ಬೆಂಗಳೂರು(ಫೆ.07): ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ವಂಚಿತರು ಮುನಿಸಿಕೊಳ್ಳುವ ಅಗತ್ಯ ಇಲ್ಲ. ಯಾರಿಗೆ, ಯಾವ ಸಂದರ್ಭದಲ್ಲಿ ಯಾವ ಸ್ಥಾನ ನೀಡಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಬಳಿಕ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಸ್ಥಾನ ವಂಚಿತರು ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ. ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರವನ್ನೇ ಕೈಗೊಂಡು ವರಿಷ್ಠರು ಯಾರಿಗೆ, ಯಾವ ಸ್ಥಾನ ನೀಡಬೇಕೋ ಅದನ್ನು ನೀಡುತ್ತಾರೆ. ಪಕ್ಷದಲ್ಲಿ ಸಂಪುಟ ವಿಸ್ತರಣೆ ಕುರಿತು ಯಾರಿಗೂ ಯಾವುದೇ ರೀತಿಯ ಬೇಸರ ಇಲ್ಲ. ಸ್ಥಾನಮಾನಕ್ಕೆ ಆಸೆ ಪಡೆಯುವುದು ತಪ್ಪಲ್ಲ. ಸಮಯ ಬರುವವರೆಗೆ ಕಾಯಬೇಕು. ರಾಜಕಾರಣದಲ್ಲಿ ಸಹನೆ ಮುಖ್ಯ ಎಂದು ಹೇಳಿದರು.

ಮಂತ್ರಿಮಂಡಲ ವಿಸ್ತರಣೆ ರಾಜ್ಯದ ಕರಾಳ ದಿನ: ಉಗ್ರಪ್ಪ

ಸಚಿವ ಸಂಪುಟದಲ್ಲಿ 34 ಮಂದಿಗೆ ಮಾತ್ರ ಅವಕಾಶ ಇದೆ. ಇನ್ನು ಆರು ಸ್ಥಾನಗಳು ಖಾಲಿ ಇದ್ದು, ಯಾರಿಗೆ, ಯಾವ ಸ್ಥಾನ ಕೊಡಬೇಕೆಂಬುದರ ಕುರಿತು ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಅವಕಾಶ ತಪ್ಪಿದಾಗ ಬೇಸರಗೊಳ್ಳುವುದು ಸಹಜ. ಇದನ್ನು ಮುಖ್ಯಮಂತ್ರಿಗಳು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದರು.

ಆಟೋ ಮಿನಿಮಮ್ ಚಾರ್ಜ್‌ ಹೆಚ್ಚಳ, ಮೀಟರ್ ಕಡ್ಡಾಯ

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದವರ ತ್ಯಾಗವನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ಹೀಗಾಗಿ ಅವರಿಗೆ ಸಂಪುಟದಲ್ಲಿ ಮೊದಲ ಆದ್ಯತೆ ನೀಡಲಾಗಿದೆ. ಸಚಿವ ಸಂಪುಟ ವಿಸ್ತರಣೆ ಗೊಂದಲಗಳು ಮುಗಿದಿದ್ದು, ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸುವುದು ನಮ್ಮ ಮುಂದಿನ ಸವಾಲಾಗಿದೆ. ನೂತನ ಸಚಿವರು ಸಹ ಇದಕ್ಕೆ ಸ್ಪಂದಿಸುವ ವಿಶ್ವಾಸ ಇದೆ ಎಂದು ಉಪಮುಖ್ಯಮಂತ್ರಿ ತಿಳಿಸಿದರು.