ಕಾರವಾರ: ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್, ಮೂರು ತಿಂಗಳ ಶಿಶು ಸಾವು
ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ ವೆಂಟಿಲೇಟರ್ ಆ್ಯಂಬುಲೆನ್ಸ್ ಕೊರತೆ, ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ದೊರೆಯದೆ ಮಗು ಸಾವು
ಕಾರವಾರ(ಜು.21): ಮದುವೆಯಾಗಿ ಐದು ವರ್ಷ ಕಳೆದರೂ ಮಕ್ಕಳು ಆಗಿಲ್ಲ ಅಂತಾ ಆ ದಂಪತಿ ಕಂಡ ಕಂಡ ದೇವರಿಗೆಲ್ಲಾ ಹರಕೆ ಹೊತ್ತಿದ್ದರು. ಕೊನೆಗೂ ದೇವರು ಕಣ್ತೆರೆದ ಕಾರಣ ಆ ದಂಪತಿ ಗಂಡು ಮಗುವನ್ನು ಪಡೆದಿದ್ದರು. ಆದರೆ, ವಿಧಿ ಎಷ್ಟು ಕ್ರೂರಿ ಅಂದ್ರೆ ಮಗು ಜನಿಸಿದ ಮೂರೇ ತಿಂಗಳಲ್ಲಿ ಇಹಲೋಕ ತ್ಯಜಿಸಿದೆ. ಇದಕ್ಕೆ ಕಾರಣ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಹಾಗೂ ಮಕ್ಕಳ ಆ್ಯಂಬುಲೆನ್ಸ್ ಇರದ ಕಾರಣ ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ.
ಕಾರವಾರದ ಕಿನ್ನರ ನಿವಾಸಿ ರಾಜೇಶ್ ನಾಗೇಕರ್ ಮತ್ತು ರಿಯಾ ನಾಗೇಕರ್ ದಂಪತಿಯ ಮೂರು ತಿಂಗಳ ಗಂಡು ಮಗು ರಾಜನ್‌ಗೆ ಕಫ ಹೆಚ್ಚಾಗಿ ನ್ಯೂಮೋನಿಯಾಗೆ ತಿರುಗಿದ್ದ ಕಾರಣ ಕಳೆದ ಮೂರು ದಿನಗಳಿಂದ ಕಾರವಾರದ ಜಿಲ್ಲಾಸ್ಪತ್ರೆಯ ಪಿಡಿಯಾಟ್ರಿಕ್ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಪೋಷಕರು ಉಡುಪಿಗೆ ವರ್ಗಾಯಿಸುತ್ತೇವೆ ಅಂದ್ರೂ ವೈದ್ಯರು ಮಾತ್ರ ಚಿಕಿತ್ಸೆ ಮುಂದುವರಿಸಿದ್ರು. ನಿನ್ನೆ ರಾತ್ರಿ ಏಕಾಏಕಿ ಮಗುವಿನ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಹೀಗಾಗಿ ತಕ್ಷಣ ಉಡುಪಿ ಆಸ್ಪತ್ರೆಗೆ ಕೊಂಡೊಯ್ಯಲು ವೈದ್ಯರು ತಿಳಿಸಿದ್ದಾರೆ.. ಮಗುವನ್ನು ಸಾಗಿಸಬೇಕಾದರೆ ಪಿಡಿಯಾಟ್ರಿಕ್ ವೆಂಟಿಲೇಟರ್ ಆ್ಯಂಬುಲೆನ್ಸ್ ಅವಶ್ಯಕತೆಯಿತ್ತಾದ್ರೂ, ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವೆಂಟಿಲೇಟರ್ ಹೊಂದಿರುವ ಅಂಬ್ಯುಲೆನ್ಸ್ ಇಲ್ಲ. ಹೇಗೋ ಕಷ್ಟ ಪಟ್ಟು ಉಡುಪಿಯಿಂದಲೇ ಪಿಡಿಯಾಟ್ರಿಕ್ ವೆಂಟಿಲೇಟರ್ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಆದರೆ, ದುರದೃಷ್ಟವಶಾತ್ ಆ್ಯಂಬುಲೆನ್ಸ್ ಬರೋವಷ್ಟರಲ್ಲೇ ಮಗು ಸಾವನ್ನಪ್ಪಿದೆ. ಮಗುವಿನ ಸಾವಿಗೆ ಕಾರಣ ವೈದ್ಯರ ನಿರ್ಲಕ್ಷ್ಯ ಮತ್ತು ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ಪಿಡಿಯಾಟ್ರಿಕ್ ವೆಂಟಿಲೇಟರ್ ಆ್ಯಂಬುಲೆನ್ಸ್ ಸಿಗದೇ ಇರುವುದೆಂದು ಆರೋಪಿಸಿ ಪೋಷಕರು ಹಾಗೂ ಹೋರಾಟಗಾರರು ಆಸ್ಪತ್ರೆ ಮುಂದೆ ಮಗುವಿನ ಮೃತ ದೇಹವನ್ನಿಟ್ಟು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪದೇ ಪದೇ ಪ್ರಕರಣಗಳು ಕಾಣಬರುತ್ತಿರುವುದರಿಂದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಹಾಗೂ ಹೋರಾಟಗಾರರು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಭಾರೀ ಮಳೆಗೆ ವೃದ್ಧೆ ಬಲಿ
ಆದರೆ, ಘಟನೆ ಸಂಬಂಧಿಸಿ ಪ್ರತಿಕ್ರಯಿಸಿರುವ ಆಸ್ಪತ್ರೆ ವೈದ್ಯರು, ಕಳೆದ ಒಂದು ವಾರದಿಂದ ಮಗು ಕಫದಿಂದ ಬಳಲುತ್ತಿತ್ತು. ತಕ್ಷಣ ಪೋಷಕರು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆ ಆಸ್ಪತ್ರೆಯಲ್ಲಿ ಮಗು ಗುಣವಾಗಿಲ್ಲ. ಹೀಗಾಗಿ ಅಲ್ಲಿಂದ ಕಾರವಾರ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಗುವನ್ನು ದಾಖಲು ಮಾಡಿಕೊಂಡು ಕಿಮ್ಸ್ ವೈದ್ಯರು ಪಿಡಿಯಾಟ್ರಿಕ್ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ. ಆದರೆ, ನಿನ್ನೆ ರಾತ್ರಿ ಮಗುವಿನ ಆರೋಗ್ಯದ ಸ್ಥಿತಿ ತೀವ್ರ ಹದಗೆಟ್ಟಿದೆ. ಎಷ್ಟೇ ಪ್ರಯತ್ನ ಪಟ್ಟರೂ ಮಗುವನ್ನ ಉಳಿಸಿಕೊಳ್ಳಲು ಆಗಲಿಲ್ಲ. ಬ್ಯಾಡ್ ಲಕ್ ಮಗು ಮೃತಪಟ್ಟಿದೆ ಎನ್ನುತ್ತಾರೆ ವೈದ್ಯರು.