ಶುದ್ಧ ಗಾಳಿಗೆ ದೇಶದಲ್ಲೇ ಗದಗ 2ನೇ ಸ್ಥಾನ: ತೋಂಟದ ಶ್ರೀಗಳ ಸಂತಸ
* ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣ ಪತ್ರ
* ಗದಗ ನಗರ ಸದಾ ಹಸಿರಿನಿಂದ ಕಂಗೊಳಿಸುವ ಕಪ್ಪತಗುಡ್ಡವೇ ಕಾರಣ
* ಕಪ್ಪತಗುಡ್ಡದ ಪರಿಸರ ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ
ಗದಗ(ಜೂ.18): ಕಪ್ಪತಗುಡ್ಡದ ಮಡಿಲಲ್ಲಿರುವ ಗದಗ ನಗರವು ದೇಶದಲ್ಲಿಯೇ ಸ್ವಚ್ಛ ಗಾಳಿ, ಶುದ್ಧ ಪರಿಸರ ಹೊಂದಿರುವ ಎರಡನೆಯ ನಗರ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣ ಪತ್ರ ನೀಡಿರುವುದು ಸಂತಸದ ಸಂಗತಿ ಎಂದು ಜ. ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಶ್ರೀಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗದಗ ನಗರಕ್ಕೆ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣ ಪತ್ರ ನೀಡಿರುವುದಕ್ಕೆ ಸದಾ ಹಸಿರಿನಿಂದ ಕಂಗೊಳಿಸುವ ಕಪ್ಪತಗುಡ್ಡವೇ ಕಾರಣ ಎಂಬುದು ಸ್ಪಷ್ಟವಾಗಿದೆ. ಈಗಾಗಲೇ ಪ್ರಕೃತಿಯ ಮೇಲೆ ನಡೆದ ಅತ್ಯಾಚಾರ ಕಾರಣವಾಗಿ ಮಾರಣಾಂತಿಕ ರೋಗಗಳು ಉಲ್ಬಣಿಸುತ್ತಿರುವುದು, ಶುದ್ಧ ನೀರು, ಶುದ್ಧ ಗಾಳಿ (ಆಮ್ಲಜನಕ)ಯನ್ನು ಹಣ ಕೊಟ್ಟು ಖರೀದಿಸುವ ಸಂದರ್ಭ ನಿರ್ಮಾಣವಾಗಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ವಸ್ತುಸ್ಥಿತಿ ಹೀಗಿದ್ದರೂ ಅನೇಕರು ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಹೊಂಚುಹಾಕುತ್ತಿರುವುದು ಗುಟ್ಟಾಗಿ ಉಳಿದ ವಿಷಯವೇನಲ್ಲ. ಈ ಭಾಗದ ಜನರು ಶಕ್ತಿಮೀರಿ ಹೋರಾಟ ಮಾಡುವ ಮೂಲಕ ಈವರೆಗೆ ಪ್ರಕೃತಿಯ ಕೊಡುಗೆಯಾಗಿರುವ ಕಪ್ಪತಗುಡ್ಡವನ್ನು ರಕ್ಷಿಸಿಕೊಂಡು ಬಂದಿದ್ದಾರೆ.
ಮುಂಡರಗಿ: ಮತ್ತೆ 150 ಟಿಪ್ಪರ್ ಅಕ್ರಮ ಮರಳು ವಶ
ಈಗಾಗಲೇ ಕೆಲವೇ ಜನರ ಒಡಲು ತುಂಬಿಸುವ ಗಣಿಗಾರಿಕೆ ಬಳ್ಳಾರಿ ಭಾಗದಲ್ಲಿ ಹಸಿರು ಕಾಡನ್ನು ನಾಶಮಾಡಿ ಮರುಭೂಮಿಯನ್ನು ಸೃಷ್ಟಿಸಿರುವುದು ವಾಸ್ತವ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಕಲ್ಪವೃಕ್ಷದಂತಿರುವ ಕಪ್ಪತಗುಡ್ಡದ ಪರಿಸರವನ್ನು ರಕ್ಷಿಸುವುದು, ಹೋರಾಟಗಾರರಿಗೆ ಬೆಂಬಲವಾಗಿ ನಿಲ್ಲುವುದು ಈ ಭಾಗದವರಾದ ನಮ್ಮ ಆದ್ಯ ಕರ್ತವ್ಯವಾಗಿದೆ. ಜನರು ಈ ದಿಶೆಯಲ್ಲಿ ಜಾಗ್ರತರಾಗಿರಬೇಕು ಮತ್ತು ಶುದ್ಧ ಗಾಳಿಯ ಮೂಲ ಸೆಲೆಯಾಗಿರುವ ಕಪ್ಪತಗುಡ್ಡವನ್ನು ರಕ್ಷಿಸಲು ಸದಾ ಸಹಕರಿಸಬೇಕೆಂದು ಶ್ರೀಗಳು ಆಗ್ರಹಿಸಿದ್ದಾರೆ.