Asianet Suvarna News Asianet Suvarna News

ಬೀಗ ಹಾಕಿದ್ರೂ ಸೇಫ್ ಅಲ್ಲ ಮನೆ: ಹಾಡಹಗಲೇ ದರೋಡೆ

ಮನೆಯ ಬೀಗ ಒಡೆದು ಹಾಡಹಗಲೇ ಚಿನ್ನ, ನಗದು ದೋಚಿರುವ ಘಟನೆ ಚಾಮರಾಜನಗರದ ಹನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳ್ಳರು ಬೀರುವಿನಲ್ಲಿದ್ದ 82 ಸಾವಿರ ಹಣ, ಮತ್ತು ವಿವಿಧ ಬಗೆಯ 30 ಗ್ರಾಂ. ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

Thieves broke the house Lock steal Jewellery Money
Author
Bangalore, First Published Jul 18, 2019, 8:47 AM IST

ಚಾಮರಾಜನಗರ(ಜು.18): ಹಾಡ ಹಗಲೇ ಜನನಿಬಿಡ ಪ್ರದೇಶದಲ್ಲಿ ಮನೆಯ ಬೀಗ ಹೊಡೆದು ನಗದು ಹಾಗೂ ಚಿನ್ನಾಭರಣವನ್ನು ದೋಚಿರುವ ಘಟನೆ ಹನೂರು ಸಮೀಪದ ಕಾಮಗೆರೆ ಗ್ರಾಮದಲ್ಲಿ ನಡೆದಿದೆ. ಹನೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಮಗೆರೆ ಗ್ರಾಮದ ಮರಳು ಹೊಲದ ಬೀದಿಯ ನಿವಾಸಿ ಚಿಕ್ಕತಾಯಮ್ಮ ಎಂಬುವರ ಮನೆಗೆ ಕನ್ನ ಹಾಕಿರುವ ಖದೀಮರು ಮನೆಯ ಬೀರುವಿನಲ್ಲಿದ್ದ 82 ಸಾವಿರ ಹಣ, ಮತ್ತು ವಿವಿಧ ಬಗೆಯ 30 ಗ್ರಾಂ. ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಬೆಳಗ್ಗೆ ಕೂಲಿ ಕೆಲಸಕ್ಕೆ ಹೋಗಿದ್ದ ಚಿಕ್ಕತಾಯಮ್ಮ ಸಂಜೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ತಿಳಿದಿದೆ.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹನೂರು ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಮೋಹಿತ್‌ ಸಹದೇವ್‌ ಹಾಗೂ ಪಿಎಸ್‌ಐ ನಾಗೇಶ್‌ ಮತ್ತು ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಈ ಸಂಬಂಧ ಶ್ವಾನದಳ ಹಾಗೂ ಬೆರಳಚ್ಚು ತಜ್ಞರಿಂದ ತಪಾಸಣೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಹನೂರು ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನಗೆ ದಿಕ್ಕು ತೋಚದಂತಾಗಿದೆ:

ಅನಾರೋಗ್ಯಕ್ಕೀಡಾಗಿ ಗಂಡ ಮೃತಪಟ್ಟಹಿನ್ನೆಲೆಯಲ್ಲಿ ಸರ್ಕಾರದಿಂದ ನೀಡಲಾಗಿದ್ದ ಹಣವನ್ನು ಚಿಕ್ಕತಾಯಮ್ಮ ಬ್ಯಾಂಕ್‌ನಲ್ಲಿಟ್ಟಿದ್ದರು. ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲು 80 ಸಾವಿರ ಹಣವನ್ನು ಬ್ಯಾಂಕ್‌ನಿಂದ ತೆಗೆದು ಬಂದು ಮನೆಯಲ್ಲಿ ಇಟ್ಟಿದ್ದರು. ವಿಕಲಚೇತನ ಮಗನ ಮಾಸಾಶನದ 2 ಸಾವಿರ ಹಣವನ್ನು ಅದರ ಜೊತೆ ಇಟ್ಟಿದ್ದರು.

ಕಳ್ಳರ ಹೆಡಮುರಿ ಕಟ್ಟುವುದು ಯಾವಾಗ?

ಕೆಲವು ದಿನಗಳ ಈ ಹಿಂದೆ ಹಾಡಹಗಲೇ ಗ್ರಾಮದ ಮನೆಯೊಂದಕ್ಕೆ ಕನ್ನ ಹಾಕಿ 20 ಸಾವಿರ ರು. ಹಣ, ಮತ್ತು ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದರು. ಇಂತಹ ಹತ್ತು ಹಲವು ಘಟನೆಗಳು ಕಾಮಗೆರೆ ಗ್ರಾಮದಲ್ಲಿ ನಡೆದಿದ್ದು, ಎರಡು ಮೂರು ಪ್ರಕರಣಗಳು ಪೊಲೀಸರ ಗಮನಕ್ಕೆ ಬಂದಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜನತೆ ಆತಂಕದಲ್ಲಿ ಬದುಕುವಂತಾಗಿದ್ದು, ಪೊಲೀಸರು ಖದೀಮರ ಹೆಡಮುರಿ ಕಟ್ಟುವುದು ಯಾವಾಗ ಎಂದು ಜನತೆ ಎದುರು ನೋಡುತ್ತಿದ್ದಾರೆ.

ಡೀಸೆಲ್ ಕಳ್ಳತನ ತಡೆಗೆ ಡಿಜಿಟಲ್ ಲಾಕಿಂಗ್

Follow Us:
Download App:
  • android
  • ios