ಬೆಂಗಳೂರು ಮೆಟ್ರೋ ತನ್ನ ಪಿಲ್ಲರ್‌ಗಳು ಮತ್ತು ವಯಾಡಕ್ಟ್‌ಗಳನ್ನು ಮೇಲ್ವಿಚಾರಣೆ ಮಾಡಲು AI-ಚಾಲಿತ ಡ್ರೋನ್‌ಗಳನ್ನು ನಿಯೋಜಿಸಲಿದೆ. ಈ ಡ್ರೋನ್‌ಗಳು ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳನ್ನು ಬಳಸಿಕೊಂಡು ಡೇಟಾವನ್ನು ಸಂಗ್ರಹಿಸುತ್ತವೆ ಮತ್ತು AI ಪರಿಕರಗಳು ಯಾವುದೇ ಸಮಸ್ಯೆಗಳನ್ನು ಪತ್ತೆಹಚ್ಚಲು ಡೇಟಾವನ್ನು ವಿಶ್ಲೇಷಿಸುತ್ತವೆ.

ಬೆಂಗಳೂರು (ಜ.14): 2011 ರಿಂದ ಕಾರ್ಯನಿರ್ವಹಿಸುತ್ತಿರುವ ರೀಚ್ 1 (ಎಂಜಿ ರಸ್ತೆ-ಬೈಯಪ್ಪನಹಳ್ಳಿ ವಿಭಾಗ) ವಿಭಾಗದ ಮೆಟ್ರೋ ಪಿಲ್ಲರ್‌ಗಳು ಹಾಗೂ ವಯಾಡಕ್ಟ್‌ಗಳ ಮೇಲ್ವಿಚಾರಣೆ ಮಾಡಲು ಬೆಂಗಳೂರು ಮೆಟ್ರೋ ಶೀಘ್ರದಲ್ಲೇ AI-ಚಾಲಿತ ಡ್ರೋನ್‌ಗಳನ್ನು ನಿಯೋಜಿಸಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ವಯಾಡಕ್ಟ್‌ಗಳು ಮತ್ತು ಪಿಲ್ಲರ್‌ಗಳು ಸೇರಿದಂತೆ ಕಾಂಕ್ರೀಟ್ ರಚನೆಗಳ ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡಲು ಕೃತಕ ಬುದ್ಧಿಮತ್ತೆ (AI) ಮತ್ತು ಡ್ರೋನ್‌ಗಳನ್ನು ಬಳಸಲು ಯೋಜಿಸಿದೆ. ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾ ಪರಿಕರಗಳನ್ನು ಹೊಂದಿದ ಡ್ರೋನ್‌ಗಳು ಮೆಟ್ರೋ ಪಿಲ್ಲರ್‌ ಹಾಗೂ ವಯಾಡಕ್ಟ್‌ಗಳ ಕುರಿತು ಡೇಟಾವನ್ನು ಸಂಗ್ರಹಿಸುತ್ತವೆ ಎಂದು ಬಿಎಂಆರ್‌ಸಿಎಲ್ ನಿರ್ದೇಶಕ (ಕಾರ್ಯಾಚರಣೆ ಮತ್ತು ನಿರ್ವಹಣೆ) ಸುಮಿತ್ ಭಟ್ನಾಗರ್ ತಿಳಿಸಿದ್ದಾರೆ. ಕಾಂಕ್ರೀಟ್‌ನಲ್ಲಿ ಬಿರುಕುಗಳಿದ್ದಲ್ಲದೆ, ಸವಕಳಿ ಆಗಿದ್ದಲ್ಲಿ ಅಥವಾ ಜೇನುಗೂಡು ಮಾದರಿಗಳಂತಹ ಸಮಸ್ಯೆಗಳನ್ನು ಪತ್ತೆಹಚ್ಚಲು AI ಪರಿಕರಗಳು ಡೇಟಾವನ್ನು ವಿಶ್ಲೇಷಿಸುತ್ತವೆ.

2011 ರಲ್ಲಿ ಉದ್ಘಾಟನೆಯಾದ ಬೆಂಗಳೂರಿನ ಮೊದಲ ಕಾರ್ಯಾಚರಣಾ ಮೆಟ್ರೋ ಕಾರಿಡಾರ್ ರೀಚ್ 1 (ಎಂಜಿ ರಸ್ತೆ - ಬೈಯಪ್ಪನಹಳ್ಳಿ) ನ ಕೃತಕ ಬುದ್ಧಿಮತ್ತೆ (AI) ಡ್ರೋನ್ ಆಧಾರಿತ ತಪಾಸಣೆಗಾಗಿ ಬಿಎಂಆರ್‌ಸಿಎಲ್ ಟೆಂಡರ್ ಆಹ್ವಾನಿಸಲು ಯೋಜಿಸುತ್ತಿದೆ. ಟೆಂಡರ್ ಕರೆಯುವ ಮೊದಲು ವ್ಯವಸ್ಥೆಯ ವಿಶೇಷಣಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಭಟ್ನಾಗರ್ ಹೇಳಿದ್ದಾರೆ. "AI ಆಧಾರಿತ ವ್ಯವಸ್ಥೆಗಳು ಹಾನಿಯ ತೀವ್ರತೆಯನ್ನು ಪ್ರಮಾಣೀಕರಿಸುತ್ತವೆ ಮತ್ತು ಎಚ್ಚರಿಕೆಗಳನ್ನು ನೀಡುತ್ತವೆ, ಇದು ನಮ್ಮ ಎಂಜಿನಿಯರ್‌ಗಳು ಸಕಾಲಿಕ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ" ಎಂದು ಅವರು ಹೇಳಿದರು.

