Asianet Suvarna News Asianet Suvarna News

ಕೊರೋನಾ ಭೀತಿ: KRS, ರಂಗನತಿಟ್ಟಿಗೆ 1 ವಾರ ನಿಷೇಧ

ಮಹಾಮಾರಿಯಂತೆ ಕಾಡುತ್ತಿರುವ ಕೊರೋನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬೆನ್ನಲ್ಲೇ ಜಿಲ್ಲೆಯ ಪ್ರವಾಸಿ ತಾಣಗಳಾದ ಕೆಆರ್‌ಎಸ್‌ ಮತ್ತು ರಂಗನತಿಟ್ಟು ಪಕ್ಷಿಧಾಮಕ್ಕೆ 1 ವಾರ ಕಾಲ ನಿಷೇಧ ಹೇರಿ, ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿ ಆದೇಶಿಸಿದೆ. ನಂದಿ ಬೆಟ್ಟಕ್ಕೆ ಪ್ರವಾಸಿಗರ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಕೊರೋನ ತಡೆಗೆ ಜಿಲ್ಲೆಯಲ್ಲಿ ಮೊದಲ ಕ್ರಮ ವಹಿಸಲಾಗಿದೆ.

 

KRS Ranganathittu closed for a week due to coronavirus fear
Author
Bangalore, First Published Mar 14, 2020, 11:02 AM IST

ಮಂಡ್ಯ(ಮಾ.14): ಮಹಾಮಾರಿಯಂತೆ ಕಾಡುತ್ತಿರುವ ಕೊರೋನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬೆನ್ನಲ್ಲೇ ಜಿಲ್ಲೆಯ ಪ್ರವಾಸಿ ತಾಣಗಳಾದ ಕೆಆರ್‌ಎಸ್‌ ಮತ್ತು ರಂಗನತಿಟ್ಟು ಪಕ್ಷಿಧಾಮಕ್ಕೆ 1 ವಾರ ಕಾಲ ನಿಷೇಧ ಹೇರಿ, ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿ ಆದೇಶಿಸಿದೆ. ನಂದಿ ಬೆಟ್ಟಕ್ಕೆ ಪ್ರವಾಸಿಗರ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಕೊರೋನ ತಡೆಗೆ ಜಿಲ್ಲೆಯಲ್ಲಿ ಮೊದಲ ಕ್ರಮ ವಹಿಸಲಾಗಿದೆ.

ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ನಾಳೆಯಿಂದ ಒಂದು ವಾರಗಳ ಕಾಲ, ಮಾಲ್‌, ಚಿತ್ರಮಂದಿರ, ನೈಟ್‌ ಕ್ಲಬ್‌ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ನಡೆಯುವ ಸಮಾರಂಭಗಳನ್ನು ನಿಲ್ಲಿಸುವಂತೆ ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ. ಇದನ್ನು ಜಿಲ್ಲೆಯಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುವುದು. ಬೇಸಿಗೆ ಶಿಬಿರಗಳು, ಸಭೆ ಸಮಾರಂಭ, ಮದುವೆ, ಕ್ರೀಡಾಕೂಟ, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಮುಂದೂಡುವಂತೆ ತಿಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವೈರಮುಡಿ ಮೇಲೆ ಕರಿನೆರಳು:

ಏ.2 ರಂದು ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ ನಡೆಯಲಿದೆ. ಈ ಉತ್ಸವಕ್ಕೆ ತಮಿಳುನಾಡು, ಆಂಧ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಜನರು ಆಗಮಿಸಲಿದ್ದಾರೆ. ಲಕ್ಷಾಂತರ ಜನರು ಸೇರುವ ಈ ಉತ್ಸವ ವೇಳೆ ಕೊರೋನಾ ವೈರಸ್‌ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮುಂದಿನ 1 ವಾರ ಪರಿಸ್ಥಿತಿಯನ್ನು ಅವಲೋಕಿಸಿ ವೈರಮುಡಿ ಉತ್ಸವ ಆಚರಣೆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪ್ರವಾಸೋದ್ಯಮ ಬಂದ್‌:

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಪ್ರವಾಸಿ ತಾಣಗಳಲ್ಲಿ ಜನರ ಸಂಖ್ಯೆ ಕಡಿಮೆಯಾಗಿದೆ. ಒಂದು ವಾರ ತನಕ ಕಡ್ಡಾಯವಾಗಿ ಪ್ರವಾಸಿ ತಾಣಗಳಿಗೆ ಭೇಟಿ ನೀಡದಂತೆ ನಿರ್ಬಂಧ ಹೇರಲು ಸೂಚಿಸಲಾಗಿದೆ. ಇದರಿಂದಾಗಿ ಶ್ರೀರಂಗಪಟ್ಟಣ, ಮೇಲುಕೋಟೆ, ಗಗನಚುಕ್ಕಿ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು ಬಣಗುಟ್ಟುವ ಸಾಧ್ಯತೆ ಇದೆ. ಚಿತ್ರಮಂದಿರಗಳಿಗೆ, ವಿಶ್ವವಿದ್ಯಾಲಯ, ಶಾಲಾ, ಕಾಲೇಜುಗಳಿಗೆ ಒಂದು ವಾರ ರಜೆ ಘೋಷಿಸಲಾಗಿದೆ. ಇದು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳಲಿದೆ. ಕಲ್ಯಾಣ ಮಂಟಪಗಳಲ್ಲಿ ಮದುವೆಗಳನ್ನು ಮುಂದೂಡುವಂತೆ ಕೋರಲಾಗಿದೆ. ಎಲ್ಲವೂ ಸಹ ಸಾರ್ವಜನಿಕರ ಸಹಕಾರದಿಂದ ಸರ್ಕಾರಿ ಆದೇಶವನ್ನು ಅನುಷ್ಠಾನಗೊಳಿಸಲಾಗುವುದು. ಇವೆಲ್ಲವೂ ಮುಂಜಾಗೃತ ಕ್ರಮಗಳಾಗಿವೆ ಎಂದು ವಿವರಿಸಿದರು.

