ಮಹಾಬಲ ಸೀತಾಳಭಾವಿ

ಕಲಬುರಗಿ(ಫೆ.07): ಟ್ರಾಫಿಕ್‌ ಜಾಮ್‌ ಅಂದರೆ ಸಾಮಾನ್ಯವಾಗಿ ಎಲ್ಲರೂ ಬೇಸರಿಸಿಕೊಳ್ಳುತ್ತಾರೆ. ಆದರೆ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಕಲಬುರಗಿಯಲ್ಲಿ ಉಂಟಾದ ಟ್ರಾಫಿಕ್‌ ಜಾಮ್‌ ಸಮ್ಮೇಳನದ ಆಯೋಜಕರಲ್ಲಿ ಸಂತಸ ಮೂಡಿಸಿತ್ತು. ಇದು ವಾಹನಗಳಿಂದ ಮಾತ್ರ ಉಂಟಾದ ಜಾಮ್‌ ಅಲ್ಲ. ನಾಡಿನ ಮೂಲೆ ಮೂಲೆಯಿಂದ ಗುಲ್ಬರ್ಗಾ ವಿಶ್ವವಿದ್ಯಾಲಯದ ಬೃಹತ್‌ ಸಭಾಂಗಣಕ್ಕೆ ಕನ್ನಡದ ಮೇಲಿನ ಪ್ರೀತಿಯಿಂದ ಆಗಮಿಸಿದ್ದ ಜನಸಾಗರದಿಂದ ಉಂಟಾದ ಜಾಮ್‌.

ಕಲಬುರಗಿ ಸಾಹಿತ್ಯ ಸಮ್ಮೇಳನದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಲಬುರಗಿಯಲ್ಲಿ ಉರ್ದು, ಹಿಂದಿ ಹಾಗೂ ತೆಲುಗಿನ ಪ್ರಭಾವ ಜಾಸ್ತಿಯಿದೆ. ಮೇಲಾಗಿ ಇದು ಬಿಸಿಲನಾಡು. ಹೀಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು ಎಷ್ಟು ಕನ್ನಡಿಗರು ಬರುತ್ತಾರೆ ಎಂಬ ಪ್ರಶ್ನೆ ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಆದರೆ ಎಲ್ಲ ನಿರೀಕ್ಷೆಯನ್ನು ಹುಸಿಗೊಳಿಸಿ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಬರೋಬ್ಬರಿ ಮೂರು ಲಕ್ಷ ಜನರು ಸಾಹಿತ್ಯ ಸಮ್ಮೇಳನಕ್ಕೆ ಧಾವಿಸಿದರು. ಒಟ್ಟಾರೆ ಮೂರು ದಿನದಲ್ಲಿ ಐದು ಲಕ್ಷ ಜನರ ನಿರೀಕ್ಷೆಯಲ್ಲಿದ್ದ ಜಿಲ್ಲಾಧಿಕಾರಿ ಶರತ್‌ ಅವರು ಎರಡನೇ ದಿನದ ಜನಸಾಗರ ನೋಡಿ ಅಕ್ಷರಶಃ ಬೆರಗಿನಿಂದ ಓಡಾಡುತ್ತಿದ್ದರು. ಕನ್ನಡದ ಮಟ್ಟಿಗೆ ಇದೊಂದು ಒಳ್ಳೆಯ ಟ್ರಾಫಿಕ್‌ ಜಾಮ್‌.

