ಮುಂಡರಗಿ: ಮತ್ತೆ 150 ಟಿಪ್ಪರ್ ಅಕ್ರಮ ಮರಳು ವಶ
* ತುಂಗಭದ್ರಾ ತೀರದಲ್ಲಿ ಮರಳು ವಶಪಡಿಸಿಕೊಳ್ಳುವ ಕಾರ್ಯ ಮುಂದುವರಿಕೆ
* ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ
* ಮಂಗಳವಾರ ದಾಳಿ ನಡೆಸಿದ್ದ ಜಿಲ್ಲಾಧಿಕಾರಿ, ಎಸ್ಪಿ ನೇತೃತ್ವದ ತಂಡ
ಮುಂಡರಗಿ(ಜೂ.17): ತಾಲೂಕಿನ ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಸಂಗ್ರಹಿಸಿದ ಅಕ್ರಮ ಮರಳು ವಶಪಡಿಸಿಕೊಳ್ಳುವ ಕಾರ್ಯಾಚರಣೆ ಮುಂದುವರಿದಿದ್ದು, ಬುಧವಾರ ಮತ್ತೆ 12 ಲಕ್ಷ ರು. ಮೌಲ್ಯದ 150 ಟಿಪ್ಪರ್ ಮರಳು ವಶಪಡಿಸಿಕೊಳ್ಳಲಾಗಿದೆ.
ಕೆಲವು ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿದ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಇತರೆ ಸಿಬ್ಬಂದಿ ಮಂಗಳವಾರ ದಾಳಿ ನಡೆಸಿ 150 ಟಿಪ್ಪರ್ ಮರಳನ್ನು ವಶ ಪಡಿಸಿಕೊಂಡಿದ್ದರು. ಬುಧವಾರ ಸಿಂಗಟಾಲೂರು, ಶೀರನಹಳ್ಳಿ, ಗಂಗಾಪುರ ಭಾಗಗಳಲ್ಲಿ ಸುಮಾರು 150 ಟಿಪ್ಪರ್ ಮರಳನ್ನು ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಆಶಪ್ಪ ಪೂಜಾರಿ, ಸಿಪಿಐ ಸುನೀಲ್ ಸವದಿ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಗದಗ: ತುಂಗಭದ್ರಾ ದಡದಲ್ಲಿ 150 ಟಿಪ್ಪರ್ ಅಕ್ರಮ ಮರಳು ವಶ
ಈ ಕುರಿತು ತಹಸೀಲ್ದಾರ್ ಆಶಪ್ಪ ಪೂಜಾರಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ಬುಧವಾರ ಸಿಂಗಟಾಲೂರು ಭಾಗದ ನದಿ ದಡದಲ್ಲಿ ಹಾಗೂ ಶೀರನಹಳ್ಳಿ ಮತ್ತು ಗಂಗಾಪುರ ಹತ್ತಿರ ಸೇರಿ ಅಂದಾಜು 12 ಲಕ್ಷ ಮೌಲ್ಯದ ಸುಮಾರು 150 ಟ್ರಿಪ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ತಡರಾತ್ರಿಯವರೆಗೂ ಶೋಧ ಕಾರ್ಯ ಜರುಗಲಿದ್ದು, ಸಿಕ್ಕಷ್ಟು ಮರಳನ್ನು ವಶಪಡಿಸಿಕೊಳ್ಳಲಾಗುವುದು. ಈ ಭಾಗದಲ್ಲಿ ಪೂರ್ಣಗೊಳಿಸಿ ನಂತರ ಇಲ್ಲಿಂದ ಮುಂದಿನ ಸ್ಥಳಕ್ಕೆ ತೆರಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಂತೋಷ ಬೆಣಕಟ್ಟಿ ಹಾಗೂ ಆರ್.ಐ. ಮುತ್ತು ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.