ಈಗ ಏನಿದ್ದರೂ ಎಲ್ಲಡೆ ಟೊ ಮ್ಯಾಟೋದ್ದೇ ಸದ್ದು, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಅಲ್ಲಿ ಟೊಮ್ಯಾಟೋ ಬೆಲೆ ಕೇಳುತ್ತಲೇ ದಂಗಾಗುವಂತಾಗಿದೆ. ಆದರೆ, ಟೊಮ್ಯಾಟೋ ಬೆಳೆದ ರೈತರಂತೂ ಫುಲ್‌ ಖುಶ್‌ ಆಗಿದ್ದಾರೆ. ರೈತರಲ್ಲಿ ಸಂತಸಕ್ಕೆ ಕಾರಣವಾದರೆ ಗ್ರಾಹಕರಿಗೆ ಈ ಟೊಮ್ಯಾಟೋ ಖಾರವಾಗಿ ಪರಿಣಮಿಸಿದೆ.

ಅಜೀಜಅಹ್ಮದ ಬಳಗಾನೂರ

 ಹುಬ್ಬಳ್ಳಿ (ಜು.14) : ಈಗ ಏನಿದ್ದರೂ ಎಲ್ಲಡೆ ಟೊ ಮ್ಯಾಟೋದ್ದೇ ಸದ್ದು, ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಅಲ್ಲಿ ಟೊಮ್ಯಾಟೋ ಬೆಲೆ ಕೇಳುತ್ತಲೇ ದಂಗಾಗುವಂತಾಗಿದೆ. ಆದರೆ, ಟೊಮ್ಯಾಟೋ ಬೆಳೆದ ರೈತರಂತೂ ಫುಲ್‌ ಖುಶ್‌ ಆಗಿದ್ದಾರೆ. ರೈತರಲ್ಲಿ ಸಂತಸಕ್ಕೆ ಕಾರಣವಾದರೆ ಗ್ರಾಹಕರಿಗೆ ಈ ಟೊಮ್ಯಾಟೋ ಖಾರವಾಗಿ ಪರಿಣಮಿಸಿದೆ.

ಕಳೆದ ಒಂದು ವಾರದಿಂದ ಕೊಂಚ ಇಳಿಕೆಯಾಗಿದ್ದ ಟೊಮ್ಯಾಟೋ ಬೆಲೆ ಗುರುವಾರ ಧಿಡೀರ್‌ ಏರಿಕೆ ಕಂಡಿದೆ. 22 ಕೆಜಿ ಹೊಂದಿದ 1 ಬಾಕ್ಸ್‌ಗೆ ಕಳೆದ ಜು. 6ರ ಪೂರ್ವದಲ್ಲಿ .2200ರಿಂದ .2500ರ ವರೆಗೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗಿತ್ತು. ಈ ವೇಳೆ ಚಿಲ್ಲರೆ ಗ್ರಾಹಕರು ಕೆಜಿ ಟೊಮ್ಯಾಟೋಗೆ .110ರಿಂದ .130ರ ವರೆಗೆ ಮಾರಾಟ ಮಾಡಿದ್ದರು. ಆದರೆ, ಗುರುವಾರ ಧಿಡೀರನೇ 1 ಬಾಕ್ಸ್‌ ಟೊಮ್ಯಾಟೋಗೆ .2500ರಿಂದ .3000ರ ವರೆಗೆ ಮಾರಾಟವಾಗಿದ್ದು, ಚಿಲ್ಲರೆ ಮಾರಾಟಗಾರರು ಕೆಜಿ ಒಂದಕ್ಕೆ ಎಷ್ಟುಬೆಲೆ ನಿಗದಿಗೊಳಿಸಿ ಮಾರಬೇಕು ಎಂಬ ಗೊಂದಲದಲ್ಲಿದ್ದಾರೆ.

ಟೊಮೆಟೊ ಬೆಲೆ ಗಗನಕ್ಕೆ, ಕೋಲಾರದಿಂದ 2 ಲಕ್ಷ ರೂ ಮೌಲ್ಯದ ಟೊಮೆಟೊ ತುಂಬಿದ ಗಾಡಿ ಹೈಜಾಕ್!

