Asianet Suvarna News Asianet Suvarna News

Chikkamagaluru: ದತ್ತಜಯಂತಿ ಸಂಭ್ರಮ ಹಿನ್ನೆಲೆ, ಯಾತ್ರೆಯಲ್ಲಿ ಸಹಸ್ರಾರು ಮಂದಿ ಭಾಗಿ

ಕಾಫಿನಾಡಲ್ಲಿ ದತ್ತಜಯಂತಿ ಸಂಭ್ರಮ ಹಿನ್ನೆಲೆ.  ಅನಸೂಯ ಜಯಂತಿ ಹಾಗೂ ಸಂಕೀರ್ತನಾ ಯಾತ್ರೆಯಲ್ಲಿ ಸಹಸ್ರಾರು ಮಂದಿ ಭಾಗಿ. ಮೆರವಣಿಗೆ ಬಳಿಕ ದತ್ತಪೀಠದಲ್ಲಿ ಹೋಮ-ಹವನದಲ್ಲಿ ಮಹಿಳೆಯರು ಭಾಗಿ. ನಗರ ಹಾಗೂ ದತ್ತಪೀಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Thousands of people from Chikkamagaluru Celebrated Datta Jayanti gow
Author
First Published Dec 6, 2022, 7:35 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು(ಡಿ.6): ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರೋ ದತ್ತಪೀಠದ ವಿವಾದಿತ ಇನಾಂ ದತ್ತಾತ್ರೆಯ ಪೀಠದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರೋ ದತ್ತಜಯಂತಿಗಿಂದು ಸಂಭ್ರಮದ ಚಾಲನೆ ದೊರಕಿದೆ. ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ದತ್ತ ಜಯಂತಿ ಅಂಗವಾಗಿ ಇಂದು ಹಮ್ಮಿಕೊಳ್ಳಲಾದ ಅನಸೂಯ ಜಯಂತಿ ಹಾಗೂ ಸಂಕೀರ್ತನಾ ಯಾತ್ರೆಯಲ್ಲಿ ಸಹಸ್ರಾರು ಮಹಿಳೆಯರು ಪಾಲ್ಗೊಂಡರು. ಕೇಸರಿ ರುಮಾಲು, ನಾಸಿಕ್ ಪೇಟ ಧರಿಸಿ, ಭಗಾಧ್ವಜಗಳನ್ನು ಬೀಸುತ್ತಾ ಬೃಹತ್ ಮೆರವಣಿಗೆಯಲ್ಲಿ ಸಾಗಿದ ಮಹಿಳಾ ಭಕ್ತರು, ದಾರಿಯುದ್ಧಕ್ಕೂ ದತ್ತಾತ್ರೇಯರು, ದೇವರ ಸಂಕೀರ್ತನೆಗಳನ್ನು ಹಾಡಿದರು. ದತ್ತಪೀಠ ನಮ್ಮದು ಎನ್ನುವ ಘೋಷಣೆಗಳನ್ನು ಕೂಗಿದರು.ಬೆಳಗ್ಗೆ ಶ್ರೀ ಬೋಳರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಕೀರ್ತನಾ ಯಾತ್ರೆ ಆರಂಭಿಸಲಾಯಿತು. ಮಹಿಳೆಯನ್ನೇ ಒಳಗೊಂಡ ಚಂಡೆ ಮೇಳ, ಹೆಣ್ಣು ಮಕ್ಕಳು, ಚಿಣ್ಣರು ಕಂಸಾಳೆ ಬಾರಿಸುತ್ತಾ ಸಂಕೀರ್ತನೆಗೆ ತಕ್ಕಂತೆ ಹೆಜ್ಜೆ ಹಾಕಿದ್ದು ಆಕರ್ಷಕವಾಗಿತ್ತು.ಐಜಿ ರಸ್ತೆ, ಆರ್.ಜಿ.ರಸ್ತೆ ಮಾರ್ಗವಾಗಿ ಸಾಗಿದ ಯಾತ್ರೆ ಸರ್ಕಾರಿ ಪಾಲಿಟೆಕ್ನಿಕ್ ಬಳಿ ಅಂತಿಮಗೊಂಡಿತು.

