ಮೈಸೂರು ಹಾಲು ಒಕ್ಕೂಟದಿಂದ ದಾಹ ತಣಿಸಲು ರಾಗಿ ಅಂಬಲಿ, ಬಯೋಟಿಕ್ ಮಜ್ಜಿಗೆ, ಮೊಸರು
ಹಿಂದೆಂದೂ ಕಂಡರಿಯದ ಮೈಸೂರು ಬಿಸಿಲಿನ ತಾಪವು 41 ಡಿಗ್ರಿಯನ್ನೂ ಮೀರಿ ಕಾವೇರುತ್ತಿರುವ ಈ ಹೊತ್ತಿನಲ್ಲಿ ಜನರ ಬಿಸಿಲಿನ ದಾಹ ತಣಿಸಲು ಮೈಸೂರು ಹಾಲು ಉತ್ಪಾದಕರ ಒಕ್ಕೂಟವು ಶುದ್ಧ ಆರೋಗ್ಯಕರ ರಾಗಿ ಅಂಬಲಿ, ರೋಗ ನಿವಾರಕ ಮಜ್ಜಿಗೆ ಹಾಗೂ ಮೊಸರನ್ನು ಮಾರುಕಟ್ಟೆಗೆ ನೀಡಿವೆ.
ಮೈಸೂರು : ಹಿಂದೆಂದೂ ಕಂಡರಿಯದ ಮೈಸೂರು ಬಿಸಿಲಿನ ತಾಪವು 41 ಡಿಗ್ರಿಯನ್ನೂ ಮೀರಿ ಕಾವೇರುತ್ತಿರುವ ಈ ಹೊತ್ತಿನಲ್ಲಿ ಜನರ ಬಿಸಿಲಿನ ದಾಹ ತಣಿಸಲು ಮೈಸೂರು ಹಾಲು ಉತ್ಪಾದಕರ ಒಕ್ಕೂಟವು ಶುದ್ಧ ಆರೋಗ್ಯಕರ ರಾಗಿ ಅಂಬಲಿ, ರೋಗ ನಿವಾರಕ ಮಜ್ಜಿಗೆ ಹಾಗೂ ಮೊಸರನ್ನು ಮಾರುಕಟ್ಟೆಗೆ ನೀಡಿವೆ.
ಹೌದು ಬರೋಬ್ಬರಿ ಮೈಸೂರಿನ ಬನ್ನೂರು ಮುಖ್ಯರಸ್ತೆಯಲ್ಲಿರುವ ಮೈಸೂರು ಹಾಲು ಉತ್ಪಾದಕರ ಒಕ್ಕೂಟವು ಈಗಾಗಲೇ ಹಾಲು, ಮೊಸರು, ಬೆಣ್ಣೆ, ತುಪ್ಪ, ಪೇಡಾ, ಬರ್ಫಿ, ಮೈಸೂರು ಪಾಕ್, ಪನ್ನೀರ್, ಗೋಧಿ, ಲಡ್ಡು ಸೇರಿ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ಈಗಾಗಲೇ ಗ್ರಾಹಕರಿಗೆ ನೀಡಿವೆ. ಇದೇ ಮೊದಲ ಬಾರಿಗೆ ರೈತರು ಹಾಗೂ ತನ್ನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು 163ನೇ ಉತ್ಪನ್ನವಾಗಿ ರಾಗಿ ಅಂಬಲಿ, ಶಕ್ತಿ ವರ್ಧಕ ಮಜ್ಜಿಗೆ ಹಾಗೂ ಪ್ರೊಬಯೋಟಿಕ್ಸ್ ಮೊಸರನ್ನು ತಯಾರು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಔಷಧೀಯ ಅಂಶಗಳನ್ನು ಒಳಗೊಂಡ ಮೂರು ಉತ್ಪನ್ನಗಳಾದ ರಾಗಿ ಅಂಬಲಿ, ಬಯೋಟಿಕ್ ಮಜ್ಜಿಗೆ, ಮೊಸರನ್ನು ಪರಿಚಯಿಸಿದ್ದೇವೆ. ಪ್ರಾಥಮಿಕ ಪ್ರಾಯೋಗಿಕವಾಗಿ 10 ರು. ಮೌಲ್ಯದ 200 ಎಂಎಲ್ ಪ್ಯಾಕೆಟ್ ಅನ್ನು ಮಾರುಕಟ್ಟೆಗೆ ನೀಡಲಾಗಿದೆ. ಮೈಸೂರು ನಗರದ 209 ಪಾರ್ಲರ್, 1,200 ಎಜೆಂಟ್ ಪಾಯಿಂಟ್ ಸೇರಿ ಸಾವಿರಾರು ಬೇಕರಿ, ಅಂಗಡಿಗಳ ಮೂಲಕ ನಿತ್ಯ ಸಾವಿರ ಲೀಟರ್ ಉತ್ಪನ್ನಗಳ ಮಾರಾಟ ಮಾಡುತ್ತಿದ್ದು, ಜನತೆ ಬೇಡಿಕೆಗೆ ಅನುಸಾರವಾಗಿ ಉತ್ಪನ್ನ ತಯಾರಿಸಿ ವಿತರಿಸಲಾಗುವುದು.
- ಬಿ.ಎನ್. ವಿಜಯಕುಮಾರ್, ವ್ಯವಸ್ಥಾಪಕ ನಿರ್ದೇಶಕ, ಮೈಮುಲ್.
ಈಗಾಗಲೇ ನೂತನ ಪ್ರಾಡೆಕ್ಟ್ ಗಳನ್ನು ಎಲ್ಲೆಡೆ ವಿತರಿಸಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ. ರಾಗಿ ಅಂಬಲಿ ಎಂಬುದು ಮುದ್ದೆಯ ಹೊಸ ರೂಪವಾಗಿದ್ದು, ಈಗಿನ ಟ್ರೇಂಡ್ಗೂ ಜನತೆ ಮೆಚ್ಚಲಿದ್ದಾರೆ. ಅದರಲ್ಲೂ ಹಿರಿಯ ಹಾಗೂ ಕಿರಿಯರೆನ್ನದೇ ಎಲ್ಲಾ ವಯೋಮಾನದವರು ಸೇವಿಸಬಹುದಾದ ಈ ಮೂರು ಉತ್ಪನ್ನಗಳ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಅದರ ಪೂರೈಕೆಗೂ ಮೈಮುಲ್ ಸಿದ್ಧವಾಗಿದೆ.
- ಜಯಶಂಕರ್, ಮಾರುಕಟ್ಟೆ ವ್ಯವಸ್ಥಾಪಕ, ಮೈಮುಲ್
ಸಭೆ, ಸಮಾವೇಶ, ಮದುವೆಗಳಲ್ಲೂ ಬಳಸಲಿ
ಇನ್ನೂ ಪ್ರಸ್ತುತ ಬೇಸಿಗೆ ನಡುವೆಯೂ ಸಭೆ, ಸಮಾರಂಭ, ಸಮಾವೇಶದಂತಹ ರಾಜಕೀಯ ಕಾರ್ಯಕ್ರಮಗಳ ಜತೆಗೆ ಮದುವೆ, ಶಾಸ್ತ್ರ, ಹಬ್ಬ ಅರಿದಿನಗಳಲ್ಲಿಯೂ ರಾಗಿ ಅಂಬಲಿ, ಬಯೋಟಿಕ್ ಮೊಸರು ಹಾಗೂ ಮಜ್ಜಿಗೆಯನ್ನು ವಿತರಿಸುವ ಮೂಲಕ ರೈತರ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲಿ ಎಂಬುದೇ ಎಲ್ಲರ ಆಶಯವಾಗಿದೆ.