Asianet Suvarna News Asianet Suvarna News

ಲಕ್ಷ್ಮೇಶ್ವರ: ಮೃತಳಾಗಿ 5 ದಿನದ ಬಳಿಕ ಕೊರೋನಾ ಸೋಂಕು ದೃಢ, ಗ್ರಾಮಸ್ಥರಲ್ಲಿ ಆತಂಕ

ಆರೋಗ್ಯ ಇಲಾಖೆ ಮೃತರ ಶರೀರವನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ಮೊದಲು ಕೊರೋನಾ ಸೋಂಕಿನ ವರದಿ ನೀಡಬೇಕು| ಆರೋಗ್ಯ ಇಲಾಖೆ ಮಾಡಿದ ಯಡವಟ್ಟು| ಮಹಿಳೆಯ ನಿವಾಸದ ಸುತ್ತಮುತ್ತಲಿನ ಪ್ರದೇಶವನ್ನು ಸ್ಯಾನಿಟೈಸ್‌ ಮಾಡಿ ಸೀಲ್‌ಡೌನ್‌| 

Anxiety in Villagers for Coronavirus Positive Case in Lakshmeshwara in Gadag district
Author
Bengaluru, First Published Jul 23, 2020, 9:30 AM IST

ಲಕ್ಷ್ಮೇಶ್ವರ(ಜು.23): ಸಮೀಪದ ಯಳವತ್ತಿ ಗ್ರಾಮದ 64 ವರ್ಷದ ಮಹಿಳೆ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟಿದ್ದು ಆಕೆಯ ಅಂತ್ಯ ಸಂಸ್ಕಾರ ಮಾಡಿದ 5 ದಿನಗಳ ನಂತರ ಆರೋಗ್ಯ ಇಲಾಖೆಯು ಮಹಿಳೆಗೆ ಕೊರೋನಾ ಪಾಸಿಟಿವ್‌ ಇದೆ ಎಂದು ತಿಳಿಸಿದ್ದು, ಇದೀಗ ಅವಳ ಕುಟುಂಬ ಹಾಗೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಆತಂಕ ಶುರುವಾಗಿದೆ.

ಗ್ರಾಮಸ್ಥರು ಆರೋಗ್ಯ ಇಲಾಖೆಯ ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಅಂತ್ಯಕ್ರಿಯೆಗೂ ಮುನ್ನ ವರದಿ ನೀಡಬೇಕು, ಇಲ್ಲ ಕೋವಿಡ್‌-19 ಶಿಷ್ಟಾಚಾರ ಪ್ರಕಾರ ಅಂತ್ಯಕ್ರಿಯೆ ಕೈಗೊಂಡು ಇಂತಹ ಅಚಾತುರ್ಯ ತಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಗ್ರಾಮದ ಮಹಿಳೆ ಅನಾರೋಗ್ಯದಿಂದ ಗದಗ ಜಿಮ್ಸ್‌ಗೆ ದಾಖಲಾಗಿದ್ದರು. ಕಡಿಮೆ ರಕ್ತದೊತ್ತಡದಿಂದ ಅವರು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಹಿಳೆಯ ಗಂಟಲು ದ್ರವ ತೆಗೆದುಕೊಂಡು ಶವವನ್ನು ಮೃತರ ಸಂಬಂಧಿಕರಿಗೆ ಒಪ್ಪಿಸಿದ್ದರು. ನಂತರ ಮಹಿಳೆಯ ಪಾರ್ಥೀವ ಶರೀರವನ್ನು ಗ್ರಾಮಕ್ಕೆ ತಂದು ಸಂಬಂಧಿಕರು ಹಾಗೂ ಗ್ರಾಮದ ಕೆಲವರು ಸೇರಿಕೊಂಡು ಅಗ್ನಿಸ್ಪರ್ಷ ಮಾಡುವ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಆದರೆ, ಆರೋಗ್ಯ ಇಲಾಖೆ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರ ನಡೆದ 5 ದಿನಗಳ ನಂತರ ಅಂದರೆ ಮಂಗಳವಾರ ಸಂಜೆ ಮೃತ ಮಹಿಳೆಯ ಗಂಟಲು ದ್ರವ ಪರೀಕ್ಷೆಯ ವರದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸುವ ಮೂಲಕ ಯಡವಟ್ಟು ಮಾಡಿದ್ದು ಶವ ಸಂಸ್ಕಾರದಲ್ಲಿ ಭಾಗವಹಿಸಿದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.

ಕೊರೋನಾ ಕಾಟ: ಗ್ರಾಮೀಣ ಭಾಗದಲ್ಲೂ ಸೋಂಕಿನಾರ್ಭಟ, ಬೆಚ್ಚಿಬಿದ್ದ ಜನತೆ

ಸುದ್ದಿ ತಿಳಿಯುತ್ತಲೇ ತಹಸೀಲ್ದಾರ್‌ ಭ್ರಮರಾಂಬ ಗುಬ್ಬಿಶೆಟ್ಟರ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಮಹಿಳೆಯ ನಿವಾಸದ ಸುತ್ತಮುತ್ತಲಿನ ಪ್ರದೇಶವನ್ನು ಸ್ಯಾನಿಟೈಸ್‌ ಮಾಡಿಸುವ ಮೂಲಕ ಸೀಲ್‌ಡೌನ್‌ ಮಾಡಿದರು. ಘಟನೆಗೆ ಸಂಬಂಧಿಸಿದಂತೆ ಮಹಿಳೆಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಕುಟುಂಬದ 8 ಜನರನ್ನು ಗೊಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದ್ದು ಮಹಿಳೆ ಶವ ಸಂಸ್ಕಾರದಲ್ಲಿ ಭಾಗವಹಿಸಿದ್ದ ಸುಮಾರು 50 ಜನರಿಗೆ ಹೋಂ ಕ್ವಾರಂಟೈನ್‌ನಲ್ಲಿ ಇರಲು ಸೂಚಿಲಾಗಿದೆ ಎಂದು ತಿಳಿಸಿದರು.

ಆಕ್ರೋಶ:

ಆರೋಗ್ಯ ಇಲಾಖೆ ಮೃತರ ಶರೀರವನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ಮೊದಲು ಕೊರೋನಾ ಸೋಂಕಿನ ವರದಿ ನೀಡಬೇಕು. ಆದರೆ, ಯಳವತ್ತಿ ಪ್ರಕರಣದಲ್ಲಿ ಇಲಾಖೆ ಯಡವಟ್ಟು ಮಾಡಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ ಬೀರಣ್ಣವರ ಆಕ್ರೋಶ ಹೊರ ಹಾಕಿದರು.
 

Follow Us:
Download App:
  • android
  • ios