Asianet Suvarna News Asianet Suvarna News

 ದರ್ಶನ್ ನನ್ನ ಮಾತು ಕೇಳಿದ್ದರೆ ಹೀಗಾಗುತ್ತಿರಲಿಲ್ಲ: ಇಂದ್ರಜಿತ್ 

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರದ ನಂತರ ಹಾಡುಗಳಲ್ಲೇ ಕತೆ ಹೇಳುವ ಪ್ರಯತ್ನವನ್ನು ಗೌರಿ ಸಿನಿಮಾದಲ್ಲಿ ಮಾಡಲಾಗಿದೆ ಎಂದು ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.

This would not have happened if Darshan had listened to me: Indrajit snr
Author
First Published Jun 19, 2024, 10:59 AM IST

  ಮಂಡ್ಯ :  ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರದ ನಂತರ ಹಾಡುಗಳಲ್ಲೇ ಕತೆ ಹೇಳುವ ಪ್ರಯತ್ನವನ್ನು ಗೌರಿ ಸಿನಿಮಾದಲ್ಲಿ ಮಾಡಲಾಗಿದೆ ಎಂದು ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.

ಯುವ ಪ್ರತಿಭೆಗಳಾದ ಸಮರ್ಜಿತ್ ಲಂಕೇಶ್ ಮತ್ತು ಸಾನ್ಯ ಅಯ್ಯರ್ ಅಭಿನಯದಲ್ಲಿ ಗೌರಿ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲೂ ಎಲ್ಲರ ಮೆಚ್ಚುಗೆ ಗಳಿಸಿದೆ. ಹಾಡುಗಳ ಮೂಲಕ ಕತೆ ಹೇಳುವುದು ಸುಲಭವಲ್ಲ. ಗೌರಿ ಸಿನಿಮಾದಲ್ಲಿ ೮ ಹಾಡುಗಳಿವೆ. ಜೆಸ್ಸಿಗಿಫ್ಟ್, ಚಂದನ್‌ಶೆಟ್ಟಿ, ಶಿವುಭೇರ್ಗಿ ಹಾಗೂ ಅನಿರುದ್ಧ್ ಶಾಸ್ತ್ರಿ ಎಂಬ ನಾಲ್ವರು ಸಂಗೀತ ನಿರ್ದೇಶಕರು ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಬರೆದಿರುವ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾನೇ ಗೀತ ಸಾಹಿತಿಗಳೊಂದಿಗೆ ಕುಳಿತು ಪ್ರತಿಯೊಂದು ವಿವರವನ್ನು ಹೇಳಿಹಾಡುಗಳನ್ನು ಬರೆಸಿದ್ದೇನೆ. ಈ ಕಾರಣದಿಂದಲೇ ಬಿಡುಗಡೆಯಾಗಿರುವ ಮೊದಲ ಹಾಡಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ ಇಂದ್ರಜಿತ್, ಬಹು ತಾರಾಗಣವಿರುವ ಈ ಚಿತ್ರ ನೈಜ ಘಟನೆಯನ್ನು ಆಧರಿಸಿದೆ. ಈಗಾಗಲೇ ೧೦೦ ದಿನಗಳ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ ಎಂದು ವಿವರಿಸಿದರು.

ನನ್ನ ಅಕ್ಕ ಗೌರಿ ಮೇಲಿನ ಅಭಿಮಾನದಿಂದ ಸಿನಿಮಾಕ್ಕೆ ಈ ಹೆಸರನ್ನು ಇಡಲಾಗಿದೆ. ಇದರಲ್ಲಿ ಗೌರಿಯ ಸೂಕ್ಷ್ಮ ಅಂಶಗಳನ್ನು ಅಳವಡಿಸಿದ್ದೇವೆಯೇ ಹೊರತು ಅವರ ಜೀವನ ಚರಿತ್ರೆ ಚಿತ್ರವಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೌರಿ ಚಿತ್ರದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದೆ. ಅನುಭವಿ ನಟರು ಸಹ ಚಿತ್ರದಲ್ಲಿ ನಟಿಸಿದ್ದಾರೆ. ಸುಮಾರು ೮೦ಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದು, ಮಂಡ್ಯ ಜಿಲ್ಲೆಯ ಪ್ರತಿಭೆಯೊಬ್ಬನನ್ನು ಚಿತ್ರದಲ್ಲಿ ಪರಿಚಯಿಸಲಾಗಿದ್ದು, ಆತನೇ ಚಿತ್ರದ ಸ್ಫೂರ್ತಿಯಾಗಿದ್ದಾನೆ. ಮುಂದಿನ ದಿನಗಳಲ್ಲಿ ಅವನಿಗೆ ಒಳ್ಳೆಯ ಭವಿಷ್ಯವಿದೆ. ಇದನ್ನು ಚಿತ್ರ ಬಿಡುಗಡೆಯಾದ ಮೇಲೆಯೇ ತಿಳಿಸುತ್ತೇನೆ ಎಂದರು.

