Mandya Crime: ಹೇಮಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ
ಶವ ಹುಡುಕಾಟಕ್ಕಾಗಿ ಅಗತ್ಯ ಮೂಲ ಸೌಕರ್ಯಗಳಿಲ್ಲದೇ ಪರದಾಡಿದ ಅಗ್ನಿಶಾಮಕ ಸಿಬ್ಬಂದಿ
ಕೆ.ಆರ್.ಪೇಟೆ(ಸೆ.02): ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಶವಕ್ಕಾಗಿ ಅಗ್ನಿ ಶಾಮಕ ಪಡೆಯ ಸಿಬ್ಬಂದಿ ಕಳೆದ ಎರಡು ದಿನಗಳಿಂದ ನಿರಂತರ ಹುಡುಕಾಟ ನಡೆಸಿರುವ ಘಟನೆ ತಾಲೂಕಿನ ಕಟ್ಟೆಕ್ಯಾತನಹಳ್ಳಿ ಬಳಿ ನಡೆದಿದೆ. ತಾಲೂಕಿನ ಹೊಸಮಾವಿನಕೆರೆ ಗ್ರಾಮದ ಬಲ್ಲರಾಮಯ್ಯ ಪತ್ನಿ ಜಯಮ್ಮ (60) ಮೃತಪಟ್ಟ ಮಹಿಳೆ. ಜಯಮ್ಮ ಬಲ್ಲರಾಮಯ್ಯ ದಂಪತಿ ಪುತ್ರಿಯನ್ನು ಪಾಂಡವಪುರಕ್ಕೆ ಕೊಟ್ಟು ವಿವಾಹ ಮಾಡಿದ್ದರು. ಮಗಳಿಗೆ ಬಾಗಿನ ಕೊಡಲು ಮಂಗಳವಾರ ಪಾಂಡವಪುರಕ್ಕೆ ಜಯಮ್ಮ ತೆರಳಿದ್ದರು. ಆದರೆ, ಮಗಳ ಮನೆಗೆ ಹೋಗದೆ ಹಿಂತಿರುಗಿದ ಜಯಮ್ಮ ಅದೇ ದಿನ ಸಂಜೆ ತಾಲೂಕಿನ ಕಟ್ಟೆಕ್ಯಾತನಹಳ್ಳಿ ಬಳಿ ಹೇಮಾವತಿ ನದಿಗೆ ನಿರ್ಮಿಸಿರುವ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಯಮ್ಮನ ಬ್ಯಾಗಿನಲ್ಲಿ ಬಾಗಿನದ ಸಾಮಗ್ರಿಗಳು ಪತ್ತೆಯಾಗಿದ್ದು, ಶವಕ್ಕಾಗಿ ಶಿವಣ್ಣ ನೇತೃತ್ವದ ಅಗ್ನಿಶಾಮಕ ಸಿಬ್ಬಂದಿ ಮತ್ತು ಈಜುಗಾರರು ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕ ನಿರಂಜನ್, ಪಿಎಸ್‌ಐ ಪ್ರಮೋದ್ ಭೇಟಿ ನೀಡಿ ಶವದ ಹುಡುಕಾಟ ಮುಂದುವರಿಸಿದ್ದಾರೆ.
ಕೋವಿಡ್ ವೇಳೆ ಆತ್ಮಹತ್ಯೆ ಮಾಡಿಕೊಂಡವರೆಷ್ಟು? ಗಾಬರಿ ಮೂಡಿಸುತ್ತಿದೆ ಕೇಂದ್ರದ ವರದಿ
ಸಿಬ್ಬಂದಿಗೆ ಅಗತ್ಯ ಸಾಮಗ್ರಿಗಳು ಇಲ್ಲ:
ಶವ ಹುಡುಕಾಟಕ್ಕಾಗಿ ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಅಗತ್ಯ ಮೂಲ ಸೌಕರ್ಯಗಳಿಲ್ಲದೇ ಪರದಾಟ ನಡೆಸಬೇಕಾಯಿತು. ಸಚಿವರ ಕ್ಷೇತ್ರವಾಗಿದ್ದರೂ ಇಲ್ಲಿನ ಸಿಬ್ಬಂದಿಗೆ ನೀರಿನಲ್ಲಿ ಕಾರ್ಯಾಚರಣೆ ಮಾಡಲು ಬೋಟಿನ ಸೌಲಭ್ಯ ಮರೀಚಿಕೆಯಾಗಿದೆ. ಮೀನುಗಾರರ ತೆಪ್ಪವನ್ನು ಅವಲಂಬಿಸಿ ಕಾರ್ಯಾಚರಣೆ ಮಾಡಬೇಕಾಯಿತು.
ಕಳೆದ 2 ವರ್ಷದಿಂದಲೂ ಅಗ್ನಿಶಾಮಕ ವಾಹನ ಮತ್ತು ಬೋಟು ಸೇರಿದಂತೆ ಹಲವು ರಕ್ಷಣಾತ್ಮಕ ಸಾಮಗ್ರಿಗಳಿಗೆ ಸಚಿವರಿಗೆ ಬೇಡಿಕೆ ಸಲ್ಲಿಸುತ್ತಿದ್ದರೂ ಅವುಗಳನ್ನು ಪೂರೈಸುವ ಗೋಜಿಗೆ ಹೋಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಸ್ಥಳೀಯರು ದೂರಿದ್ದಾರೆ.
ಅಗ್ನಿಶಾಮಕ ಠಾಣೆಗೆ ಸ್ವಿಮ್ಮಿಂಗ್‌ಗಳ ಕೊರತೆ:
ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಅಗತ್ಯ ಸಿಬ್ಬಂದಿ ಕೊರತೆ ಎದ್ದು ಕಾಡುತ್ತಿದೆ. ಅಲ್ಲದೇ, ಪರಿಣಿತ ಈಜುಗಾರರ ಅಗತ್ಯವಿದೆ. ಕೂಡಲೇ ಪರಿಣಿತ ಸ್ವಿಮ್ಮರ್‌ಗಳನ್ನು ನೇಮಕ ಮಾಡುವಂತೆ ಕಟ್ಟೆಕ್ಯಾತನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.