ಗದಗ(ಜು.23): ಸರ್ಕಾರ ಕೋವಿಡ್‌-19ಗೆ ವಿಶೇಷ ಮಾರ್ಗಸೂಚಿಯಲ್ಲಿ ಕೊರೋನಾ ಸೊಂಕಿನ ತಪಾಸಣೆಗೆ ಒಳಗಾದ ವ್ಯಕ್ತಿಗೆ 36 ಗಂಟೆಯಲ್ಲಿ ಅದರ ಫಲಿತಾಂಶ ನೀಡಬೇಕೆಂದು ಸೂಚಿಸಿದ್ದರೂ ಗದಗಿನಲ್ಲಿ ಮಾತ್ರ ಕನಿಷ್ಟ ಮೂರುದಿನ ಕಾಯಲೇಬೇಕಿದೆ!

ಗದಗ ಶಹರ ಪೊಲೀಸ್‌ ಠಾಣೆಯ ಪೇದೆಯೋರ್ವರ ಗಂಟಲು ದ್ರವ ಜು. 17 ರಂದು ಸಂಗ್ರಹಿಸಿದ್ದರೂ ಅವರ ಫಲಿತಾಂಶ ಬುಧವಾರ (22 ರಂದು) ನೀಡಿದ್ದು, ಇದು ಸರ್ಕಾರದ ಕೋವಿಡ್‌ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಓರ್ವ ವ್ಯಕ್ತಿಯನ್ನು ಕೋವಿಡ್‌ ಶಂಕಿತ ಎಂದು ಗುರುತಿಸಿ, ಅಥವಾ ಅವರೇ ನೇರವಾಗಿ ಬಂದು ತಪಾಸಣೆಗೆ ಒಳಗಾದರೆ ಅವರ ಫಲಿತಾಂಶವನ್ನು ಸಾಧ್ಯವಾದಷ್ಟು ಬೇಗನೇ ನೀಡಬೇಕು. ಆದರೆ, ಜಿಲ್ಲೆಯಲ್ಲಿ ಕನಿಷ್ಠ 3 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಸೋಂಕಿನ ಲಕ್ಷಣಗಳು ಇಲ್ಲದ ವ್ಯಕ್ತಿ (ಅಸಿಂಪ್ಟೆಮ್ಯಾಟಿಕ್‌) ಎಲ್ಲೆಂದರಲ್ಲಿ ಸಂಚರಿಸುತ್ತಿದ್ದು, ಇದು ಸೋಂಕು ವ್ಯಾಪಕವಾಗಿ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ. ವರದಿ ನೀಡುವಲ್ಲಿ ಮಾಡುತ್ತಿರುವ ನಿರ್ಲಕ್ಷದಿಂದಾಗಿ ಕೊರೋನಾ ಹೆಚ್ಚಳಕ್ಕೆ ಪರೋಕ್ಷವಾಗಿ ಜಿಲ್ಲಾಡಳಿತವೇ ಕಾರಣವಾಗುತ್ತಿದೆ.

ಲಕ್ಷ್ಮೇಶ್ವರ: ಮೃತಳಾಗಿ 5 ದಿನದ ಬಳಿಕ ಕೊರೋನಾ ಸೋಂಕು ದೃಢ, ಗ್ರಾಮಸ್ಥರಲ್ಲಿ ಆತಂಕ

ಕೋವಿಡ್‌ -19 ಜಗತ್ತಿನಾದ್ಯಂತ ಸೃಷ್ಟಿಸುವ ಭಯದಿಂದಾಗಿ ಸಹಜವಾಗಿ ಎಂತಹ ಗಟ್ಟಿಗುಂಡಿಗೆ ಇದ್ದ ವ್ಯಕ್ತಿಯೂ ಕೂಡಾ ಭಯ ಪಡುತ್ತಾನೆ. ಸ್ವಾ್ಯಬ್‌ (ಗಂಟಲುದ್ರವ) ಕೊಟ್ಟತಕ್ಷಣದಿಂದಲೇ ಆ ವ್ಯಕ್ತಿಯಲ್ಲಿ ಕೊಂಚ ಆತಂಕ ಪ್ರಾರಂಭವಾಗಿರುತ್ತದೆ. ಈ ಆತಂಕ ನಾಲ್ಕೈದು ದಿನಗಳ ಕಾಲ ಮುಂದುವರಿದಲ್ಲಿ ಸಹಜವಾಗಿ ಆ ವ್ಯಕ್ತಿಗೂ ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತದೆ. ಇನ್ನು ಅವರ ಕುಟುಂಬಸ್ಥರಲ್ಲಿಯೂ ದೊಡ್ಡ ಆತಂಕಕ್ಕೆ ಕಾರಣವಾಗುತ್ತಿದೆ.

