ಕೊಪ್ಪಳದ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, 6 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಪ್ಪಳ (ಜೂ.27) ಕುಟುಂಬ ಸಮೇತ ಮಂತ್ರಾಲಯಕ್ಕೆ ತೆರಳುತ್ತಿದ್ದ ಭಕ್ತರ ಒಮಿನಿ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ಲಾರಿ ನಡುವಿನ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕುಕನೂರು ತಾಲೂಕಿನ ಭಾನಾಪೂರದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಘಟನೆ ನಡೆದಿದೆ.ಒಮಿನಿಯಲ್ಲಿದ್ದ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಪ್ಪಳ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಕೆಂಚಮ್ಮ ಬಾಳೆಕಾಯಿ(35),ಅಮೃತಾ ಕೋಟ್ಯಾಳ್(25), ರಮೇಶ್ ಬಳ್ಳಾರಿ(45) ಮೃತರು ಎಂದು ಗುರುತಿಸಲಾಗಿದೆ. ಓಮಿನಿ ವಾಹನದ ಮೂಲಕ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಲೆ ಘಟನೆ ನಡೆದಿದೆ. ಓಮಿನಿ ನಿಧಾನವಾಗಿ ಸಾಗುತ್ತಿತ್ತು. ಆದರೆ ದಿಢೀರ್ ಆಗಿ ಡಿವೈಡ್ ದಾಟಿಕೊಂಡ ಬಂದ ಅಶೋಕ್ ಲೈಲ್ಯಾಂಡ್ ಲಾರಿ ನೇರವಾಗಿ ಓಮಿನಿ ವಾಹನಕ್ಕೆ ಡಿಕ್ಕಿಯಾಗಿದೆ. ಅತೀ ವೇಗದಲ್ಲಿದ್ದ ಲೇಲ್ಯಾಂಡ್ ಲಾರಿ ಹಾಗೂ ಕಾರು ನಡುವಿನ ಅಪಘಾತಕದಲ್ಲಿ ಓಮಿನಿ ವಾಹನ ಅಪ್ಪಚ್ಚಿಯಾಗಿದೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತುಮಕೂರಿನಲ್ಲಿ ಹೊಸ ಬೈಕ್ ಖರೀದಿ ಬೆನ್ನಲ್ಲೇ ಅಪಘಾತ

ತುಮಕೂರಿನಲ್ಲಿ ಹೊಸ ಬೈಕ್ ಖರೀದಿ ಬಳಿಕ ಮೊದಲ ರೈಡ್ ನಲ್ಲೇ ಅಪಘಾತಕ್ಕೀಡದ ಯುವಕ ಮೃತಪಟ್ಟ ಘಟನೆ ನಡೆದಿದೆ. 19 ವರ್ಷದ ನಂದೀಶ್ ಕುಮಾರ್ ಮೃತ ದುರ್ದೈವಿ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಮೂಲತಃ ಪಾವಗಡದ ದೊಡ್ಡಹಳ್ಳಿ ನಿವಾಸಿಯಾದ ನಂದೀಶ್, ಹೊಸ ಬೈಕ್ ಖರೀದಿಸಿದ್ದ. ಹೊಸ ಬೈಕ್ ಮೂಲಕ ಗೆಳೆಯನ ಜೊತೆ ಸ್ವಗ್ರಾಮಕ್ಕೆ ಬರುತಿದ್ದ ವೇಳೆ ವೈಎನ್ ಹೊಸಕೋಟೆ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡ ನಂದೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆತನ ಜೊತೆ ಹಿಂಬದಿಯಲ್ಲಿ ಕುಳಿತಿದ್ದ ಗೆಳೆಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬಳ್ಳಾರಿಯಲ್ಲಿ ರಸ್ತೆ ಬದಿಗೆ ಉರುಳಿದ ಬಸ್

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಸ್ ಉರುಳಿದ ಘಟನೆ ಬಳ್ಳಾರಿ ನಗರದ ಫಸ್ಟ್‌ ಗೇಟ್ ಎದುರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ ನಡೆದಿದೆ. ಬಸ್ ಚಲಿಸುತ್ತಿದ್ದ ವೇಳೆ ಹಠಾತ್ತನೆ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಅಪಘಾತದ ಸಮಯದಲ್ಲಿ ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಸಬಸ್ ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಅಪಘಾತ ಹಿನ್ನೆಲೆ ಈ ಮಾರ್ಗದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.