರಿ ನಗರ 468, ದಕ್ಷಿಣ 40, ಪಶ್ಚಿಮ 136, ಯಲಹಂಕ 449 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 826 ಬಿಪಿಎಲ್‌, 1052 ಎಪಿಎಲ್‌ ಕಾರ್ಡುದಾರರು ಒಟ್ಟು ಸೇರಿ 1878 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಇನ್ನೂ 12,315 ಅರ್ಜಿಗಳು ಪರಿಹಾರ ಕೋರಿ ಬರಬೇಕಿವೆ.

ತಿಂಗಳೊಳಗೆ ಪರಿಹಾರ: ಶಿವಸ್ವಾಮಿ

ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ವಾರ್ಡ್‌ ಕಚೇರಿಯಲ್ಲಿ ಸಲ್ಲಿಸಬೇಕು. ಈ ಅರ್ಜಿಗಳನ್ನು ಹಿರಿಯ ಆರೋಗ್ಯ ನಿರೀಕ್ಷಕರು ಮತ್ತು ಬಿಬಿಎಂಪಿ ಕಂದಾಯ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸುವರು. ಎನ್‌ಐಸಿ ಸಿದ್ಧಪಡಿಸಿರುವ ‘ಡೈರೆಕ್ಟರ್‌ ಆಫ್‌ ಸೋಷಿಯಲ್‌ ಸೆಕ್ಯುರಿಟಿ ಸ್ಕೀಂ’ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್‌ ಮಾಡುವರು. ಆ ನಂತರ ಅರ್ಹ ಅರ್ಜಿಗಳನ್ನು ಆರೋಗ್ಯ ವೈದ್ಯಾಧಿಕಾರಿ(ಎಂಒಎಚ್‌) ಅನುಮೋದಿಸಿದ ಬಳಿಕ ವಲಯಗಳ ಜಂಟಿ ಆಯುಕ್ತರ ಅನುಮೋದನೆ ಕಳುಹಿಸಿ ಕೊಡುವರು. ಜಂಟಿ ಆಯುಕ್ತರ ಬಳಿಕ ಸಾಮಾಜಿಕ ಭದ್ರತಾ ಪಿಂಚಣಿ ವಿಭಾಗದ ನಿರ್ದೇಶಕರು ಅನುಮೋದಿಸಿದ ನಂತರ ಪರಿಹಾರದ ಮೊತ್ತ ನೇರವಾಗಿ ಮೃತರ ವಾರಸುದಾರರ ಖಾತೆಗೆ ಜಮಾ ಆಗಲಿದೆ. ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ಪರಿಹಾರ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಪಶ್ಚಿಮ ವಲಯ ಜಂಟಿ ಆಯುಕ್ತ ಶಿವಸ್ವಾಮಿ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

Covid19 Vaccine| ಮುಂದಿನ ವಾರದಿಂದ ಮಕ್ಕಳಿಗೂ ಕೋವಿಡ್‌ ಲಸಿಕೆ?

ಪ್ರತಿದಿನ ಬೆಳಗ್ಗಿನಿಂದ ಸಂಜೆ 5ರವರೆಗೆ ವಾರ್ಡ್‌ ಕಚೇರಿಗಳಲ್ಲಿ ಕೋವಿಡ್‌ ಪರಿಹಾರಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ದಾಖಲೆಗಳ ಬಗ್ಗೆ ಯಾವುದೇ ಗೊಂದಲವಿದ್ದಲ್ಲಿ ಸಂಬಂಧಪಟ್ಟ ವಾರ್ಡ್‌ ಕಚೇರಿಯ ಸಿಬ್ಬಂದಿಯ ಬಳಿ ಮಾಹಿತಿ ಪಡೆಯಬಹುದು. ಜೊತೆಗೆ ಎಲ್ಲ ವಾರ್ಡ್‌ ಕಚೇರಿಗಳ ಫಲಕಗಳಲ್ಲಿ ಅಗತ್ಯ ದಾಖಲೆಗಳ ಮಾಹಿತಿ ಹಾಕಲಾಗಿದೆ. ಅದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ದಕ್ಷಿಣ ವಲಯದ ಆರೋಗ್ಯಾಧಿಕಾರಿ ಶಿವಕುಮಾರ್‌ ತಿಳಿಸಿದ್ದಾರೆ.

ಅಗತ್ಯ ದಾಖಲೆಗಳು

ಕೋವಿಡ್‌-19 ಪಾಸಿಟಿವ್‌ ವರದಿ (ಅಧಿಕೃತವಾಗಿ ಗುರುತಿಸಿದ ಪ್ರಯೋಗಾಲಯದಿಂದ ಪಡೆದಿರುವ ರಿಪೋರ್ಟ್‌), ಕೋವಿಡ್‌ ದೃಢಪಟ್ಟ ರೋಗಿಯ ಬಿಯು ಸಂಖ್ಯೆ ಅಥವಾ ಎಸ್‌ಆರ್‌ಎಫ್‌ ಸಂಖ್ಯೆ (ಈ ದಾಖಲೆಗಳನ್ನು ಅರ್ಹತೆ ಪಡೆದ ವೈದ್ಯರಿಂದ ದೃಢೀಕರಿಸಿ ಸಲ್ಲಿಸಬೇಕು), ಮೃತಪಟ್ಟವರ ಆಧಾರ್‌ ಕಾರ್ಡ್‌ ಪ್ರತಿ, ಮರಣ ಪ್ರಮಾಣ ಪತ್ರದ ಪ್ರತಿ, ಅರ್ಜಿದಾರರ ಪಡಿತರ ಚೀಟಿ ಪ್ರತಿ (ಮೃತಪಟ್ಟವ್ಯಕ್ತಿಯ ಹೆಸರು ಈ ಪಡಿತರ ಚೀಟಿಯಲ್ಲಿರಬೇಕು), ಅರ್ಜಿದಾರರ ಆಧಾರ್‌ ಕಾರ್ಡ್‌ ಪ್ರತಿ, ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ, ಅರ್ಜಿದಾರರಿಂದ ಸ್ವಯಂ ಘೋಷಣಾ ಪತ್ರ(ನಮೂನೆ-2), ಕುಟುಂಬ ಸದಸ್ಯರ ನಿರಪೇಕ್ಷಣಾ ಪತ್ರ(ನಮೂನೆ-3) ದಾಖಲೆಗಳನ್ನು ಸಲ್ಲಿಸಬೇಕು.

ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವವರು ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಹೆಸರು ಮತ್ತು ವಾರಸುದಾರರ ಹೆಸರಿರುವ ಪಡಿತರ ಚೀಟಿ, ಈ ಇಬ್ಬರ ಆಧಾರ್‌ ಕಾರ್ಡ್‌ ಸೇರಿದಂತೆ ದಾಖಲೆಯೊಂದಿಗೆ ವಾಸ ದೃಢೀಕರಣ ಪತ್ರ ಲಗತಿಸುವುದು ಒಳ್ಳೆಯದು. ಇದರಿಂದ ಸ್ಥಳ ಮಹಜರಿಗೆ ಅನುಕೂಲವಾಗುತ್ತದೆ. ಯಾವುದೇ ಗೊಂದಲ ಇದ್ದರೆ ವಾರ್ಡ್‌ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕರಿಂದ ಪಡೆದು ಅರ್ಜಿ ಸಲ್ಲಿಸಬಹುದು ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ತಿಳಿಸಿದ್ದಾರೆ.  

Follow Us:
Download App:
  • android
  • ios