ಕೋವಿಡ್‌-19 ಪರೀಕ್ಷೆಗೆ ಸ್ವ್ಯಾಬ್‌ ಕೊಟ್ಟವರೆಲ್ಲಾ ಸ್ವ್ಯಾಬ್‌ ಕೊಟ್ಟ ದಿನದಿಂದಲೇ ಅವರ ಫಲಿತಾಂಶ ಬರವರೆಗೂ ತಮ್ಮ ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್‌ ಆಗಬೇಕು. ಅವರು ಕಡ್ಡಾಯವಾಗಿ ಕ್ವಾರಂಟೈನ್‌ ಆಗಿರುವ ಬಗ್ಗೆ ಆರೋಗ್ಯ ಇಲಾಖೆ ಗಮನ ನೀಡಬೇಕು. ಅದರಲ್ಲಿಯೂ ಸೋಂಕಿನ ಯಾವುದೇ ಲಕ್ಷಣಗಳಿಲ್ಲದೇ ತಪಾಸಣೆಗೆ ಬರುವವರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ. ಜಿಲ್ಲೆಯ ಸವಡಿ ಗ್ರಾಮ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸೋಂಕು ಹರಡಲು ಗಂಟಲುದ್ರವ ನೀಡಿ ಹೊರಗಡೆ ಸಂಚರಿಸಿದವರಿಗೆ ಹಲವು ದಿನಗಳ ನಂತರ ಪಾಜಿಟಿವ್‌ ಆಗಿದ್ದರಿಂದಲೇ ಸೋಂಕು ಹೆಚ್ಚಳವಾಗುತ್ತಿದೆ.

ಕಳೆದ ನಾಲ್ಕು ದಿನಗಳ ಹಿಂದೆ ತಪಾಸಣೆ ಯಂತ್ರದಲ್ಲಿ ತಾಂತ್ರಿಕ ತೊಂದರೆ ಕಂಡು ಬಂದ ಹಿನ್ನೆಲೆಯಲ್ಲಿ ಅಲ್ಪ ವಿಳಂಬವಾಗಿದೆ. ಆದರೆ, ಈಗ ಯಾವುದೇ ರೀತಿಯ ಸಮಸ್ಯೆ ಇಲ್ಲ, ಅತ್ಯಂತ ಕಡಿಮೆ ಅವಧಿಯಲ್ಲಿ ಫಲಿತಾಂಶ ನೀಡಲಾಗುತ್ತಿದೆ. ಗಂಟಲು ದ್ರವ ನೀಡಿದವರು ತಪಾಸಣೆ ಪೂರ್ಣ ಮಾಹಿತಿ ಬರುವವರೆಗೂ ಮನೆಯಲ್ಲಿಯೇ ಇರಬೇಕು ಎಂದು ಗದಗ ಡಿಎಚ್‌ಒ ಡಾ. ಸತೀಶ ಬಸರೀಗಿಡದ ಅವರು ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಜಾರಿಯಿದ್ದ ನಿಷೇಧಾಜ್ಞೆ ಹಿಂಪಡೆದ ಜಿಲ್ಲಾಧಿಕಾರಿ

