Asianet Suvarna News Asianet Suvarna News

ನುಡಿ ಜಾತ್ರೆಯಲ್ಲಿ ಸಂಘ ಪರಿವಾರಕ್ಕೆ ನೀಲಾ ಚಾಟಿ: ಸರ್ಕಾರದ ಪರ ಗುರಾಣಿ

ಹೆಸರಿನಂತೆ ಜನರ ಬದುಕೂ ಬದಲಾಯಿಸಿ| ಸಮ್ಮೇಳನದ ಗೋಷ್ಠಿಯಲ್ಲಿ ಹಿಂದುಳಿದ ನೆಲದ ಸಮಸ್ಯೆ, ಸವಾಲುಗಳ ಬಗ್ಗೆ ವಿಸ್ತೃತ ಚರ್ಚೆ| ಹಿಂದುಳಿದವರೆಂಬ ‘ಮಾನಸಿಕ ದಾರಿದ್ರ್ಯ’ದಿಂದ ನಾವೆಲ್ಲ ಹೊರಬರೋದು ಯಾವಾಗ್ರಿ? ಕಲ್ಯಾಣ ಕರ್ನಾಟಕದ ನಿರುದ್ಯೋಗ ಪೀಡಿತ ಬದುಕಿಗೂ ಮುಲಾಮು ಅರಿಯಬೇಕಿತ್ತು: ಕೆ. ನೀಲಾ| 

Fighter K Neela Angry on State Government During Kannada Sahitya Sammelana
Author
Bengaluru, First Published Feb 6, 2020, 12:45 PM IST

ಶೇಷಮೂರ್ತಿ ಅವಧಾನಿ 

ಕಲಬುರಗಿ(ಫೆ.06):  ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನದ ‘ಕಲ್ಯಾಣ ಕರ್ನಾಟಕ: ಅಂದು- ಇಂದು- ಮುಂದು’ ಮೊದಲ ದಿನದ ಮೊದಲ ಗೋಷ್ಠಿ ವಿಷಯ ಪರಿಣಿತರ ನಡುವಿನ ಮಾತಿನ ಮಲ್ಲ ಯುದ್ಧಕ್ಕೆ ವೇದಿಕೆಯಾಯ್ತು.
ಹಿಂದಿದ್ದ ‘ಹೈದ್ರಾಬಾದ್ ಕರ್ನಾಟಕ’ ಹೆಸರಿನ ’ಹೈದ್ರಾಬಾದ್’ ತೆಗೆದು ಆ ಜಾಗದಲ್ಲಿ ‘ಕಲ್ಯಾಣ’ ಸೇರಿಸಿ ಕಲ್ಯಾಣ ಕರ್ನಾಟಕವೆಂದರೆ ಈ ಹಿಂದುಳಿದ ನೆಲ ಉದ್ಧಾರವಾದೀತೆ? ಎಂದು ಸರ್ಕಾರಕ್ಕೆ ನೇರವಾಗಿ ಮಾತಿನಲ್ಲೇ ವಿಷಯ ಮಂಡಕರೊಬ್ಬರು ತಿವಿದಾಗ, ಅವರ ಮೊನಚು ಮಾತಿನ ಟೀಕಿಗೆ ಗೋಷ್ಠಿಯ ಅಧ್ಯಕ್ಷತೆ ವಹಿಸಿದವರೇ ಸರ್ಕಾರದ ಪರ ‘ಗುರಾಣಿ’ ಹಿಡಿದ ಪ್ರಸಂಗ ನಡೆಯಿತು. 

ಇವೆಲ್ಲವುದಕ್ಕೂ ಕಳಶವಿಟ್ಟಂತೆ ಪ್ರಧಾನ ವೇದಿಕೆಯಲ್ಲೇ ಕಸಾಪ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ್ ಅವರು ಶೃಂಗೇರಿ ಸಮ್ಮೇಳನದ ವಿಚಾರದಲ್ಲಿ ‘ಆಳುವವರ ಪರ’ವಾಗಿ ನಿಂತರು ಎಂದು ಆರೋಪಿ ಸುತ್ತ ಅವರ ಧೋರಣೆ ಖಂಡಿಸಲಾಯ್ತಲ್ಲದೆ ರಾಜೀನಾಮೆಗೂ ಆಗ್ರಹ ಕೇಳಿಬಂತು. 