ದತ್ತಪೀಠದಲ್ಲಿ ಹೋಮ-ಹವನದಲ್ಲಿ ಮಹಿಳೆಯರು ಭಾಗಿ: ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರವಾಗಿರೋ ಚಿಕ್ಕಮಗಳೂರಿನ ಬಾಬಾಬುಡನ್‍ಗಿರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ದತ್ತ ಜಯಂತಿ ಸಂಭ್ರಮ ಮನೆಮಾಡಲಿದೆ. ದತ್ತಜಯಂತಿ ಪ್ರಯುಕ್ತ ಮೊದಲ ದಿನವಾದ ಇಂದು ಅನುಸೂಯ ಜಯಂತಿಯನ್ನ ಎಂಟು ಸಾವಿರಕ್ಕೂ ಅಧಿಕ ಮಹಿಳೆಯರು ಸಂಭ್ರಮದಿಂದ ಆಚರಿಸಿದ್ರು. ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ನಗರದ ಐಜಿ ರಸ್ತೆಯ ಮೂಲಕ ಕಾಮಧೇನು ಗಣಪತಿ ದೇವಾಲಯದವರೆಗೂ ಸಂಕೀರ್ತನಾ ಯಾತ್ರೆ ಕೈಗೊಂಡ್ರು. ಮೆರವಣಿಗೆ ಬಳಿಕ ದತ್ತಪೀಠಕ್ಕೆ ತೆರಳಿದ ಮಹಿಳೆಯರು ಹಾಗೂ ಭಕ್ತರು ದತ್ತಪಾದುಕೆಯ ದರ್ಶನ ಪಡೆದು, ದತ್ತಪೀಠದ ಪೂರ್ವ ದಿಕ್ಕಿನಲ್ಲಿ ಹಾಕಲಾಗಿರೋ ಚಪ್ಪರದಲ್ಲಿ ಭಜನೆ, ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು.

ಹಿಂದೂ ಆರ್ಚಕರಿಂದ ಪೂಜೆ: ಇದೇ ಮೊದಲ ಬಾರಿಗೆ ಪೀಠದಲ್ಲಿ ಹಿಂದೂ ಅರ್ಚಕರಿಂದ ಪೂಜೆ, ತೀರ್ಥ ಪ್ರಸಾದ ವಿನಿಯೋಗ ನಡೆದ ಹಿನ್ನೆಲೆಯಲ್ಲಿ ಮಹಿಳೆಯರಲ್ಲಿ ಭಕ್ತಿ ಭಾವವೂ ಹೆಚ್ಚಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ ಗುಹಾಂತರ ದೇವಾಲಯದ ಎದುರು ಕೇಸರಿ ಕಮಾನುಗಳನ್ನು ನಿರ್ಮಿಸಿ ತಳಿರು, ತೋರಣಗಳಿಂದ ಸಿಂಗರಿಸಿದ್ದಲ್ಲದೆ. ಪೀಠದ ಆವರವನ್ನು ರಂಗೋಲಿಯಿಂದ ಸಿಂಗರಿಸಿದ್ದ ಹಿನ್ನೆಲೆಯಲ್ಲಿ ಪೀಠದ ಪರಿಸದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಸಂಸ್ಕೃತಿ ಕಳೆಕಟ್ಟಿದಂತಿತ್ತು. ದತ್ತಜಯಂತಿಗೆಂದೇ ತಾತ್ಕಾಲಿಕವಾಗಿ ನೇಮಕಗೊಂಡಿರುವ ಡಾ.ಸಂದೀಪ್ ಶರ್ಮ ಮತ್ತು ಶ್ರೀಧರ ಭಟ್ ಅವರಿಂದ ಗುಹೆಯ ಹೊರ ಆವರಣದಲ್ಲಿ ಹೋಮ, ಹವನಗಳು ನಡೆದದ್ದಲ್ಲದೆ, ಹಿಂದೂ ಅರ್ಚಕರಿಂದಲೇ ತೀರ್ಥ, ಪ್ರಸಾದ ವಿನಿಯೋಗವಾದ ಹಿನ್ನೆಲೆಯಲ್ಲಿ ಭಕ್ತಾದಿಗಳಲ್ಲಿ ಹೊಸ ಹುಮ್ಮಸ್ಸು ಕಂಡುಬಂತು.

ಶಾಸಕರೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ ಆದ ಸಿ.ಟಿ.ರವಿ ಅವರೊಂದಿಗೆ ಅವರೊಂದಿಗೆ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಬಜರಂಗದಳದ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಬಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್ ಹೆರೂರು, ಸಹ ಸಂಚಾಲಕ ಅಮಿತ್ ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು, ಬಿಜೆಪಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.

ಎಡಿಜಿಪಿ ಜಿಲ್ಲೆಗೆ ಭೇಟಿ:  ರಾಜ್ಯ ಕಾನೂನು ಸುವ್ಯಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಪೀಠಕ್ಕೆ ಭೇಟಿ ನೀಡಿ ಬಂದೋ ಬಸ್ತ್ ವ್ಯವಸ್ಥೆಗಳನ್ನು ಪರಿಶೀಲಿಸಿದರು.ಅಲ್ಲದೇ ಎರಡು ದಿನಗಳ ಕಾಲ ಜಿಲ್ಲೆಯಲ್ಲೇ ಮೊಕ್ಕಾಂ ಹೊಡಲಿದ್ದಾರೆ. 