ಮೇಲ್ವಿಚಾರಣಾ ಕಾರ್ಯವು ವಯಾಡಕ್ಟ್‌ಗಳು ಮತ್ತು ಪಿಲ್ಲರ್‌ಗಳ ಮೇಲೆ ಪ್ರಧಾನವಾಗಿ ಕೇಂದ್ರೀಕರಿಸುತ್ತದೆ, ಇವುಗಳಲ್ಲಿ ಬಿರುಕುಗಳು ಕಂಡುಬಂದಲ್ಲಿ, ಜೇನುಗೂಡು ಕಟ್ಟಿದಲ್ಲಿ ಇದರ ಮಾಹಿತಿಯನ್ನು ನೀಡಲಿದೆ. "AI-ಚಾಲಿತ ವಿಶ್ಲೇಷಣೆಯು ದೋಷಗಳು ಹಾನಿಕಾರಕವೇ ಎಂಬುದನ್ನು ಗುರುತಿಸುತ್ತದೆ ಮತ್ತು ಎಪಾಕ್ಸಿ ಅಥವಾ ಇತರ ಮಧ್ಯಸ್ಥಿಕೆಗಳೊಂದಿಗೆ ಸೀಲಿಂಗ್ ಮಾಡುವಂತಹ ಸರಿಪಡಿಸುವ ಕ್ರಮಗಳನ್ನು ಶಿಫಾರಸು ಮಾಡುತ್ತದೆ" ಎಂದು ಭಟ್ನಾಗರ್ ಹೇಳಿದರು.

Bengaluru: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌, ಕೋಲ್ಕತ್ತದಿಂದ ಹೊರಟ ಯೆಲ್ಲೋ ಲೈನ್‌ನ ಮೊದಲ ಡ್ರೈವರ್‌ಲೆಸ್‌ ಟ್ರೇನ್‌

ನಿರ್ಮಾಣ ಹಂತದಲ್ಲಿ ಪತ್ತೆಯಾಗದ ಸಮಸ್ಯೆಗಳಿಂದಾಗಿ ದೋಷಗಳು ಹೆಚ್ಚಾಗಿ ಉದ್ಭವಿಸುತ್ತವೆ. ಅಂತಹ ಸಮಸ್ಯೆಗಳು ವಿರಳವಾಗಿದ್ದರೂ, ರಚನೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗಂಭೀರ ಪ್ರಕರಣಗಳನ್ನು ತಕ್ಷಣವೇ ಪರಿಹರಿಸುವುದು ನಿರ್ಣಾಯಕವಾಗಿದೆ. "ಪ್ರಸ್ತುತ, ಬೈನಾಕ್ಯುಲರ್‌ಗಳು, ಕ್ಯಾಮೆರಾಗಳು ಮತ್ತು ಹೈಡ್ರಾಲಿಕ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ತಪಾಸಣೆಗಳನ್ನು ಮ್ಯಾನುವೆಲ್‌ಆಗಿ ನಡೆಸಲಾಗುತ್ತದೆ. ಡ್ರೋನ್‌ಗಳು ಮತ್ತು AI ಅಳವಡಿಕೆಯು ಈ ಪ್ರಯತ್ನವನ್ನು ಕಡಿಮೆ ಮಾಡುತ್ತದೆ, ನಿಖರತೆಯನ್ನು ಸುಧಾರಿಸುತ್ತದೆ ಮತ್ತು ಮೂಲಸೌಕರ್ಯದ ಸ್ಥಿತಿಯನ್ನು ವೇಗವಾಗಿ ನಿರ್ಣಯಿಸಲು ಅನುವು ಮಾಡಿಕೊಡುತ್ತದೆ" ಎಂದು ಭಟ್ನಾಗರ್ ಹೇಳಿದರು.

ಮೆಟ್ರೋ ಯೆಲ್ಲೋ ಲೈನ್‌ ವಿಳಂಬದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್‌, ಅಪ್‌ಡೇಟ್‌ ನೀಡಿದ BMRCL!

ಡೇಟಾವನ್ನು ಸಂಗ್ರಹಿಸಲು ಸೆನ್ಸಾರ್‌ಗಳನ್ನು ಹೊಂದಿರುವ ಡ್ರೋನ್‌ಗಳನ್ನು ಬಳಸಲಾಗುವುದು, ಇದು ಮ್ಯಾನ್ಯುಯೆಲ್‌ ತಪಾಸಣೆಗೆ ಸಂಬಂಧಿಸಿದ ಸಮಯ, ಅಪಾಯಗಳು ಮತ್ತು ವೆಚ್ಚಗಳನ್ನು ಕಡಿಮೆ ಮಾಡುತ್ತದೆ.