ಕಲಬುರಗಿ ಸಾಹಿತ್ಯ ಸಮ್ಮೇಳನದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಾವು ಹಿಂದುಳಿದವರು ಎಂದು ನಿತ್ಯ ಅಳುತ್ತ ಕುಳಿತರೆ ಕೇಳೋರ್ಯಾರಿ ಕಾಯಕ ಸಂಸ್ಕೃತಿ ನಾಡಿಗೇ ನೀಡಿದ ನೆಲ ನಮ್ಮದು, ಹಿಂದುಳಿದವರೆಂಬ ಮಾನಸಿಕ ದಾರಿದ್ರ್ಯದಿಂದ ಹೊರಬರೋಣ ಎಂಬ ಕರೆಯೂ ಈ ಗೋಷ್ಠಿಯಲ್ಲಿ ಮಾರ್ದನಿಸಿತು. 

ಹೆಸರಿನಂತೆ ಜನರ ಬದುಕೂ ಬದಲಾಯಿಸ್ಲಿ ನೋಡೋಣ?:

ಗೋಷ್ಠಿಯಲ್ಲಿ ಸಾಮಾಜಿಕ, ಆರ್ಥಿಕ ವಿಚಾರಗಳ ಬಗ್ಗೆ ವಿಷಯ ಮಂಡಿಸಿದ ಹೋರಾಟಗಾರ್ತಿ ಕೆ. ನೀಲಾ ಹೈದ್ರಾಬಾದ್ ಹೆಸರು ಕಿತ್ತೊಗೆದು ಕಲ್ಯಾಣ ಕರ್ನಾಟಕ ಮಾಡಿದಂತೆ ಈ ಭಾಗದ ಜನರ ಬಡತನ, ನಿರುದ್ಯೋಗ ಪೀಡಿತ ಬದುಕಿಗೂ ಮುಲಾಮು ಅರಿಯಬೇಕಿತ್ತು? ಯಾಕಾಗಲಿಲ್ಲ ಈ ಕೆಲಸ? ನಿಜಾಂ ಆಡಳಿತ ಸರ್ವರನ್ನು ಒಳಗೊಂಡು ಇತ್ತಾದರೂ ಆ ಆಡಳಿತದ ಕೊನೆಯ 9 ತಿಂಗಳವನ್ನೇ ವೈಭವೀಕರಿಸುತ್ತ ಮತೀಯ ವಿಚಾರಗಳ ಮಾತನ್ನಾಡುವವರು ಇಂತಹ ಸಂಗತಿ ಅರಿಯಬೇಕಿತ್ತು ಎಂದು ನೇರವಾಗಿ ಆಳುವವರನ್ನು, ಈಗಿರುವ ಬಿಜೆಪಿ ಸರ್ಕಾರದತ್ತ ವಾಗ್ಬಾಣ ಬಿಟ್ಟರು. 

ಸಾಹಿತ್ಯ ಸಮ್ಮೇಳನ: ಕನ್ನಡ ಭಾಷಾ ಮಾಧ್ಯಮಕ್ಕಾಗಿ ಮತ್ತೆ ಸುಪ್ರೀಂಗೆ ಮೊರೆ

ಇಂತಹ ಭಾವನಾತ್ಮಕ ವಿಚಾರ ಹರಿಬಿಡ್ತಾರ, ಜನ ತಮ್ಮ ಸಂಕಟ ಮರಿಯುವ್ಹಂಗ ಮಾಡ್ತಾರ, ಇದು ಆಳುವವರ ಷಡ್ಯಂತ್ರ, ಭಾಷಾವಾರು ಪ್ರಾಂತ ರಚನೆ ಕಾಲದಿಂದಲೂ ನಾವು ಅವಲೋಕನ ಮಾಡಿದಾಗ ಹಳೆ ಮೈಸೂರಿಗರು ನಮ್ಮನ್ನು ಏಕೀಕರಣ ಕರ್ನಾಟಕದಿಂದ ದೂರ ಇಡಲು ನೋಡಿದ್ರ ನಾವು ಕರ್ನಾಟಕದಲ್ಲೇ ಸೇರೋದು ಅಂತ ಹಠ ಹಿಡಿದಿದ್ವಿ, ಈಗ ನೋಡಿದ್ರ ನಮ್ಮ ಭಾಗದಿಂದಲೇ ಪ್ರತ್ಯೇಕತೆ ಕೂಗು ಎದ್ದಿದೆ. ಈ ಕೂಗಿಗೆ ನಾವು ಬೆಂಬಲ ನೀಡೋರಲ್ಲವಾದರೂ ಈ ಕೂಗಿನ ಹಿಂದಿರುವ ನೋವು, ಯಾತನೆ ಯಾರೂ ಗುರುತಿಸುತ್ತಿಲ್ಲ ಎಂದು ನೀಲಾ ವಿಷಾದಿಸಿದರು. 