Chikkamagaluru: ದತ್ತಜಯಂತಿ ವೇಳೆ ಶಾಂತಿಸುವ್ಯವಸ್ಥೆಗಾಗಿ ಜಿಲ್ಲಾದ್ಯಂತ ಬಂದೋಬಸ್ತ್‌

ಮೊಳೆಗಳನ್ನು ಚೆಲ್ಲಿದ ಕಿಡಿಗೇಡಿಗಳು: ಅನಸೂಯ ಜಯಂತಿಯ ದಿನವಾದ ಮಂಗಳವಾರ ದತ್ತಪೀಠದ ಮಾರ್ಗದ ಮೂರ್ನಾಲ್ಕು ಕಡೆ ತಿರುವುಗಳಲ್ಲಿ ಯಾರೋ ಕಿಡಿಗೇಡಿಗಳು ರಸ್ತೆಗೆ ಮೊಳೆಗಳನ್ನು ಚೆಲ್ಲಿದ್ದು ಆತಂಕ ಮೂಡಿಸಿತು.ಬೈಕ್ನಲ್ಲಿ ಪೀಠಕ್ಕೆ ತೆರಳುತ್ತಿದ್ದ ಕೆಲವು ಭಕ್ತರು ಮೊಳೆಗಳನ್ನು ಗಮನಿಸಿ ಸಂಘಟಕರ ಗಮನಕ್ಕೆ ತಂದರು. ಕೂಡಲೇ ಬಜರಂಗದಳ ಮುಖಂಡ ಶ್ಯಾಂ ವಿ.ಗೌಡ ಇತರರು ಸ್ಥಳಕ್ಕೆ ಧಾವಿಸಿ ಮೊಳೆಗಳನ್ನು ಹೆಕ್ಕಿ ತೆಗೆದರು. ದತ್ತಪೀಠ ಮಾರ್ಗದ ಮುಳ್ಳಯ್ಯನಗಿರಿ ತಿರುವು ಮತ್ತು ಮುಂದೆ ದತ್ತಪೀಠ ಹಾಗೂ ಕೆಮ್ಮಣ್ಣುಗುಂಡಿ ಮಾರ್ಗದ ತಿರುವುಗಳಲ್ಲಿ ಮೊಳೆಗಳನ್ನು ಹಾಕಿರುವುದು ಕಂಡು ಬಂತು.ಈ ಕಿಡಿಗೇಡಿ ಕೃತ್ಯದ ಬಗ್ಗೆ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ವಾಹನಗಳನ್ನು ಅಪಘಾತಕ್ಕೀಡು ಮಾಡಿ ದತ್ತಜಯಂತಿ ಕಾರ್ಯಕ್ರಮಗಳನ್ನು ಅಸ್ತವ್ಯಸ್ತಗೊಳಿಸುವ ಸಂಚು ಇದಾಗಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿಬಂತು.

ಚಿಕ್ಕಮಗಳೂರು: ದತ್ತಜಯಂತಿ ಉತ್ಸವಕ್ಕೆ ಇಂದು ಚಾಲನೆ; ಬಿಗಿ ಪೊಲೀಸ್ ಬಂದೋಬಸ್ತ್

ಶಾಂತಿಗೆ ಭಂಗ ತರುವ ಹುನ್ನಾರ ಸಿ. ಟಿ ರವಿ ಕಿಡಿ: ದತ್ತಪೀಠ ಮಾರ್ಗದಲ್ಲಿ ಮೊಳೆಗಳನ್ನು ಹಾಕಿದ ಕಿಡಿಗೇಡಿ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಿಡಿಗೇಡಿಗಳ ಈ ಬೆದರಿಕೆಗೆ ಜಗ್ಗುವುದಿಲ್ಲ. ಎಲ್ಲಾ ಅಡೆತಡೆಗಳನ್ನೂ ಮೀರಿ ದತ್ತಜಯಂತಿ ಚೆನ್ನಾಗಿ ನಡೆಯುತ್ತದೆ ಎಂದರು.ರಸ್ತೆಗಳಲ್ಲಿ ಮೊಳೆಗಳನ್ನು ಹಾಕಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಕೆಲವರು ಶಾಂತಿಗೆ ಭಂಗ ತರುವ ಹುನ್ನಾರ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದರು.

Follow Us:
Download App:
  • android
  • ios