ಗದಗ: ತುಂಗಭದ್ರಾ ಅಬ್ಬರಕ್ಕೆ ಸಾವಿರಾರು ಹೆಕ್ಟೇರ್ ಬೆಳೆ ಜಲಾವೃತ
1992 ಹಾಗೂ 2008ರಲ್ಲಿ ಬಂದಿದ್ದ ಪ್ರವಾಹಕ್ಕಿಂತಲೂ ನದಿಯ ಒಳಹರಿವು ಹೆಚ್ಚಾಗುತ್ತಿದೆ ಎಂಬ ಭಯ ಗ್ರಾಮಸ್ಥರಲ್ಲಿ ಕಾಡುತ್ತಿದ್ದು, ಮುಳುಗಡೆ ಪ್ರದೇಶದ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ(ಜು.17): ಭದ್ರಾ ಡ್ಯಾಂನಿಂದ 1 ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ತುಂಗಭದ್ರಾ ನದಿ ತೀರದ ವ್ಯಾಪ್ತಿಯ ತಾಲೂಕಿನ ಹೊಳೆಇಟಗಿ ಗ್ರಾಮದಲ್ಲಿರುವ ಸೋಮೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಸಾವಿರಾರು ಹೆಕ್ಟೇರ್ ಬತ್ತ, ಕಬ್ಬು, ಮೆಕ್ಕೆಜೋಳ ಬೆಳೆಗಳು ಜಲಾವೃತಗೊಂಡಿವೆ. 1992 ಹಾಗೂ 2008ರಲ್ಲಿ ಬಂದಿದ್ದ ಪ್ರವಾಹಕ್ಕಿಂತಲೂ ನದಿಯ ಒಳಹರಿವು ಹೆಚ್ಚಾಗುತ್ತಿದೆ ಎಂಬ ಭಯ ಗ್ರಾಮಸ್ಥರಲ್ಲಿ ಕಾಡುತ್ತಿದ್ದು, ಮುಳುಗಡೆ ಪ್ರದೇಶದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಗ್ರಾಮದಿಂದ ಗುತ್ತಲ, ಹಾವೇರಿ, ರಾಣಿಬೆನ್ನೂರ ನಗರಗಳಿಗೆ ಸಂಪರ್ಕ ಕಲ್ಪಿಸುವ ಸೇತುವ ಸಂಪೂರ್ಣ ಮುಳುಗಡೆಯಾಗಿದೆ. ಪ್ರವಾಹದ ಕಾರಣ ಅನೇಕ ಕಡೆಗಳಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಮತ್ತೆ ಕೆಲ ಭಾಗಳಲ್ಲಿ ರಸ್ತೆಗಳು ಬಿರುಕು ಬಿಟ್ಟಿದ್ದು, ಸಂಚಾರಕ್ಕೆ ಅಪಾಯ ತಂದೊಡ್ಡಿದೆ.
ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ
ಶನಿವಾರ ತಹಸೀಲ್ದಾರ ಕಲಗೌಡ ಪಾಟೀಲ, ಕಂದಾಯ ನಿರೀಕ್ಷಕ ಮಹಾಂತೇಶ ಮಗದುಮ, ಗ್ರಾಮ ಲೆಕ್ಕಾಧಿಕಾರಿ ನಾಗರಾಜ ಚೋಳಮ್ಮನವರ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಸ್ಥಳ, ಮನೆ ಹಾಗೂ ನೀರು ನುಗ್ಗಿದ ಜಮೀನುಗಳ ಪ್ರದೇಶಗಳನ್ನು ಪರಿಶೀಲಿಸಿದರು. ನಂತರ ನದಿ ತಟದಲ್ಲಿ ವಾಹನ ತೊಳೆಯುವುದು, ಸುಕಾ ಸುಮ್ಮನೆ ಜನ ಓಡಾಡುತ್ತಿರುವುದನ್ನು ಗಮನಿಸಿದ ತಹಸೀಲ್ದಾರರು ತಂತಿ ಬೇಲಿ ಹಾಕಿಸಿ, ಇತ್ತ ಯಾರು ಬರಕೂಡದು ಎಂದು ಸೂಚನೆ ನೀಡಿದರು.
ಸಿಂಗಟಾಲೂರು ಬ್ಯಾರೇಜಿಂದ 89,000 ಕ್ಯುಸೆಕ್ ನೀರು ಬಿಡುಗಡೆ: ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಶುರು
ಪ್ರವಾಹ ಇದೇ ರೀತಿ ಮುಂದುವರಿದರೆ ನದಿ ಪಾತ್ರದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದರು. ಸಾಸಲವಾಡ ಗ್ರಾಮದಲ್ಲಿಯೂ ಪ್ರವಾಹ ಭೀತಿ ಹೆಚ್ಚಾಗಿದ್ದು, ಅಪಾರ ಪ್ರಮಾಣದ ಬೆಳೆಹಾನಿ ಸಂಭವಿಸಿದೆ. ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಕ್ಷಣ ಕ್ಷಣವೂ ತುಂಗಭದ್ರಾ ಪ್ರವಾಹ ಹೆಚ್ಚುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ. ಭದ್ರಾ ಡ್ಯಾಂನಿಂದ ಹೆಚ್ಚಿನ ಪ್ರಮಾಣದ ನೀರು ಹರಿಬಿಟ್ಟಪರಿಣಾಮ ಗ್ರಾಮದ ಅಂಚಿನಲ್ಲಿರುವ ಹಾಗೂ ತೋಟದ ಮನೆಯಲ್ಲಿರುವ ಜನರಲ್ಲಿ
ಆತಂಕ ಮನೆ ಮಾಡಿದೆ.