ನಂಜುಂಡಪ್ಪ ವರದಿ ಶಿಫಾರಸು ಜಾರಿಗೊಂಡಿಲ್ಲ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಂದ ಬಹುಕೋಟಿ ಅನುದಾನ ಮಾನವಾಭಿವೃದ್ಧಿಗಿಂತ ಚರಂಡಿ, ರಸ್ತೆಯಲ್ಲೇ ಕಳೆದು ಹೋಗುತ್ತಿದೆ. ಸರ್ವಸ್ಪರ್ಶಿ ಯೋಜನೆಗಳಿಲ್ಲದೆ ಮಂಡಲಿ ಬಡವಾಗುತ್ತಿದೆ. 2 ವರ್ಷ ಈ ಭಾಗದವರ ಪುಸ್ತಕ ಖರೀದಿಸಿದ ಮಂಡಳಿ ಇದೀಗ ಸುಮ್ಮನಾಯ್ತು. ಎಲ್ಲವೂ ಇದೇ ರೀತಿ ಅರ್ಧಮರ್ಧ ಕೆಲ್ಸವೆಂದು ನೀಲಾ ಟೀಕೆಗಳ ಸುರಿಮಳೆಗರೆದರು. 

ಕರಾವಳಿ ಮಿಡಿನಾಗರ ಕಲ್ಯಾಣದಾಗ ಹೆಡಿ ಎತ್ತಲು ಬಿಡಬಾರ್ದು: 

ಮತೀಯವಾದ, ಕೋಮು ಭಾವನೆ ಕರಾವಳಿಯನ್ನು ಸತ್ಯಾನಾಶ ಮಾಡುತ್ತಿದೆ ಎಂದು ಕೋಮು ದ್ವೇಷವನ್ನು ‘ಮಿಡಿ ನಾಗರ’ಕ್ಕೆ ಹೋಲಿಸಿದ ನೀಲಾ, ಅದೇ ಮಿಡಿ ನಾಗರ ಕಲ್ಯಾಣ ಕರ್ನಾಟಕದಾಗ ಹೆಡಿ ಎತ್ಲಿಕ್ಕಿ ನೋಡ್ಲಿಕತ್ತದ, ನಾವು ಸಾಹಿತಿಗಳು ಈ ನಾಗರ ಹೆಡಿ ಎತ್ತದ್ಹಂಗ ನಮ್ಮ ಪೆನ್ನ ಎತ್ತಿ ಬರೀಬೇಕು. ಜನಜಾಗೃತಿ ಮಾಡಬೇಕು ಎಂದು ಹೇಳುತ್ತ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಸಂಘ ಪರಿವಾರದವರತ್ತ ಮಾತಿನ ಚಾಟಿ ಬೀಸಿದ್ದರು.

ಡಾ. ಮನು ಬಳಿಗಾರ್ ರಾಜೀನಾಮೆಗೆ ನೀಲಾ ಆಗ್ರಹ 

ಆಳುವವರು ಕಸಾಪಕ್ಕೆ ಅನುದಾನ ಕೊಡಬಹುದು, ಹಾಗಂತ ತಾವು ಹೇಳಿದಂತೆಯೇ ನಡೆಯಬೇಕು ಎಂಬ ಷರತ್ತು ಹಾಕೋ ಹಾಗಿಲ್ಲ. ಜನರ ದೇಣಿಗೆ ಹಣ ಸರ್ಕಾರ ನೀಡುತ್ತದೆಯೇ ಹೊರತು ಬೇರೇನೂ ಅಲ್ಲ, ಈಚೆಗೆ ಶೃಂಗೇರಿ ಸಮ್ಮೇಳನದ ಅಧ್ಯಕ್ಷರ ಬದಲಾವಣೆಗೆ ಸೂಚಿಸಿದ ಸರ್ಕಾರದ ಕ್ರಮ ಸರಿಯಲ್ಲ, ಇದು ಖಂಡಿಸುವೆ, ಈ ಸಂದರ್ಭದಲ್ಲಿ ಸರ್ಕಾರದ ಪರ ನಿಲ್ಲದೆ ಸಾಹಿತ್ಯಾಸಕ್ತರ ಪರ ನಿಲ್ಲಬೇಕಾದಂತಹ ಮನು ಬಳಿಗಾರ ಆ ಕೆಲಸ ಮಾಡಿಲ್ಲದ ಕಾರಣ ಅವರು ರಾಜೀನಾಮೆ ನೀಡಲಿ ಎಂದು ಹೋರಾಟಗಾರ್ತಿ ಕೆ. ನೀಲಾ ವೇದಿಕೆಯಲ್ಲೇ ಬಹಿರಂಗ ಆಗ್ರಹಿಸಿದರಲ್ಲದೆ ಬಾಂಬ್ ಹಾಕೋರಿಗೇ ಹಿಡಿಯಕ್ಕಾಗಿಲ್ಲ, ನುಡಿ ಜಾತ್ರೆಯ ಅಧ್ಯಕ್ಷರು ಇವರೇ ಆಗಲಿ ಅಂತಾರೆ ಎಂದು ಸರ್ಕಾರವನ್ನು ಟೀಕಿಸಿದ ಪ್ರಸಂಗ ನಡೆಯಿತು. 

