ಮೆಟ್ರೋ ಯೆಲ್ಲೋ ಲೈನ್ ವಿಳಂಬದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್, ಅಪ್‌ಡೇಟ್ ನೀಡಿದ BMRCL!
ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ ಮತ್ತಷ್ಟು ವಿಳಂಬವಾಗಿದ್ದು, ರೈಲುಗಳ ಪೂರೈಕೆಯಲ್ಲಿನ ಸಮಸ್ಯೆಯೇ ಕಾರಣ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಮೊದಲ ಮೂರು ರೈಲುಗಳು ಬಂದ ಬಳಿಕ ಮಾರ್ಗ ಕಾರ್ಯಾಚರಣೆ ಆರಂಭವಾಗಲಿದ್ದು, 2025ರ ಮಾರ್ಚ್‌ನಲ್ಲಿ ವಾಣಿಜ್ಯ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ಬೆಂಗಳೂರು (ಜ.2): ನಮ್ಮ ಮೆಟ್ರೋ ಹಳದಿ ಮಾರ್ಗದ ಲೈನ್ ಉದ್ಘಾಟನೆ ಮತ್ತಷ್ಟು ವಿಳಂಬವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಎಕ್ಸ್ ಖಾತೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಬೇಸರದ ಜೊತೆಗೆ ಯಾವ ಕಾರಣದಿಂದ ವಿಳಂಬವಾಗುತ್ತಿದೆ ಅನ್ನೋದನ್ನೂ ಸಂಸದ ತಿಳಿಸಿದ್ದಾರೆ. 2024ರಲ್ಲಿಯೇ ಯೆಲ್ಲೋ ಲೈನ್ ಆರಂಭಕ್ಕೆ ಡೆಡ್‌ಲೈನ್ ನೀಡಲಾಗಿತ್ತು. ಮೆಟ್ರೋ ಮಾರ್ಗದ ಸ್ಟೇಷನ್ ವರ್ಕ್ ಮುಗಿದಿದೆ. ಆದರೆ, ರೈಲುಗಳ ಪೂರೈಕೆ ಸಮರ್ಪಕ ವಾಗಿ ಆಗದ ಕಾರಣ, ಇದೇ ವರ್ಷದ ಮುಂದಿನ ಕೆಲ ತಿಂಗಳಲ್ಲಿ ಮೆಟ್ರೋ ಸಂಚಾರಕ್ಕೆ ಪ್ರಯತ್ನ ಮಾಡಲಾಗುತ್ತದೆ ಎಂದಿದ್ದಾರೆ. ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆಯ ಪ್ರಾರಂಭವು BMRCL ನೀಡಿದ ಎಲ್ಲಾ ಗಡುವನ್ನು ಪೂರೈಸುವಲ್ಲಿ ವಿಫಲವಾಗಿದೆ. ಇದು ನಮ್ಮೆಲ್ಲರನ್ನು ನಿರಾಸೆಗೊಳಿಸಿದೆ ಎಂದಿದ್ದಾರೆ.
ರೈಲುಗಳ ಲಭ್ಯತೆ ಇಲ್ಲದ ಕಾರಣಕ್ಕೆ ಮಾರ್ಗ ಆರಂಭ ವಿಳಂಬವಾಗಿದೆ. ಮುಂದಿನ ಕೆಲ ದಿನಗಳಲ್ಲಿಯೇ ಒಳ್ಳೆಯ ಸುದ್ದಿ ಸಿಗಬಹುದು ಎಂದು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ, ಉತ್ಪಾದನೆಯನ್ನು ತ್ವರಿತಗೊಳಿಸವಂತೆ ಮನವಿ ಮಾಡಲಾಗಿದೆ. ರೈಲು ತಯಾರಕರಾದ ತಿತಾಗಢ ರೈಲ್ ಸಿಸ್ಟಮ್ಸ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಎಂಜಿನಿಯರ್‌ಗಳಿಗೆ ವೀಸಾ ಸೇರಿದಂತೆ ಹಲವು ತಡೆಗಳನ್ನು ಪರಿಹರಿಸಲಾಗಿದೆ.