ಇಲ್ಲಿನ ಅಮರಗೋಳದಲ್ಲಿರುವ ಕೃಷಿ ಮಾರುಕಟ್ಟೆಗೆ ನಿತ್ಯವೂ ಕೊಪ್ಪಳ, ಗಂಗಾವತಿ, ಗಾಮನಗಟ್ಟಿ, ನವಲೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ರೈತರು ಟೊಮ್ಯಾಟೋ ಸೇರಿದಂತೆ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಾರೆ. ಚಿಲ್ಲರೆ ವ್ಯಾಪಾರಿಗಳು ಬೆಳ್ಳಂಬೆಳಗ್ಗೆ 4ಗಂಟೆಗೆ ಬಂದು ಇಲ್ಲಿ ಕೂಗುವ ಲಿಲಾವ್‌ನಲ್ಲಿ ಪಾಲ್ಗೊಂಡು ಖರೀದಿಸಿಕೊಂಡು ಹೋಗಿ ಮಾರಾಟ ಮಾಡುತ್ತಾರೆ.

ರೈತ ಫುಲ್‌ ಖುಷ್‌:

ಕಳೆದ ಹಲವು ದಿನಗಳಿಂದ ಮಳೆಯಾಗದೇ ಸಂಕಷ್ಟಅನುಭವಿಸಿದ್ದ ರೈತರಿಗೆ ಅದರಲ್ಲೂ ಟೊಮ್ಯಾಟೋ ಬೆಳೆದ ರೈತರಿಗೆ ಈ ಬಾರಿ ಬಂಪರ್‌ ಬೆಲೆ ಬಂದಿರುವುದು ಸಂತಸಕ್ಕೆ ಕಾರಣವಾಗಿದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಇಲ್ಲದಿರುವುದು ರೈತರಲ್ಲಿ ಕೊಂಚ ನೋವಿಗೆ ಕಾರಣವಾಗಿದೆ. ಬೆಲೆ ಏರಿಕೆ ಕುರಿತು ರೈತ ಭೀಮಣ್ಣ ಎಂಬುವವರು ಮಾತನಾಡಿ, ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಮಾಡಿದ ಬೆಳೆಗಳು ಸಕಾಲಕ್ಕೆ ಬರಲಿಲ್ಲ. ತೋಟಗಳಲ್ಲಿ ಹಾಕಿದ ಟೊಮ್ಯಾಟೋಗೆ ರೋಗ ಕಾಣಿಸಿಕೊಂಡು ಶೇ. 50ರಷ್ಟುಬೆಳೆ ಹಾಳಾಗಿ ಹೋಯಿತು. ಅಳಿದುಳಿದ ಬೆಳೆಯನ್ನು ಮಾರಲು ತಂದಿದ್ದೇನೆ. ಇಲ್ಲಿ ಬೆಲೆ ಕೇಳಿ ತುಂಬಾ ಸಂತಸವಾಗುತ್ತಿದೆ. ಹಿಂದೆ 22ಕೆಜಿ ಟೊಮ್ಯಾಟೋ ಬಾಕ್ಸ್‌ಗೆ .300 ರಿಂದ .500 ಸಿಗುವುದೇ ಅಪರೂಪವಾಗಿತ್ತು. ಆದರೆ, ಈಗ ಬಾಕ್ಸ್‌ ಒಂದಕ್ಕೆ .2500 ರಿಂದ .3000ರ ವರೆಗೆ ಬೆಲೆ ಬಂದಿರುವುದು ಸಂತಸಕ್ಕೆ ಕಾರಣವಾಗಿದೆ ಎಂದರು.

ಕಳೆದ 15 ದಿನಗಳಿಂದ ಟೊಮ್ಯಾಟೋ ಬೆಲೆ ಏರಿಕೆಯಾಗಿರುವುದು ನಮ್ಮಂತಹ ಬಡ ರೈತರಲ್ಲಿ ಮಂದಹಾಸ ಮೂಡಿಸಿದೆ. ಪ್ರತಿ ಸಾರಿ ಈ ವೇಳೆಗೆ ಅಲ್ಪ ಬೆಲೆಗೆ ಟೊಮ್ಯಾಟೋ ಮಾರಿ ಹೋಗುವಂತಾಗಿತ್ತು. ಆದರೆ, ಈ ಬಾರಿ ಬಂಪರ್‌ ಬೆಲೆ ಬಂದಿರುವುದನ್ನು ನೋಡಿ ಖುಷಿಯಾಗುತ್ತಿದೆ. 3 ಎಕರೆಯಲ್ಲಿ ಟೊಮ್ಯಾಟೋ ಬೆಳೆದಿದ್ದೇನೆ. ಇಳುವರಿ ಕಳೆದ ಬಾರಿಗಿಂತಲೂ ಕೊಂಚ ಕಡಿಮೆ ಬಂದಿದೆ. ಆದರೆ, ಹೆಚ್ಚಿನ ಬೆಲೆ ನೋಡಿ ಸಂತಸವಾಗುತ್ತಿದೆ ಎಂದು ನವಲೂರು ಗ್ರಾಮದ ರೈತ ಹಳ್ಳೆಪ್ಪ ತಿಳಿಸಿದರು.

