ಬೆಂಗಳೂರು (ಜು.05) : ಡೀಸೆಲ್ ಕಳ್ಳತನ ತಡೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಿಗೆ ಡೀಸೆಲ್ ಪೂರೈಕೆ ಮಾಡುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್(ಬಿಪಿಸಿಎಲ್) ಟ್ಯಾಂಕರ್‌ಗಳಿಗೆ ‘ಡಿಜಿಟೆಲ್ ಲಾಕಿಂಗ್ ಸಿಸ್ಟಂ’ ವ್ಯವಸ್ಥೆ ಅಳವಡಿಸಿಕೊಂಡಿದೆ.

ಜಿಪಿಎಸ್ ಆಧಾರಿತ ಲಾಕಿಂಗ್ ವ್ಯವಸ್ಥೆ ಇದಾಗಿದ್ದು, ಬಿಪಿಸಿಎಲ್‌ನಲ್ಲಿ ಡೀಸೆಲ್ ತುಂಬಿದ ಬಳಿಕ ಟ್ಯಾಂಕರ್ ನಿಗಮದ ಘಟಕ ತಲುಪುವವರೆಗೂ ಮುಚ್ಚಳ ತೆರೆಯಲು ಸಾಧ್ಯವಾಗುವುದಿಲ್ಲ. ಟ್ಯಾಂಕರ್ ಘಟಕ ತಲುಪಿದ ಬಳಿಕ ಒನ್ ಟೈಂ ಪಾಸ್ ವರ್ಡ್ (ಒಟಿಪಿ) ಹಾಕಿದ ಬಳಿಕವೇ ಮುಚ್ಚಳ ತೆರೆದುಕೊಳ್ಳಲಿದೆ. ಈ ವ್ಯವಸ್ಥೆ ಅಳಡಿಕೆಯಿಂದ ಡೀಸೆಲ್ ಸಾಗಿಸುವ ಹಂತದಲ್ಲಿ ಆಗುತ್ತಿದ್ದ ಕಳ್ಳತನ, ದುರ್ಬಳಕೆ ತಪ್ಪಲಿದೆ. ಈ ವ್ಯವಸ್ಥೆ ಅಳವಡಿಸಿಕೊಂಡ ದೇಶದ ಮೊದಲ ಸಾರಿಗೆ ನಿಗಮ ಎಂಬ ಹೆಗ್ಗಳಿಕೆಗೆ ಕೆಎಸ್‌ಆರ್‌ಟಿಸಿ ಪಾತ್ರವಾಗಿದೆ.

ಗುರುವಾರ ಕೆಎಸ್‌ಆರ್‌ಟಿಸಿಯ ನಗರದ ಕೇಂದ್ರೀಯ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಡಿಜಿಟೆಲ್ ಲಾಕಿಂಗ್ ಸಿಸ್ಟಂ ಅಳವಡಿಕೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ, ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿರುವ ಕೆಎಸ್‌ಆರ್‌ಟಿಸಿ, ಡೀಸೆಲ್ ಪೂರೈಕೆ ಟ್ಯಾಂಕರ್‌ಗಳಿಗೆ ಡಿಜಿಟೆಲ್ ಲಾಕಿಂಗ್ ಸಿಸ್ಟಂ ಅಳವಡಿಸುವ ಮೂಲಕ ಮತ್ತೊಂದು ಪ್ರಥಮಕ್ಕೆ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಪಿಸಿಎಲ್‌ನ ಪ್ರಾದೇಶಿಕ ವ್ಯವಸ್ಥಾಪಕ ಮೇಜರ್ ಶಂಕರ್ ಕರಜಗಿ, ಕೆಎಸ್‌ಆರ್‌ಟಿಸಿ ಮುಖ್ಯ ಯಾಂತ್ರಿಕ ಅಭಿಯಂತರ ಡಾ.ಕೆ.ರಾಮಮೂರ್ತಿ, ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ ಶಿವಾನಂದ ಕವಳಿಕಾಯಿ ಮತ್ತಿತರರು ಉಪಸ್ಥಿತರಿದ್ದರು.