ಸಮ್ಮೇಳನದ ಮುಖ್ಯ ವೇದಿಕೆಯ ಎದುರು ಹಾಗೂ ಅಕ್ಕಪಕ್ಕ ಕಾಲಿಡಲೂ ಜಾಗವಿಲ್ಲದಷ್ಟು ಜನಸಂಚಾರ ಬೆಳಗಿನಿಂದ ಸಂಜೆಯವರೆಗೂ ಇತ್ತು. ಪುಸ್ತಕ ಮಳಿಗೆಗಳ ಒಳಗೆ ನಿಂತುಕೊಂಡರೆ ಜನರೇ ತಳ್ಳಿಕೊಂಡು ಮುಂದೆ ಕರೆದೊಯ್ಯುತ್ತಿದ್ದರು. ಅದರ ಮಧ್ಯೆ ನೆಚ್ಚಿನ ಲೇಖಕರ ಜೊತೆ ಸೆಲ್ಫಿ ಕ್ಲಿಕ್ಕಿಸುವವರ ಬಡಿವಾರ ಬೇರೆ! ಪುಸ್ತಕ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಪುಸ್ತಕ ಮಳಿಗೆಗಳ ವ್ಯವಸ್ಥೆ ಅಚ್ಚುಕಟ್ಟಾಗಿದ್ದುದರಿಂದ ಪ್ರಕಾಶಕರು ಹಾಗೂ ಪುಸ್ತಕ ವ್ಯಾಪಾರಿಗಳ ಮುಖದಲ್ಲಿ ಖುಷಿಯಿತ್ತು. ಪ್ರತಿ ವರ್ಷ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ವ್ಯಾಪಾರಿಗಳು ವ್ಯವಸ್ಥೆ ಸರಿಯಿಲ್ಲ ಎಂದು ದೂರುವುದು ಸರ್ವೇಸಾಮಾನ್ಯವಾಗಿದ್ದ ಸಂದರ್ಭದಲ್ಲಿ ಈ ಬಾರಿ ಧನಾತ್ಮಕವಾಗಿ ಈ ಸಂಪ್ರದಾಯವನ್ನು ಮುರಿದ ಕೀರ್ತಿ ಆಯೋಜಕರಿಗೆ ಸಲ್ಲುತ್ತದೆ.

ರವಿ ಹೆಗಡೆಗೆ ಸನ್ಮಾನ, ಹಾವೇರಿಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ

ನಿರೀಕ್ಷೆ ಮೀರಿ ಜನರು ಪ್ರವಾಹದೋಪಾದಿಯಲ್ಲಿ ಹರಿದುಬಂದರೂ ಊಟೋಪಚಾರದ ವ್ಯವಸ್ಥೆಯಲ್ಲಿ ತೀರಾ ಸಮಸ್ಯೆಗಳೇನೂ ಆಗಲಿಲ್ಲ.

ಸಾಹಿತ್ಯ ಸಮ್ಮೇಳನವೆಂಬುದು ಕೇವಲ ಸಾಹಿತ್ಯಕ್ಕೆ ಸಂಬಂಧಪಟ್ಟಿದ್ದಲ್ಲ ಎಂಬಂತೆ ನುಡಿ ಜಾತ್ರೆಯು ತನ್ನ ಹರಹನ್ನು ವಿಸ್ತರಿಸಿಕೊಂಡು ಅನೇಕ ವರ್ಷಗಳೇ ಆಗಿವೆ. ಹೀಗಾಗಿ ರಾಜಕೀಯ, ಮಹಿಳೆಯರ ಸಮಸ್ಯೆಗಳು, ಎಡ-ಬಲ ಸಿದ್ಧಾಂತಗಳು, ಕರ್ನಾಟಕದ ಭವಿಷ್ಯ ಹೀಗೆ ನಾನಾ ವಿಷಯಗಳ ಬಗ್ಗೆ ಇಲ್ಲಿನ ವಿಚಾರಗೋಷ್ಠಿಗಳಲ್ಲಿ ಗಹನ ಚರ್ಚೆಗಳು ನಡೆಯುತ್ತವೆ. ಸಾಹಿತ್ಯದ ಬಗ್ಗೆ ಕಡಿಮೆ ಚರ್ಚೆಯಾಗುತ್ತದೆ. ಈ ಬಾರಿ 2ನೇ ದಿನ ಕೃಷಿಕರ ಸಮಸ್ಯೆಗೆ ಸಂಬಂಧಪಟ್ಟಂತೆ ಕೃಷಿ ಮತ್ತು ನೀರಾವರಿ ವಿಷಯದ ವಿಚಾರಗೋಷ್ಠಿಯಲ್ಲಿ ದೊಡ್ಡ ಗದ್ದಲವೇ ನಡೆಯಿತು. ಕಲಬುರಗಿಯು ತೊಗರಿ ಕಣಜವಾಗಿರುವುದರಿಂದ ಇಲ್ಲಿನ ಸಮ್ಮೇಳನದಲ್ಲಿ ತೊಗರಿ ಬೆಳೆಗಾರರ ಕಷ್ಟದ ಬಗ್ಗೆ ಚರ್ಚೆಯಾಗಬೇಕು ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಆಗ್ರಹಿಸಿ ವಿಚಾರಗೋಷ್ಠಿಗೆ ಅಡ್ಡಿಪಡಿಸಿದರು. ಹೀಗಾಗಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಸಮ್ಮೇಳನದ ಸಭಾಂಗಣದೊಳಗೆ ನುಗ್ಗಿ ಅವರನ್ನು ಬಂಧಿಸಿದರು. ವಿಚಾರಗೋಷ್ಠಿಗಳಲ್ಲಿ ಗದ್ದಲವಾದಾಗ ಪೊಲೀಸರು ಮಧ್ಯಪ್ರವೇಶ ಮಾಡುವುದು ಪ್ರತಿ ವರ್ಷವೂ ಸಾಹಿತ್ಯ ಸಮ್ಮೇಳನದ ಕನಿಷ್ಠ ಒಂದು ಗೋಷ್ಠಿಯಲ್ಲಾದರೂ ನಡೆಯುತ್ತದೆ. ಆದರೆ ಬಂಧನ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.