 ಬರಹಗಾರರಿಗೆ ಬೆಲೆ ಇಲ್ಲ:  

ಕನ್ನಡ ಚಿತ್ರರಂಗದಲ್ಲಿ ಕತೆಗಾರರನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ. ಸರಿಯಾದ ಸಂಭಾವನೆಯನ್ನೂ ನೀಡುತ್ತಿಲ್ಲ. ೩೦ ರಿಂದ ೪೦ ಸಾವಿರ ರು. ಸಂಭಾವನೆ ನೀಡಿ ಮೂರ್ನಾಲ್ಕು ತಿಂಗಳುಗಳ ಕಾಲ ಕೊಠಡಿಯಲ್ಲಿ ಕುಳಿತು ಕಥೆ ಬರೆಸುವಂತಹ ಪರಿಪಾಠ ಬೆಳೆದುಬಂದಿದೆ. ಇದರಿಂದಾಗಿ ಚಿತ್ರಗಳು ನೆಲಕಚ್ಚುತ್ತಿವೆ. ಮೊದಲು ಬರಹಗಾರರು, ಕಥೆಗಾರರಿಗೆ ಹೆಚ್ಚಿನ ಸಂಭಾವನೆ ನೀಡಬೇಕು. ಗೌರವದಿಂದ ನಡೆಸಿಕೊಳ್ಳಬೇಕು. ಆಗ ಗಟ್ಟಿಯಾದ ಕಥೆಗಳು ಹೊರಹೊಮ್ಮಿ, ಚಿತ್ರರಂಗ ಉಳಿಯುವುದಕ್ಕೆ ಸಾಧ್ಯವಾಗಲಿದೆ ಎಂದು ಹೇಳಿದರು.

 ದರ ಹೆಚ್ಚಳ ಕಾರಣ:  

ಇತ್ತೀಚಿನ ಚಿತ್ರಗಳು ದೊಡ್ಡ ಬಜೆಟ್ ಚಿತ್ರಗಳಾಗಿರುವುದರಿಂದ ಚಿತ್ರಮಂದಿರದ ಟಿಕೆಟ್ ದರವೂ ಹೆಚ್ಚಳವಾಗಿದೆ. ೨೦೦ ರು. ರಿಂದ ೪೦೦ ರು. ಕೊಟ್ಟು ಚಿತ್ರಗಳನ್ನು ನೋಡಲು ಯಾರೂ ಬರುವುದಿಲ್ಲ. ೩೦ ರು.ನಿಂದ ೫೦ ರು. ಇದ್ದಾಗ ಬಡ ಹಾಗೂ ಮಧ್ಯಮವರ್ಗದವರು ತಿಂಗಳಿಗೆ ಎರಡು-ಮೂರು ಸಿನಿಮಾಗಳನ್ನು ನೋಡುತ್ತಿದ್ದರು. ಆದರೆ, ಈಗ ದುಬಾರಿ ಹಣ ತೆತ್ತು ಒಂದು ಸಿನಿಮಾ ನೋಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

 ದರ್ಶನ್ ನನ್ನ ಮಾತು ಕೇಳಿದ್ದರೆ ಹೀಗಾಗುತ್ತಿರಲಿಲ್ಲ: ಇಂದ್ರಜಿತ್ 

ಎರಡು-ಮೂರು ವರ್ಷದ ಹಿಂದೆಯೇ ಜನಪ್ರಿಯ ನಟನಾಗಿ ನಡವಳಿಕೆಯಲ್ಲಿ ಸುಧಾರಣೆಯನ್ನು ತಂದುಕೊಳ್ಳುವಂತೆ ದರ್ಶನ್‌ಗೆ ಸಲಹೆ ನೀಡಿದ್ದೆ. ಅಂದು ನನ್ನ ಮಾತು ಕೇಳಿದ್ದರೆ ಹೀಗಾಗುತ್ತಿರಲಿಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.

