ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಭಾರೀ ಮಳೆಗೆ ವೃದ್ಧೆ ಬಲಿ
ನಿನ್ನೆ ರಾತ್ರಿಯಿಂದ ಮೂಡಿಗೆರೆ ತಾಲ್ಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ಹೇಮಾವತಿ ನದಿ ನೀರಿನ ಒಳ ಹರಿವು ಹೆಚ್ಚಾಗಿದೆ. ಇಂದು ಬೆಳಗ್ಗೆ ದೇವಮ್ಮ ಅವರು ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ನದಿ ದಡದಲ್ಲಿ ಪತ್ತೆಯಾದ ಅವರ ಶವವನ್ನು ಸ್ಥಳೀಯರು ಮೇಲಕ್ಕೆತ್ತಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜು.19): ಹಲವು ದಿನಗಳಿಂದ ಕ್ಷೀಣಿಸಿದ್ದ ಮುಂಗಾರು ಚುರುಕುಗೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲ್ಲೂಕುಗಳಲ್ಲಿ ಅಬ್ಬರಿಸಲಾರಂಭಿಸಿದೆ. ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಧಾರಾಕಾರ ಮಳೆಯಿಂದಾಗಿ ವೃದ್ಧೆಯೊಬ್ಬರು ಸಾವಿಗೀಡಾಗಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದ ದೇವಮ್ಮ(61) ಹೇಮಾವತಿ ನದಿ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿಯಿಂದ ಮೂಡಿಗೆರೆ ತಾಲ್ಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ಹೇಮಾವತಿ ನದಿ ನೀರಿನ ಒಳ ಹರಿವು ಹೆಚ್ಚಾಗಿದೆ. ಇಂದು ಬೆಳಗ್ಗೆ ದೇವಮ್ಮ ಅವರು ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ನದಿ ದಡದಲ್ಲಿ ಪತ್ತೆಯಾದ ಅವರ ಶವವನ್ನು ಸ್ಥಳೀಯರು ಮೇಲಕ್ಕೆತ್ತಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಮೂಡಿಗೆರೆ ತಹಶೀಲ್ದಾರ್ ವೈ. ತಿಪ್ಪೇಸ್ವಾಮಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದರು.
Ginger Price Hike: ಶುಂಠಿ ಬೆಳೆದ ರೈತ ರಾತ್ರೋ ರಾತ್ರಿ ಕುಬೇರ!
ಧಾರಾಕಾರ ಮಳೆ:
ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದಲ್ಲಿ ಕಳೆದ 24 ಗಂಟೆಗಳಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು, ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿವೆ.ಕಳಸ ಹಾಗೂ ಶೃಂಗೇರಿ, ಕೊಪ್ಪ ತಾಲೂಕಿನಲ್ಲಿ ಭಾರೀ ಮಳೆ ಬೀಳುತ್ತಿರುವುದರಿಂದ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಶೃಂಗೇರಿಯ ಶಾರದಾಂಬೆ ದೇಗುಲದ ಕಪ್ಪೇ ಶಂಕರ ದೇವಾಲಯ ಮುಳುಗಡೆಯಾಗಿದೆ. ಮುಂಗಾರು ಆರಂಭಗೊಂಡ ನಂತರ ಎರಡನೇ ಬಾರಿಗೆ ಈ ದೇವಾಲಯ ತುಂಗಾ ನದಿಯಲ್ಲಿ ಮುಳುಗಡೆಯಾಗಿದೆ.ನೆಮ್ಮಾರು, ಕೆರಕಟ್ಟೆ, ಶೃಂಗೇರಿ ಸುರಿದಂತೆ ತುಂಗಾ ನದಿಯ ಆಸುಪಾಸಿನಲ್ಲಿರುವ ತಗ್ಗಿನ ಪ್ರದೇಶಗಳು ಮುಳುಗಡೆಯಾಗಿವೆ. ಕೊಪ್ಪ ಪಟ್ಟಣ ಸೇರಿದಂತೆ ಹರಿಹರಪುರ, ಜಯಪುರ, ಬಸ್ರಿಕಟ್ಟೆ, ಕಮ್ಮರಡಿ ಭಾಗದಲ್ಲಿ ಧಾರಾಕಾರವಾಗಿ ಮಳೆ ಬೀಳುತ್ತಿದೆ. ಮಳೆ, ಗಾಳಿ ಮುಂದುವರೆದಿದ್ದರಿಂದ ಮುಂದಿನ 24 ಗಂಟೆಗಳಲ್ಲಿ ಮತ್ತೆ ತುಂಗಾ ನದಿಯ ನೀರಿನಲ್ಲಿ ಏರಿಕೆ ಕಂಡು ಬರಲಿದೆ.
ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ :
ಮೂಡಿಗೆರೆ ಪಟ್ಟಣ ಸೇರಿದಂತೆ ಬಣಕಲ್, ಕೊಟ್ಟಿಗೆಹಾರ, ದಾರದಹಳ್ಳಿ, ಹೊರಟ್ಟಿ, ಜಾವಳಿ, ಬಾಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹೊರನಾಡು- ಕೊಟ್ಟಿಗೆಹಾರ ಮಾರ್ಗದಲ್ಲಿರುವ ಬಾಳೂರು ಎಸ್ಟೇಟ್ ಬಳಿ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಸ್ಥಳೀಯ ಧರ್ಮಸ್ಥಳ ವಿಪತ್ತು ನಿರ್ವಹಣ ತಂಡ ಹಾಗೂ ಸ್ಥಳೀಯರು ಮರವನ್ನು ತೆರವುಗೊಳಿಸಿದ ನಂತರ ವಾಹನಗಳ ಸಂಚಾರ ಮುಂದುವರೆಯಿತು.ಹೇಮಾವತಿ ನದಿ ಹುಟ್ಟಿ ಹರಿಯುವ ಪ್ರದೇಶದಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ನದಿಯ ನೀರಿನ ಮಟ್ಟ ಅಪಾಯ ಮಟ್ಟಕ್ಕೆ ತಲುಪಿದೆ. ತಗ್ಗಿನ ಪ್ರದೇಶಗಳು ಜಲಾವ್ರತವಾಗಿವೆ. ಮುಂದಿನ ದಿನಗಳಲ್ಲಿ ಹೇಮಾವತಿ ಜಲಾಶಯದ ನೀರಿನ ಮಟ್ಟದಲ್ಲೂ ಏರಿಕೆಯಾಗಲಿದೆ.ಕಳಸ, ಎನ್.ಆರ್.ಪುರ ತಾಲೂಕುಗಳಲ್ಲಿ ಧಾರಾಕಾರವಾಗಿ ಮಳೆ ಬೀಳುತ್ತಿರುವುದರಿಂದ ಭದ್ರಾ ನದಿಯ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ನದಿ ಆಸುಪಾಸಿನ ಗದ್ದೆಗಳು, ತೋಟಗಳು ಜಲಾವ್ರತವಾಗಿವೆ. ಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಮಲೆನಾಡಿನಲ್ಲಿ ಹುಟ್ಟಿ ಹರಿಯುವ ತುಂಗಾ, ಭದ್ರಾ ಹಾಗೂ ಹೇಮಾವತಿ, ನೇತ್ರಾವತಿ ನದಿಗಳು, ಹಳ್ಳಗಳು ಮೈದುಂಬಿ ಹರಿಯುತ್ತಿವೆ.