ಮಹಾಮಾರಿ ಕೊರೋನಾ ಸೋಂಕು ಉಲ್ಬಣಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜು. 27ರ ವರೆಗೆ 10 ದಿನಗಳ ಕಾಲ ಜಾರಿ ಮಾಡಲಾಗಿದ್ದ ಪ್ರತಿದಿನ ಮಧ್ಯಾಹ್ನ 2ರಿಂದ ಮರುದಿನ ಬೆಳಗ್ಗೆ 5ರ ವರೆಗಿನ ನಿಷೇಧಾಜ್ಞೆಯನ್ನು ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಬುಧವಾರ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಹಿಂಪಡೆದಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವಳಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳ ವ್ಯಾಪ್ತಿ ವೇಳೆ ಜನರು ಗುಂಪಾಗಿ ಸೇರುತ್ತಿದ್ದ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿಸಬಾರದು ಎಂಬ ಮುಂಜಾಗ್ರತಾ ಕ್ರಮವಾಗಿ ಈ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿತ್ತು. ರಾಜ್ಯ ಸರ್ಕಾರ ಲಾಕ್‌ಡೌನ್‌ ಇದಕ್ಕೆ ಪರಿಹಾರವಲ್ಲ. ಆರ್ಥಿಕ ವಹಿವಾಟು ಚೇತರಿಕೆ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳ ಲಾಕ್‌ಡೌನ್‌ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಅರ್ಧ ದಿನ ಲಾಕ್‌ಡೌನ್‌ ಆದೇಶವನ್ನು 5ನೇ ದಿನವೇ ಡಿಸಿ ಹಿಂಪಡೆದಿದ್ದಾರೆ.

ಸೀಲ್‌ಡೌನ್‌ ಪ್ರದೇಶದಲ್ಲಿ ನಿರ್ಬಂಧ:

ಕೊರೋನಾ ಸೋಂಕು ವ್ಯಾಪಿಸಿರುವ ಪ್ರದೇಶಗಳಲ್ಲಿ ಸೀಲ್‌ಡೌನ್‌ ಘೋಷಿಸಲ್ಪಟ್ಟಿರುವ ವಲಯಗಳಲ್ಲಿ ಮಾತ್ರ ನಿರ್ಬಂಧ ಮುಂದುವರೆಯಲಿದೆ. ಇನ್ನುಳಿದ ಪ್ರದೇಶಗಳಲ್ಲಿ ಜನಜೀವನ ಎಂದಿನಂತೆ ಸಾಮಾನ್ಯವಾಗಿರಲಿದ್ದು, ಸಾರಿಗೆ ಸಂಚಾರವೂ ಇರಲಿದೆ. ಅವಳಿ ನಗರದ ಹಾಗೂ ವಿವಿಧ ಪಟ್ಟಣಗಳಲ್ಲಿ ವಾಣಿಜ್ಯ ವ್ಯವಹಾರ ಚಟುವಟಿಕೆಗಳೂ ಸಹ ಯಥಾ ಪ್ರಕಾರ ನಡೆಯಲಿದ್ದು, ಸಾರ್ವಜನಿಕರು ಸರ್ಕಾರದ ಸೂಚನೆಯಂತೆ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರದ ಪಾಲನೆ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ತಿಳಿಸಲಾಗಿದೆ.

ಸಂಡೇ ಲಾಕ್‌ಡೌನ್‌ ಮುಂದುವರಿಕೆ:

ಜಿಲ್ಲೆಯಲ್ಲಿ ವಿಧಿಸಿದ್ದ ಹೊಸ ನಿಷೇಧಾಜ್ಞೆ ಜಾರಿಗಿಂತ ಮೊದಲೇ ರಾಜ್ಯ ಸರ್ಕಾರ ಆದೇಶಿಸಿದಂತೆ ಪ್ರತಿದಿನ ರಾತ್ರಿ 9 ರಿಂದ ಮರುದಿನ ಬೆಳಗ್ಗೆ 5ರ ವರೆಗೆ ಇದ್ದ ನಿಷೇದಾಜ್ಞೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಸಮಯದಲ್ಲಿ ಎಂದಿನಂತೆ ಲಾಕ್‌ಡೌನ್‌ ಇರಲಿದೆ. ಇದಲ್ಲದೇ ವಾರಾಂತ್ಯದ ಹಿನ್ನೆಲೆಯಲ್ಲಿ ಹೆಚ್ಚಾಗಿ ಜನ ಸಂಚರಿಸುವ ಭಾನುವಾರದಂದು ಸಹ ಸಂಪೂರ್ಣ ನಿಷೇಧಾಜ್ಞೆ ಯಥಾಪ್ರಕಾರ ಮುಂದುವರೆಯುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.