ನಾನು ನಿರ್ದೇಶಿಸಿದ ಮೊನಲಿಸಾ ಮತ್ತು ಲಂಕೇಶ್ ಪತ್ರಿಕೆ ಸಿನಿಮಾಗಳಲ್ಲಿ ದರ್ಶನ್ ನಟಿಸಿದ್ದರು. ದರ್ಶನ್ ಕಷ್ಟದ ದಾರಿಯಲ್ಲಿ ಬಂದಿದ್ದಾನೆ. ಲಂಕೇಶ್ ಪತ್ರಿಕೆ ಸಿನಿಮಾ ವೇಳೆ ನಾನು ಕೊಟ್ಟ ಹಣದಿಂದ ಸ್ಕೋಡಾ ಕಾರು ಖರೀದಿಸಿದ್ದರು. ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳುವಂತೆ ಅಂದೇ ತಿಳಿಸಿದ್ದೆ. ಆದರೆ, ಅವರು ನನ್ನ ಮಾತನ್ನು ಕೇಳಲಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಿಜವಾಗಿ ಆ ಕುಟುಂಬಕ್ಕೆ, ಇನ್ನೂ ಜನ್ಮ ತಾಳದ ಮಗುವಿಗೆ ನ್ಯಾಯ ಸಿಗಬೇಕು. ನ್ಯಾಯದ ಮೇಲೆ ಜನರಿಗೆ ನಂಬಿಕೆ ಬರಬೇಕಾದರೆ ಈ ಪ್ರಕರಣದಲ್ಲಿ ಒಳ್ಳೆಯ ನ್ಯಾಯ ಸಿಗಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ಆರ್ಥಿಕ ನೆರವು ಸಿಗುವಂತಾಗಬೇಕು ಎಂದು ಹೇಳಿದರು.

ಚಿತ್ರೋಧ್ಯಮ ಶೋವೊಂದನ್ನು ನಡೆಸುವ ಮೂಲಕ ಹಣ ಸಂಗ್ರಹಿಸಿ ಆ ಕುಟುಂಬಕ್ಕೆ ನೀಡಬೇಕು. ಇನ್ನೂ ಹುಟ್ಟದ ಮಗುವಿನ ಭವಿಷ್ಯಕ್ಕಾಗಿ ಇದು ಅತ್ಯವಶ್ಯಕವಾಗಿದೆ. ನಾನು ವೈಯಕ್ತಿಕವಾಗಿ ೨೦ ಸಾವಿರ ರು. ನೆರವು ನೀಡುತ್ತೇನೆ ಎಂದರಲ್ಲದೆ, ಯಾವುದೇ ಕಲಾವಿದರನ್ನು ಬ್ಯಾನ್ ಮಾಡಬಾರದು. ಈ ಹಿಂದೆ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳ ಮೇಲೆ ಬ್ಯಾನ್ ಪ್ರಯೋಗ ನಡೆದಿದೆ ಅದು ತಪ್ಪು ಎಂದು ಉತ್ತರಿಸಿದರು.

 ಸಾಮಾಜಿಕ ಜಾಲತಾಣಗಳ ಕಡಿವಾಣ ಅಗತ್ಯ  

ಪತ್ರಿಕೆ ನಡೆಸಬೇಕಾದರೆ ಅದರದ್ದೇ ಆದ ನೀತಿ-ನಿಯಮಗಳಿವೆ. ಆದರೆ ಸಾಮಾಜಿಕ ಜಾಲತಾಣಗಳಿಗೆ ಯಾವುದೇ ಕಡಿವಾಣವೂ ಇಲ್ಲ. ಪತ್ರಿಕೆಗಳಲ್ಲಿ ಅವಮಾನವಾಗುಂತಹ ಸುದ್ಧಿಗಳನ್ನು ಪ್ರಕಟಿಸಿದರೆ ಮಾನನಷ್ಟ ಪ್ರಕರಣ ದಾಖಲಿಸಬಹುದು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕ್ರಮ ಇಲ್ಲ. ಇದರಿಂದಾಗಿ ಏನೆಲ್ಲಾ ತಪ್ಪುಗಳು ನಡೆಯುತ್ತಿವೆ ಎಂಬುದನ್ನು ಈಗಾಗಲೇ ನೋಡಿದ್ದೇವೆ. ಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಏನೆಲ್ಲಾ ಅನಾಹುತಗಳೂ ಆಗಿವೆ. ಇದಕ್ಕೆ ಕಡಿವಾಣ ಅಗತ್ಯ ಎಂದು ಒತ್ತಾಯಿಸಿದರು. ಸೈಬರ್ ಕ್ರೈಮ್‌ಗೆ ಶಕ್ತಿ ನೀಡಬೇಕು. ಅದಕ್ಕೆ ಒತ್ತು ನೀಡಿ ದೂರು ಬಂದ ತಕ್ಷಣ ಸ್ಪಂದಿಸಿ ಅಂತಹವನ್ನು ಕಾನೂನು ಶಿಕ್ಷೆಗೆ ಒಳಪಡಿಸಬೇಕು. ಹಾಗಾದಾಗ ಮಾತ್ರ ಸ್ವಲ್ಪ ಮಟ್ಟಿಗೆ ಇಂತಹ ಘಟನೆಗಳನ್ನು ತಡೆಹಿಡಿಯಲು ಸಾಧ್ಯ ಎಂದು ಅಭಿಪ್ರಾಯಿಸಿದರು.

Latest Videos
Follow Us:
Download App:
  • android
  • ios