ಈಗ ಜನವರಿ 6 ರಂದು ಬೆಂಗಳೂರಿಗೆ ಕಳುಹಿಸಲು ಮೊದಲ ರೈಲು ಸಿದ್ಧವಾಗಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ರೈಲು ಬರಲಿದೆ. ಏಪ್ರಿಲ್‌ನಲ್ಲಿ ಮೂರನೇ ರೈಲನ್ನು ತಲುಪಿಸಲು ತಿತಾಗಢ್ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಅದಾದ ಬಳಿಕ ತಿಂಗಳಿಗೆ ಒಂದರಂತೆ ರೈಲುಗಳನ್ನು ಸರಬರಾಜು ಮಾಡುವುದಾಗಿ ಹೇಳಿದೆ. ಮೊದಲ ಮೂರು ರೈಲು ಬೆಂಗಳೂರು ತಲುಪಿದ ಬಳಿಕ ಎಲ್ಲೋ ಮಾರ್ಗ ಕಾರ್ಯಚರಣೆ ಮಾಡಲಾಗುತ್ತದೆ ಎಂದಿದ್ದಾರೆ.
ಅಪ್‌ಡೇಟ್ ನೀಡಿದ ನಮ್ಮ ಮೆಟ್ರೋ: ಇದರ ಬೆನ್ನಲ್ಲಿಯೇ ಆರ್ ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿ ನೀಡಿದೆ. 2025ರ ಮಾರ್ಚ್ ನಲ್ಲಿ ಯಲ್ಲೋ ಲೈನ್ ಸಂಚಾರ ಫಿಕ್ಸ್ ಎಂದು ತಿಳಿಸಿದೆ. ಮಾರ್ಚ್ ನಲ್ಲಿ ಯೆಲ್ಲೋ ಲೈನ್ ನಲ್ಲಿ ವಾಣಿಜ್ಯ ಸಂಚಾರಕ್ಕೆ BMRCL ಸಿದ್ದತೆ ಮಾಡುತ್ತಿದ್ದು, ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗ ಕಾರ್ಯಾಚರಣೆ ಆಗಲಿದೆ. 18.82 ಕಿ.ಮೀ ಉದ್ದದ 16 ಎಲಿವೇಟೆಡ್ ನಿಲ್ದಾಣಗಳೊಂದಿಗೆ ಹಳದಿ ಮಾರ್ಗ ಸಿದ್ದವಾಗಿದ್ದು, ಎಲ್ಲಾ ಪರೀಕ್ಷೆಗಳನ್ನ ಮುಗಿಸಿ ರೈಲಿಗಾಗಿ ಬಿಎಂಆರ್‌ಸಿಎಲ್ ಕಾಯುತ್ತಿದೆ.
ಮೆಟ್ರೋದಲ್ಲಿ ಯುವತಿಯರ ವಿಡಿಯೋ, ಫೋಟೋ ತೆಗೆಯುತ್ತಿದ್ದ ವೈದ್ಯ ಅರೆಸ್ಟ್, ಎಚ್ಚರಿಕೆ ಕೊಟ್ಟು ಕಳಿಸಿದ ಪೊಲೀಸ್!
ಜನವರಿ 15ಕ್ಕೆ ಬೆಂಗಳೂರಿಗೆ ಬರಲಿರೋ ಲೋಕೋ ಪೈಲೆಟ್ ಲೆಸ್ ರೈಲು. ಚೀನಾದಿಂದ ಸಮುದ್ರ ಮಾರ್ಗವಾಗಿ ಚೈನೈಗೆ ಪ್ರಯಾಣ ಮಾಡಲಿದೆ. ಬಳಿಕ ರಸ್ತೆ ಮಾರ್ಗವಾಗಿ ಮೂಲ ಮಾದರಿ ರೈಲು ಬೊಮ್ಮಸಂದ್ರಕ್ಕೆ ಬರಲಿದೆ. ಈ ಬೆನ್ನಲ್ಲೇ ಮೂರನೇ ರೈಲು ಸಹ ರೀಚ್ ಆಗುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಯೆಲ್ಲೋ ಲೈನ್ ಮೆಟ್ರೋ ವಾಣಿಜ್ಯ ಸಂಚಾರ ಫಿಕ್ಸ್. ಮಾರ್ಚ್ ವರೆಗೆ ಎಲ್ಲ ರೈಲುಗಳ ಟೆಸ್ಟಿಂಗ್ ಕಾರ್ಯ ಮುಗಿಸಿ ವಾಣಿಜ್ಯ ಸಂಚಾರ ಆರಂಭಿಸಲು ಫ್ಲಾನ್ ಮಾಡಲಾಗಿದೆ ಎಂದು ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Bengaluru: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಇನ್ಮುಂದೆ ರೈಲಲ್ಲಿ ರಶ್ ಇರೋದೇ ಇಲ್ಲ!