ಬಾಕ್ಸ್‌ 1ಕ್ಕೆ .2500ರಿಂದ .3000 ಕೊಟ್ಟು ಖರೀದಿಸಿ ತಂದು ಇಲ್ಲಿ ಕೆಜಿ ಲೆಕ್ಕದಲ್ಲಿ ಹೇಗೆ ಮಾರಾಟ ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. ಕೆಜಿಗೆ .115ರಿಂದ 130ರ ವರೆಗೆ ನಮಗೆ ಬೆಲೆ ಬೀಳುತ್ತಿದೆ. ಇನ್ನು ಬರುವ ಗ್ರಾಹಕರು ಬೆಲೆ ಕೇಳಿ ಹೌಹಾರುತ್ತಾ ಖರೀದಿಸದೇ ಹೋಗುತ್ತಿದ್ದಾರೆ.

- ರಾಜು ವಾಲ್ಮೀಕಿ, ಸೂಪರ್‌ ಮಾರ್ಕೇಟ್‌ ಚಿಕ್ಕ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ

ನಮಗಂತೂ ಬಾಳ್‌ ಖುಷ್‌ ಆಗೈತ್ರಿ. ಹಿಂದ ಟೊಮ್ಯಾಟೋ ಒಂದ ಬಾಕ್ಸಿಗೆ .100-.200ಕ್ಕ ಕೇಳೊರಿರಲಿಲ್ಲ. ಆದ್ರ ಈಗ .2500ರಿಂದ .3000 ಆಗೈತ್ರಿ. ಕಷ್ಟಪಟ್ಟಬೆಳದ್‌ ಬೆಳಿಗೆ ಈ ವರ್ಷಾ ಹೆಚ್ಚಿನ ರೇಟ್‌ ಸಿಕೈತ್ರಿ. ಗಂಗಾವತಿಯಿಂದ ಹುಬ್ಬಳ್ಳಿಗೆ ಟೊಮ್ಯಾಟೋ ತಂದ ಮಾರಿನ್ರಿ ಎಲ್ಲಾ ಬಾಕ್ಸ್‌ .2500 ಮ್ಯಾಲೇನ ಮಾರಾರ‍ಯವ್ರಿ.

- ಹನಮಂತಪ್ಪ ಕುರಹಟ್ಟಿ, ಗಂಗಾವತಿಯ ರೈತ

ಕಳೆದ 10 ದಿನಗಳಲ್ಲಿ ಏರಿಳಿಕೆ ಕಂಡ ಟೊಮ್ಯಾಟೋ ಬೆಲೆ(22ಕೆಜಿಯ 1ಬಾಕ್ಸ್‌)

  • ಜು. 04 .2200ರಿಂದ .2500
  • ಜು. 05 .2200ರಿಂದ .2600
  • ಜು. 06 .2000ರಿಂದ .2300
  • ಜು. 07 .1500ರಿಂದ .1800
  • ಜು. 08 .1400ರಿಂದ .1600
  • ಜು. 09 .1000ರಿಂದ .1300
  • ಜು. 10 .1000ರಿಂದ .1300
  • ಜು. 11 .1200ರಿಂದ .1800
  • ಜು. 12 .1500ರಿಂದ .2000
  • ಜು. 13 .2500ರಿಂದ .3000
  • 13ಎಚ್‌ಯುಬಿ31, 32, 33

ಹುಬ್ಬಳ್ಳಿಯ ಸರಾಫಗಟ್ಟಿಯಲ್ಲಿರುವ ಬಜಾರಿನಲ್ಲಿ ಟೊಮ್ಯಾಟೋ ಖರೀದಿಸುತ್ತಿರುವ ಗ್ರಾಹಕರು.