ತಜ್ಞ ವೈದ್ಯರ ತಂಡ ನಿಯೋಜನೆ:

ಕೊರೋನಾ ವೈರಸ್‌ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಉಸ್ತುವಾರಿ ನೋಡಿಕೊಳ್ಳಲು ಡಿಎಚ್‌ಒ, ಮಿಮ್ಸ್‌ನ ತಜ್ಞರನ್ನು ಒಳಗೊಂಡ ತಂಡವನ್ನು ನೇಮಕ ಮಾಡಲಾಗುವುದು. ಈ ತಂಡ ಯಾವುದೇ ಶಂಕಿತ ರೋಗಿಯನ್ನು ನಿಗಾಘಟಕದಲ್ಲಿ ಇಟ್ಟು ಪರಿಶೀಲನೆ ಮಾಡಲಿದೆ. ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಾರ್‌ಗಳು, ಮಾಂಸದ ಅಂಗಡಿಗಳು, ಹೋಟೆಲ್‌ ಗಳನ್ನು ಮುಚ್ಚಿಸುವ ಬಗ್ಗೆ ಇನ್ನಷ್ಟೆತೀರ್ಮಾನ ಕೈಗೊಳ್ಳಬೇಕಿದೆ. ಈ ವೇಳೆಯಲ್ಲಿ ಬೀಗರ ಔತಣವನ್ನು ಕೂಡ ಅದ್ಧೂರಿಯಾಗಿ ಮಾಡದಂತೆ ಜನರಿಗೆ ತಿಳಿವಳಿಕೆ ಮೂಡಿಸಲಾಗುವುದು.

ಕೋಟ್‌-

ರಾಜ್ಯ ಸರ್ಕಾರ ಕೊರೋನಾ ವೈರಸ್‌ ಹರಡದಂತೆ ಕೈಗೊಂಡ ಎಲ್ಲಾ ಕ್ರಮಗಳು ಸ್ವಾಗತಿಸಬೇಕಿದೆ. ವೈರಸ್‌ ಹರಡಿದ ನಂತರ ನಿಯಂತ್ರಣ ಮಾಡುವುದಕ್ಕಿಂತ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಜನರ ಸಹಕಾರ ಅಗತ್ಯ. ಒಂದು ವಾರ ಕಷ್ಟವಾದರೂ ಸಹಿಸಿಕೊಳ್ಳಲೇಬೇಕಿದೆ.

ಇಂಡುವಾಳು ಬಸವರಾಜು ಹೋರಾಟಗಾರ

ಮಾ.11 ರಂದು ನನ್ನ ಸಹೋದರನ ವಿವಾಹವಾಗಿತ್ತು. ಭಾನುವಾರ ಬೀಗರ ಔತಣವನ್ನು ಏರ್ಪಡಿಸಿದ್ದೆವು. ಕೊರೋನಾ ವೈರಸ್‌ ಹರಡದಂತೆ ಸರ್ಕಾರ ಕೈಗೊಂಡ ಕ್ರಮದಿಂದಾಗಿ ಬೀಗರ ಔತಣಕೂಟವನ್ನು ಮುಂದೂಡಿದ್ದೇವೆ. ಮುಂದಿನ ದಿನಾಂಕ, ಸಮಾರಂಭ ನಡೆಯುವ ಸ್ಥಳವನ್ನು ತಿಳಿಸಲಾಗುವುದು.

ಮಹೇಶ್‌ ಮಠದದೊಡ್ಡಿ ಮದ್ದೂರು

ರಾಜ್ಯದಲ್ಲಿ ಕೊರೋನಾ ವೈರಸ್‌ಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ. ಇದರಿಂದ ಪ್ರವಾಸಿತಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ಆದೇಶದನ್ವಯ ತಾಲೂಕಿನ ರಂಗನತಿಟ್ಟು ಪ್ರವಾಸಿ ತಾಣಕ್ಕೆ ನಿರ್ಬಂಧ ಹೇರಲಾಗಿದೆ. ದೇವಸ್ಥಾನಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ.

ಎಂ.ವಿ.ರೂಪ, ತಹಸೀಲ್ದಾರ್‌ ಶ್ರೀರಂಗಪಟ್ಟಣ

Follow Us:
Download App:
  • android
  • ios