ಗೋಲ್ಡನ್ ಟೆಂಪಲ್‌ಗೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ
ಬೈಲುಕುಪ್ಪೆಯಲ್ಲಿರುವ ಗೋಲ್ಡನ್ ಟೆಂಪಲ್ ಪ್ರವಾಸಿ ಸ್ಥಳಕ್ಕೆ ಆಗಮಿಸುವ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರುವಂತೆ ಟಿಬೆಟಿಯನ್ ಸೆಟಲ್ಮೆಂಟ್ ಅಧಿಕಾರಿಗಳಿಗೆ ತಹಸೀಲಾರ್ ಶ್ವೇತಾ ಎನ್. ರವೀಂದ್ರ ಆದೇಶಿಸಿದ್ದಾರೆ.
ಪಿರಿಯಾಪಟ್ಟಣ(ಮಾ.15): ಕೊರೋನಾ ವೈರಸ್ ಹರಡದಂತೆ ಹಾಗೂ ಸೋಂಕು ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಪ್ರತಿನಿತ್ಯ ದೇಶವಿದೇಶಗಳ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುವ ತಾಲೂಕಿನ ಬೈಲುಕುಪ್ಪೆಯಲ್ಲಿರುವ ಗೋಲ್ಡನ್ ಟೆಂಪಲ್ ಪ್ರವಾಸಿ ಸ್ಥಳಕ್ಕೆ ಆಗಮಿಸುವ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರುವಂತೆ ಟಿಬೆಟಿಯನ್ ಸೆಟಲ್ಮೆಂಟ್ ಅಧಿಕಾರಿಗಳಿಗೆ ತಹಸೀಲಾರ್ ಶ್ವೇತಾ ಎನ್. ರವೀಂದ್ರ ಆದೇಶಿಸಿದ್ದಾರೆ.
ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಗೋಲ್ಡನ್ ಟೆಂಪಲ್‌ಗೆ ವಿದೇಶಿ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆ ಇತ್ತೀಚಿನ ದಿನಗಳಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸೋಂಕು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಮಾಡಲಾಗಿದೆ.
ಕೊರೋನಾ ಭೀತಿ: KRS, ರಂಗನತಿಟ್ಟಿಗೆ 1 ವಾರ ನಿಷೇಧ
ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಮಾ.15ರಿಂದಲೇ ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ, ವಿದೇಶಿ ಪ್ರಜೆಗಳ ಮೇಲೆ ನಿಗಾ ವಹಿಸುವಂತೆ ಮತ್ತು ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.