Asianet Suvarna News Asianet Suvarna News

ಟೊಮೆಟೋ ದರದಲ್ಲಿ ಭಾರೀ ಕುಸಿತ: ಬೆಂಗಳೂರಿನಲ್ಲಿ ಕೆಜಿಗೆ 20 ರೂ.

ಸುಮಾರು ಒಂದೂವರೆ ಎರಡು ತಿಂಗಳು 100ರಿಂದ 150ರವರೆಗೆ ಇದ್ದ ಕೇಜಿ ಟೊಮೆಟೋ ಬೆಲೆ ಇದೀಗ 20ಕ್ಕೆ ಕುಸಿದಿದೆ. ನಗರದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತಿದ್ದು, ದರ ಇಳಿಕೆಯಾಗಿದೆ. 

tomato price decreased to 20 rs per kg in bengaluru gvd
Author
First Published Aug 28, 2023, 7:43 AM IST

ಬೆಂಗಳೂರು (ಆ.28): ಸುಮಾರು ಒಂದೂವರೆ ಎರಡು ತಿಂಗಳು 100ರಿಂದ 150ರವರೆಗೆ ಇದ್ದ ಕೇಜಿ ಟೊಮೆಟೋ ಬೆಲೆ ಇದೀಗ 20ಕ್ಕೆ ಕುಸಿದಿದೆ. ನಗರದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತಿದ್ದು, ದರ ಇಳಿಕೆಯಾಗಿದೆ. ಆಂಧ್ರಪ್ರದೇಶದ ಮಾರುಕಟ್ಟೆಯಿಂದ ಯಥೇಚ್ಛವಾಗಿ ಟೊಮೆಟೋ ಪೂರೈಕೆಯಾಗುತ್ತಿದೆ. ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಆಗಿರುವ ಕೋಲಾರದ ಸಿಎಂಆರ್‌ ಮಾರುಕಟ್ಟೆಯಲ್ಲಿ 15 ಕೇಜಿ ನಾಟಿ ಟೊಮೆಟೋ ಬಾಕ್ಸ್‌ 250- 400, ಹೈಬ್ರಿಡ್‌ ಟೊಮೆಟೋ 250- 450ಕ್ಕೆ ಇಳಿದಿದೆ. ಇದಲ್ಲದೆ, ಸುತ್ತಲಿನ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಿಂದ ಬರುವ ಟೊಮೆಟೋ ಪ್ರಮಾಣವೂ ಹೆಚ್ಚಾಗಿರುವುದರಿಂದ ಬೆಲೆಯೂ ಕಡಿಮೆಯಾಗಿದೆ.

ಇದರ ಪರಿಣಾಮ ನಗರದ ಕಲಾಸಿಪಾಳ್ಯ, ಬಿನ್ನಿಮಿಲ್‌, ಕೆ.ಆರ್‌.ಮಾರುಕಟ್ಟೆಗಳಿಗೆ ಈ ಹಿಂದೆ ದಿನಕ್ಕೆ ಕೇವಲ 350 ಕ್ವಿಂಟಲ್‌ ಬರುತ್ತಿದ್ದ ಟೊಮೆಟೋ ಇದೀಗ ಬೇಡಿಕೆಗೆ ಅನುಸಾರವಾಗಿ ಪೂರೈಕೆ ಆಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ 20 ಕೇಜಿ ಬಾಕ್ಸ್‌ಗೆ 600- 700ಕ್ಕೆ ಇಳಿಕೆಯಾಗಿದೆ. ಹೀಗಾಗಿ ಮಲ್ಲೇಶ್ವರ, ಯಶವಂತಪುರ, ಜಯನಗರ ಸೇರಿದಂತೆ ಬಡಾವಣೆಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆಯೂ ಕಡಿಮೆಯಾಗಿದೆ. ಕೇಜಿಗೆ 20 ನಿಂದ ಗರಿಷ್ಠ .30 ರವರೆಗೆ ಮಾರಾಟವಾಗುತ್ತಿದೆ.

ಮುನೇನಕೊಪ್ಪ, ಚಿಕ್ಕನಗೌಡ್ರ ಕಾಂಗ್ರೆಸ್‌ಗೆ ಬರ್ತಾರೆ: ಸಚಿವ ಸಂತೋಷ್‌ ಲಾಡ್‌

ಗ್ರಾಹಕರು ಖುಷ್‌: ಟೊಮೆಟೋ ಬೆಲೆ ನಗರದಲ್ಲಿ ಕೇಜಿಗೆ ಗರಿಷ್ಠ 100- 160 ವರೆಗೆ ತಲುಪಿದ್ದಾಗ ಬಹುತೇಕರು ಖರೀದಿ ಬಿಟ್ಟಿದ್ದರು, ಇಲ್ಲವೇ ಕಡಿಮೆ ಖರೀದಿ ಮಾಡುತ್ತಿದ್ದರು. ಅಡುಗೆಯಲ್ಲಿ ಹುಣಸೆಹಣ್ಣಿನಂತಹ ಪರ್ಯಾಯಕ್ಕೆ ಮೊರೆ ಹೋಗಿದ್ದರು. ಆದರೆ, ಇದೀಗ ಸಹಜ ಬೆಲೆಯತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಸಂತಸಗೊಂಡಿದ್ದಾರೆ. ಸಹಜವಾಗಿ ಟೊಮೆಟೋ ಖರೀದಿ ಮಾಡುತ್ತಿದ್ದು, ಅಡುಗೆ ಮನೆ ಟೊಮೆಟೋ ಕಾಣುತ್ತಿದೆ.

ಸೌಜನ್ಯ ಕೇಸ್‌ ಮರುತನಿಖೆಗಾಗಿ ವೀರೇಂದ್ರ ಹೆಗ್ಗಡೆ ಕುಟುಂಬ ಹೈಕೋರ್ಟ್‌ಗೆ

ಹೋಟೆಲ್‌ ಖಾದ್ಯದಲ್ಲಿ ಟೊಮೆಟೋ ಪ್ರತ್ಯಕ್ಷ!: ಸಾಮಾನ್ಯ ಜನ ಮಾತ್ರವಲ್ಲ, ಟೊಮೆಟೋ ದುಬಾರಿಯಾದಾಗ ಹೋಟೆಲ್‌ಗಳು ಕೂಡ ಖಾದ್ಯಗಳಲ್ಲಿ ಟೊಮೆಟೋ ಬಳಕೆಯನ್ನು ಕೈಬಿಟ್ಟಿದ್ದವು. ರಸ್ತೆ ಬದಿಯ ಮಸಾಲಾಪುರಿ ಅಂಗಡಿಗಳಿಂದ ಹಿಡಿದು ಒಂದು ಹಂತದ ಹೋಟೆಲ್‌ಗಳಲ್ಲಿ ಊಟ, ತಿಂಡಿಗಳಲ್ಲಿ ಟೊಮೆಟೋ ಕಾಣುತ್ತಿರಲಿಲ್ಲ. ಸಲಾಡ್‌ನಿಂದ ಟೊಮೆಟೋ ಮಾಯವಾಗಿತ್ತು. ಇದೀಗ ಹೋಟೆಲ್‌ಗಳ ತಿನಿಸುಗಳಲ್ಲಿ ಟೊಮೆಟೋ ಮತ್ತೆ ಹಾಜರಾಗಿದೆ, ಗ್ರಾಹಕರೂ ಖುಷಿಯಾಗಿದ್ದಾರೆ.

Follow Us:
Download App:
  • android
  • ios