ಸಿಂಗಟಾಲೂರು ಬ್ಯಾರೇಜ್‌ನಿಂದ 1.73 ಲಕ್ಷ ಕ್ಯುಸೆಕ್ ನೀರು ನದಿಗೆ
ಮುಂಡರಗಿ: ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡಿನ ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಡರಗಿ ತಾಲೂಕಿನ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಹಮ್ಮಿಗಿ ಹತ್ತಿರವಿರುವ ಸಿಂಗಟಾಲೂರು ಏತನೀರಾವರಿ ಬ್ಯಾರೇಜ…ನ 26 ಗೇಟ್‌ಗಳಲ್ಲಿ ಶನಿವಾರ 21 ಗೇಚ್‌ಗಳನ್ನು ತೆರವುಗೊಳಿಸಲಾಗಿದೆ. ಬ್ಯಾರೇಜಿನಿಂದ ಶನಿವಾರ 1.73,961 ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಬ್ಯಾರೇಜ… ಒಟ್ಟು 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.
ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕರ್ನಾಟಕ ನೀರಾವರಿ ನಿಗಮವು ಜು.15ರಂದು ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮವಾಗಿ ಪ್ರಕಟಣೆ ಹೊರಡಿಸಿದ್ದು, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ದಾಖಲಾಗಿರುವುದರಿಂದ ತುಂಗಭದ್ರಾ ನದಿಗೆ ತುಂಗಾ ಮತ್ತು ಭದ್ರಾ ಜಲಾಶಯದಿಂದ ಸುಮಾರು 1.70 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನದಿ ತೀರಕ್ಕೆ ಪ್ರವಾಸಿಗರು, ಸಾರ್ವಜನಿಕರು ತೆರಳದಂತೆ, ಮೀನುಗಾರರು ನದಿಗೆ ಇಳಿಯದಂತೆ ನಿಗಾವಹಿಸಬೇಕೆಂದು ಎಚ್ಚರಿಸಿದೆ.
ಹಾವೇರಿ: ತುಂಗಭದ್ರಾ, ವರದೆಯ ಅಬ್ಬರ: ಹೆಚ್ಚಿದ ಪ್ರವಾಹ, ಪರದಾಡಿದ ಗರ್ಭಿಣಿ
ನೀರು ಇನ್ನೂ ಹೆಚ್ಚಿನ ಪ್ರದೇಶದಲ್ಲಿ ಬಂದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಿಂದ ಮುಳುಗಡೆಯಾಗಲಿರುವ ಗುಮ್ಮಗೋಳ, ಬಿದರಹಳ್ಳಿ, ವಿಠಲಾಪೂರ ಗ್ರಾಮಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆಗಳು ಹೆಚ್ಚಿದೆ. ಈ ಗ್ರಾಮಗಳ ಜನತೆ ಯಾವಾಗ ನೀರು ಹೆಚ್ಚಾಗುತ್ತದೆಯೋ, ಯಾವಾಗ ಊರಲ್ಲಿ ನುಗ್ಗುತ್ತದೆ ಎನ್ನುವ ಭಯದಲ್ಲಿ ಕಾಲ ಕಳೆಯುವಂತಾಗಿದೆ.
ನದಿಗೆ ಬಂದಷ್ಟು ನೀರನ್ನು ನಿತ್ಯವೂ ಹೊರಗಡೆ ಬಿಡುತ್ತಿರುವುದರಿಂದ ನದಿಯಲ್ಲಿನ ನೀರು ಯಥಾಸ್ಥಿತಿಯಲ್ಲಿ ಇರುತ್ತದೆ. ಇದೀಗ ಯಾವುದೇ ಗ್ರಾಮಗಳಿಗೆ ನೀರು ನುಗ್ಗಿರುವ ಬಗ್ಗೆ ತಿಳಿದು ಬಂದಿಲ್ಲ. ಈಗಾಗಲೇ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಒಂದಿಷ್ಟುಕಡಿಮೆಯಾಗಿದ್ದು, ಅಲ್ಲದೇ ಆ ಭಾಗಗಳಲ್ಲಿನ ನದಿಗಳಲ್ಲಿ ನೀರಿನ ಪ್ರಮಾಣವೂ ಸಹ ಒಂದಿಷ್ಟುತಗ್ಗಿರುವುದರಿಂದ ನಾಳೆ, ನಾಡಿದ್ದು ಇಲ್ಲಿಯೂ ಸಹ ನೀರು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.