ನುಡಿ ಜಾತ್ರೆಯಲ್ಲಿ ಸಂಘ ಪರಿವಾರಕ್ಕೆ ನೀಲಾ ಚಾಟಿ: ಸರ್ಕಾರದ ಪರ ಗುರಾಣಿ

ಸಮಾನಾಂತರ ವೇದಿಕೆಯನ್ನು ಪ್ರಧಾನ ವೇದಿಕೆಯಿಂದ ಬಹಳ ದೂರದಲ್ಲಿ ನಿರ್ಮಿಸಿದರೆ ಏನು ಸಮಸ್ಯೆಯಾಗುತ್ತದೆ ಎಂಬುದು ಕಲಬುರಗಿ ಸಮ್ಮೇಳನದಲ್ಲಿ ಎಲ್ಲರ ಅನುಭವಕ್ಕೂ ಬಂದಿತು. ಮುಖ್ಯವೇದಿಕೆಯ ಅಕ್ಕಪಕ್ಕದಲ್ಲಿ ಕಿಕ್ಕಿರಿದ ಜನಸ್ತೋಮವಿದ್ದರೆ, ಮುಖ್ಯ ವೇದಿಕೆಯಿಂದ ಅನಾಮತ್ತು ಒಂದೊಂದು ಕಿ.ಮೀ. ದೂರದಲ್ಲಿರುವ ಸಮಾನಾಂತರ ವೇದಿಕೆಗಳಲ್ಲಿ ನಡೆಯುವ ವಿಚಾರಗೋಷ್ಠಿಗಳತ್ತ ಜನರು ಹೆಚ್ಚಾಗಿ ಸುಳಿಯುತ್ತಿರಲಿಲ್ಲ. ಅನಿವಾರ್ಯವಾದ್ದರಿಂದ ಪತ್ರಕರ್ತರು ನಡೆದು ನಡೆದು ಸುಸ್ತಾದರು.

ಇಷ್ಟು ಜನಸಾಗರ ಕಂಡಿರಲಿಲ್ಲ

ಇಷ್ಟು ಟ್ರಾಫಿಕ್‌ ಜಾಮ್‌ ಹಾಗೂ ಜನಸಾಗರವನ್ನು ಕಲಬುರಗಿ ಯಾವತ್ತೂ ಕಂಡಿರಲಿಲ್ಲ. ನಮ್ಮ ನಿರೀಕ್ಷೆ ಮೀರಿ ಜನರು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದಾರೆ. ವ್ಯವಸ್ಥೆಯನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಬೇಕಿತ್ತು ಅನಿಸುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್‌ ಅವರು ತಿಳಿಸಿದ್ದಾರೆ.