ನುಡಿ ಜಾತ್ರೆ: ಪುಸ್ತಕ ಮಾರಾಟ ಸ್ವಲ್ಪ ಸಿಹಿ, ಸ್ವಲ್ಪ ಕಹಿ

ನಮ್ಮ ಆರ್ಥಿಕಾಭಿವೃದ್ಧಿ ಸೊರಗಲು ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣ, ಯಾವೊಬ್ಬ ರಾಜಕಾರಣಿ ಉದ್ಯೋಗ ಖಾತ್ರಿ ದುಡ್ಡು ನಮಗ್ಯಾಕೆ ಬಂದಿಲ್ಲ. ನಮ್ಮಲಿರುವ ಶೇ.90 ರಷ್ಚು ಕೂಲಿಗಳು ಕೆಲಸವಿಲ್ಲದೆ ಯಾಕೆ ಹಿಂಗ ಕುಂತಾರ? ಅಂತ ಕೇಳೋದಿಲ್ಲ. ಬದಲಾಗಿ ವೈಯಕ್ತಿಕ ವಿಚಾರ ಪ್ರಸ್ತಾಪಿಸಿ ಜನರನ್ನ ಮೂರ್ಖ ಮಾಡ್ತಾರ. ಇದೆಲ್ಲ ಹೆಚ್ಚುದಿನ ನಡೆಯೋಲ್ಲ, ಸಾಹಿತಿಗಳು ಇಂತಹ ಸಂಗತಿ ಗಮನಿಸಿ ಸಾಹಿತ್ಯ ರಚಿಸಿ ಜನರ ಆರ್ಥಿಕ, ಸಾಮಾಜಿಕ ಪ್ರಗತಿಗೆ ಏಣಿಯಾಗೋಣ ಎಂದು ಹೋರಾಟಗಾರ್ತಿ ಕೆ. ನೀಲಾ ಅವರು ಹೇಳಿದ್ದಾರೆ. 

ನಂಜುಂಡಪ್ಪ ವರದಿ ಶಿಫಾರಸಿನಂತೆ ಒಂದೂ ಸವಲತ್ತು ಈ ಭಾಗಕ್ಕೆ ಸರ್ಕಾರಗಳು ನೀಡಿಲ್ಲ, ಪ್ರತ್ಯೇಕ ಹಣಕಾಸು, ಕೃಷಿ ಅಭಿವೃದ್ಧಿ ಸಂಸ್ಥೆ ಸಿಕ್ಕಿಲ್ಲ, ನಮ್ಮ ಭಾಗದವರಿಗೆ ಎಲ್ಲ ಕಡೆ ಸಿಗಬೇಕಾದಂತಹ ಪಾಲು ಸಿಕ್ಕಿಲ್ಲ. ಬರುವ ದಿನಗಳಲ್ಲಿ ಪ್ರಾದೇಶಿಕ ಅಭಿವೃದ್ಧಿ ನೀತಿ ಸಿದ್ಧವಾಗಬೇಕು. ಕ.ಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಶುರುವಾಗಬೇಕು ಎಂದು ಹಿರಿಯ ಪತ್ರಕರ್ತ ಡಾ. ಶ್ರೀನಿವಾಸ ಸಿರನೂರಕರ್ ಅವರು ಹೇಳಿದ್ದಾರೆ. 

ಕಲ್ಯಾಣದ ಜನ ದಿನಬಳಕೆ ವಸ್ತುಗಳನ್ನು ತಾವೇ ಉತ್ಪಾದಿಸುವಂತಹ ಗಟ್ಟಿತನ ಪಡೆಯಬೇಕು. ಎಲ್ಲದಕ್ಕೂ ಸರ್ಕಾರವನ್ನು ದೂಷಿಸುತ್ತ ಕುಳಿತುಕೊಳ್ಳದೆ ಶರಣರ ಕಾಯಕ ಸಂಸ್ಕೃತಿ, ದಾಸರ ಮಾನವೀಯ ನೀತಿ, ಪ್ರೀತಿ ಒಳಗೊಂಡ ಶುದ್ಧ ಬದುಕು ನಮೆಗಲ್ಲರಿಗೂ ಪ್ರೇರಣಾದಾಯಕವಾಗಬೇಕು ಎಂದು ಸೇಡಂ ವಿಕಾಸ ಅಕಾಡೆಮಿ ರೂವಾರಿ ಬಸವರಾಜ ಪಾಟೀಲ್ ತಿಳಿಸಿದ್ದಾರೆ. 
 

Follow Us:
Download App:
  • android
  • ios