ಮಳೆ ಮೋಡಗಳು ಕಟ್ಟೋದು ನೋಡ್ಬೇಕಾ ಬಲ್ಲಾಳರಾಯನ ದುರ್ಗಕ್ಕೆ ಬನ್ನಿ: ಟ್ರಕ್ಕಿಂಗ್‌ಗೆ ಬೆಸ್ಟ್ ಪ್ಲೇಸ್
ತಡೆಗೋಡೆ ಕುಸಿತ :
ಕಳಸ ತಾಲ್ಲೂಕಿನ ಓಣಿಗಂಡಿ ಗ್ರಾಮದ ಡೋಂಗ್ರೆ ಎಂಬುವವರ ಮನೆಯ ಪಕ್ಕದ ತಡೆಗೋಡೆ ಭಾರೀ ಮಳೆಯಿಂದ ಕುಸಿಯುತಿದ್ದು, ಮನೆಗೆ ಹಾನಿ ಉಂಟಾಗುವ ಭೀತಿ ಎದುರಾಗಿದೆ. ಮನೆ ಪಕ್ಕದಲ್ಲಿ ತಡೆಗೋಡೆ ನಿಧಾನವಾಗಿ ಬಿರುಕು ಕಾಣಿಸಿಕೊಳ್ಳುತ್ತಿದೆ.ಸ್ಥಳಕ್ಕೆ ಕಳಸ ಗ್ರಾಮ ಪಂಚಾಯ್ತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಣ್ಣು ಜರಿಯುತ್ತಿರುವ ಜಾಗಕ್ಕೆ ಟಾರ್ಪಲ್ ಮುಚ್ಚುವ ಕೆಲಸಕ್ಕೆ ಗ್ರಾ.ಪಂ. ಮುಂದಾಗಿದೆ.ನಿರಂತರ ಮಳೆಯಿಂದಾಗಿ ಕಳಸ-ಕಳಕೋಡು ರಸ್ತೆತುಂಬ ಮಣ್ಣು ತುಂಬಿಕೊಂಡ ಪರಿಣಾಮ ಕೆಸರುಮಯವಾಗಿದೆ. ಪರಿಣಾಮ ಶಾಲಾ ಮಕ್ಕಳು, ಸಾರ್ವಜನಿಕರು ಓಡಾಡಲಾಗದೆ ತೀವ್ರ ತೊಂದರೆ ಅನುಭವಿಸಿದರು. ರಸ್ತೆ ಕಾಮಗಾರಿ ನಡೆಸಿ ಮಣ್ಣನ್ನು ಹಾಗೆ ಬಿಟ್ಟಿದ್ದು ಇದಕ್ಕೆ ಕಾರಣವಾಗಿತ್ತು. ಸ್ಥಳೀಯ ಗ್ರಾಮಸ್ಥರೇ ಸೇರಿ ಮಣ್ಣು ತೆರವು ಮಾಡಿ ಸಂಚಾರ ಸುಗಮಗೊಳಿಸಿದ್ದಾರೆ.
ರೈತಾಪಿ ವರ್ಗದಲ್ಲಿ ಹರ್ಷ :
ಚಿಕ್ಕಮಗಳೂರು ತಾಲ್ಲೂಕಿನ ಗಿರಿ ಭಾಗದಲ್ಲೂ ಬುಧವಾರ ಬೆಳಗಿನಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ರಾಜ್ಯ ಹೊರ ರಾಜ್ಯಳಿಂದ ಇಂದೂ ಸಹ ನೂರಾರು ಪ್ರವಾಸಿಗರು ಆಗಮಿಸಿ ಮಳೆಯಲ್ಲಿ ಮಿಂದು ಮಸ್ತಿ ಮಾಡಿದ್ದಾರೆ.ತರೀಕೆರೆ, ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಲ್ಲೂ ಸಾಧಾರಣ ಮಳೆ ಬಂದಿದ್ದರಿಂದ ತರಕಾರಿ ಬೆಳೆಗಾರರಿಗೆ ಮಾತ್ರವಲ್ಲ, ರಾಗಿ, ಜೋಳ ಬಿತ್ತನೆಗೆ ಅನುಕೂಲವಾಗಿದೆ. ಜೂನ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಿಡುವು ಕೊಟ್ಟಿದ್ದ ಮಳೆ, ಜುಲೈ ತಿಂಗಳಲ್ಲಿ ಆಗಾಗ ಬರುತ್ತಿರುವುದರಿಂದ ರೈತಾಪಿ ವರ್ಗ ಹರ್ಷಗೊಂಡಿದೆ.